ಬಿರುಸಿನ ಮಳೆಗೆ ತತ್ತರಿಸಿದ ಮೈಸೂರು: ಕುಟುಂಬಸ್ಥರ ಎದುರೇ ನೀರುಪಾಲಾದ ವ್ಯಕ್ತಿ

Update: 2021-10-25 08:07 GMT

ಮೈಸೂರು, ಅ.25: ಮೈಸೂರಿನಲ್ಲಿ ಕಳೆದ ರಾತ್ರಿ ಸುರಿದ ಬಿರುಸಿನ ಮಳೆಗೆ ಜನತೆ ತತ್ತರಿಸಿದ್ದಾರೆ. ಮಳೆಯಬ್ಬರಕ್ಕೆ ಓರ್ವ ಕೊಚ್ಚಿಹೋಗಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ.

ರವಿವಾರ ತಡ ರಾತ್ರಿ ಸುರಿದ ಭಾರೀ ಮಳೆಗೆ ನಗರದ ಸಿದ್ಧಾರ್ಥ ನಗರದ ನಿವಾಸಿ ಎಂ.ಚಂದ್ರೇಗೌಡ(60) ಎಂಬವರು  ಮನೆಯವರ ಕಣ್ಣೆದುರಿಗೆ ಮೋರಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.

ಸಿದ್ಧಾರ್ಥ ನಗರದ ವಿನಯ ಮಾರ್ಗದಲ್ಲಿ ಮಳೆಯ ಆರ್ಭಟಕ್ಕೆ ಮನೆಯ ಮುಂದಿನ ಮೋರಿ ತುಂಬಿ ಹರಿಯುತ್ತಿತ್ತು. ಇದನ್ನು ನೋಡಲು ಹೋದ ಚಂದ್ರೇಗೌಡ ಆಕಸ್ಮಿಕವಾಗಿ ಕಾಲು ಜಾರಿ ಮೋರಿಯೊಳಕ್ಕೆ ಬಿದ್ದಿದ್ದಾರೆ. ಕುಟುಂಬಸ್ಥರು ಕೂಗಿಕೊಂಡು ಓಡಿ ಬರುವಷ್ಟರಲ್ಲಿ ನೀರಿನ ರಭಸಕ್ಕೆ ಅವರು ಕೊಚ್ಚಿಹೋಗಿದ್ದಾರೆ ಎಂದು ತಿಳಿದುಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರಾದರೂ ನೀರಿನಲ್ಲಿ ಕೊಚ್ಚಿಹೋಗಿರುವ ವ್ಯಕ್ತಿಯ ಸುಳಿವು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಮೈಸೂರಿನ ಕಾರಂಜಿ  ಕೆರೆಗೆ ಈ ಸಂಪರ್ಕ ಕಲ್ಪಿಸುವ ಕಾಲುವೆ ಇದು ಎಂದು ಹೇಳಲಾಗುತ್ತಿದೆ.

ಮತ್ತೊಂದೆಡೆ ರಿಂಗ್ ರಸ್ತೆಯಲ್ಲಿರುವ ತಪ್ಪಯ್ಯನ ಕೆರೆ ತುಂಬಿದ ಪರಿಣಾಮ ಪೊಲೀಸ್ ಲೇಔಟ್ ನ ಬಹುತೇಕ ವಸತಿ ಪ್ರದೇಶಗಳು ಜಲಾವೃತಗೊಂಡಿವೆ. ಹಾಗೆ ಹಾಗೆ ಪಂಚಗವಿ ಮಠ ಸಹ ಕುಸಿದು ಬಿದ್ದಿದ್ದು ಮಳೆಗೆ ಮೈಸೂರು ನಗರ ನಲುಗಿಹೋಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News