ಬಿಜೆಪಿಯಿಂದ ಬಂಜಾರ ಸಮುದಾಯದ ದಾರಿ ತಪ್ಪಿಸುವ ಪ್ರಯತ್ನ: ಸಿದ್ದರಾಮಯ್ಯ

Update: 2021-10-25 09:32 GMT

ಸಿಂದಗಿ, ಅ.25: ಬಂಜಾರ ಸಮುದಾಯವರು ಹಿಂದಿನಿಂದಲೂ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ನಿಂತವರು. ಆದರೆ ಇತ್ತೀಚೆಗೆ ಬಿಜೆಪಿಯವರು ಈ ಸಮಾಜದ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕಾರಣದಿಂದ ಇಂದು ಸಮಾವೇಶ ನಡೆಸಿ, ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸಿಂದಗಿಯಲ್ಲಿ ಇಂದು ಆಯೋಜಿಸಿದ್ದ ಬಂಜಾರ ಸಮುದಾಯದ ಸಮಾವೇಶದಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಅವರ ಪರ  ಮತಯಾಚನೆ ನಡೆಸಿದರು.

 ದೇವರಾಜ ಅರಸು ಅವರ ಸರ್ಕಾರದಲ್ಲಿ ಕೆ.ಪಿ.ರಾಥೋಡ್ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಬಂಜಾರ ಸಮುದಾಯ ಮೀಸಲಾತಿ ಪಟ್ಟಿಯಲ್ಲಿ ಸಾಮಾನ್ಯ ವರ್ಗದಲ್ಲಿತ್ತು. ಇವರನ್ನು ಹಿಂದುಳಿದ ಜಾತಿಗೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದವರು ಅರಸು ಮತ್ತು ರಾಥೋಡ್ ಅವರು. ಈ ಎಸ್.ಸಿ ಮೀಸಲಾತಿ ದೊರೆತ ಕಾರಣಕ್ಕೆ ಇಂದು ಬಂಜಾರ ಸಮುದಾಯ ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಂದೆಬರಲು ಸಾಧ್ಯವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

2013 ರಲ್ಲಿ ಬಸವ ಜಯಂತಿಯಂದು ನಾನು ಅಧಿಕಾರ ಸ್ವೀಕಾರ ಮಾಡಿದೆ. ಬಸವಣ್ಣನವರ ಸಾಮಾಜಿಕ ಸಮಾನತೆಯ ಕನಸನ್ನು ನನಸು ಮಾಡಬೇಕೆಂದು ನನ್ನ ಐದು ವರ್ಷಗಳ ಆಡಳಿತದುದ್ದಕ್ಕೂ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ. ಅಧಿಕಾರ ವಹಿಸಿಕೊಂಡ ಮರು ಘಳಿಗೆಯಲ್ಲೇ ಸಂಪುಟ ಸಭೆ ಕರೆದು ಎಲ್ಲಾ ಜಾತಿ ಧರ್ಮಗಳ ಬಡವರಿಗೆ ಉಚಿತವಾಗಿ ಅಕ್ಕಿ ನೀಡುವ ಅನ್ನಭಾಗ್ಯ ಕಾರ್ಯಕ್ರಮವನ್ನು ಘೋಷಣೆ ಮಾಡಿದೆ. ಇದರಿಂದ ಉದ್ಯೋಗ ಅರಸಿ ಹೊಟ್ಟೆಪಾಡಿಗಾಗಿ ಗುಳೆ ಹೋಗುತ್ತಿದ್ದ ಬಂಜಾರ ಸಮಾಜದ ಜನರು ತಮ್ಮ ಊರುಗಳಲ್ಲೇ ನೆಲೆ ಕಂಡುಕೊಳ್ಳಲು ಸಾಧ್ಯವಾಯಿತು. ಆದರೆ ಈಗಿನ ಬಿಜೆಪಿ ಸರ್ಕಾರ ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು 5 ಕೆ.ಜಿ ಗೆ ಇಳಿಸಿ ನೀವು ತಿನ್ನುವ ಅನ್ನ ಕಸಿದಿದೆ. 2023 ರಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬಂದಮೇಲೆ ಪ್ರತಿ ಬಡವರಿಗೆ ಹತ್ತು ಕೆ.ಜಿ ಅಕ್ಕಿಯನ್ನು ಕೊಡುತ್ತೇವೆ ಎಂದು ಭರವಸೆ ನೀಡಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಬಂಜಾರ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಲ್ಲಿದ್ದ ಬಡವರ ಸಾಲವನ್ನು ಮನ್ನಾ ಮಾಡಿದ್ದೆ, ಕ್ಷೀರಧಾರೆ ಯೋಜನೆಯಡಿ ಹೈನುಗಾರರಿಗೆ ಪ್ರತೀ ಲೀಟರ್ ಹಾಲಿಗೆ  5 ರೂಪಾಯಿ ಪ್ರೋತ್ಸಾಹ ಧನ ನೀಡಿದ್ದೆ. ಬಿಜೆಪಿ ಸರಕಾರ ಬಾಕಿ ಹಣ ಪಾವತಿಸದ ಕಾರಣಕ್ಕೆ ಭಾಗ್ಯಜ್ಯೋತಿ ವಿದ್ಯುತ್ ಸಂಪರ್ಕಗಳನ್ನು ಕಡಿತ ಮಾಡಿತ್ತು, 2013 ರಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆ ಈ ಬಾಕಿ ಹಣವನ್ನು ಮನ್ನಾ ಮಾಡಿ, ಕತ್ತಲೆಯಾಗಿದ್ದ ಮನೆಗಳಿಗೆ ಬೆಳಕು ನೀಡಿದ್ದೆವು ಎಂದರು.

ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಭೀಮಾ ನಾಯಕ್ ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು. ಆಗ ನಾವು ವಾರ್ಷಿಕ 200 ಕೋಟಿ ರೂಪಾಯಿಗಳನ್ನು ಸಮಾಜದ ಅಭಿವೃದ್ಧಿಗೆ ನೀಡಿದ್ದೆ. ಬಿಜೆಪಿ ಸರ್ಕಾರ ಈ ಅನುದಾನವನ್ನು ಹತ್ತು ಕೋಟಿಗೆ ಇಳಿಕೆ ಮಾಡಿದೆ. ಸಂತ ಸೇವಾಲಾಲ್ ಅವರ ಜಯಂತಿಯನ್ನು ಸರ್ಕಾರಿ ಜಯಂತಿಯಾಗಿ ಆಚರಣೆ ಮಾಡಬೇಕು ಎಂದು ಆದೇಶ ಹೊರಡಿಸಿದ್ದು ನಮ್ಮ ಸರ್ಕಾರ.  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಐದು ವರ್ಷಗಳಲ್ಲಿ ನಮ್ಮ ಸರ್ಕಾರ 84,000 ಕೋಟಿ ರೂಪಾಯಿ ಖರ್ಚು ಮಾಡಿತ್ತು. ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆಯಾಗುವಂತೆ ಎಸ್.ಸಿ.ಪಿ / ಟಿ.ಎಸ್.ಪಿ ಕಾಯ್ದೆ ಜಾರಿಗೊಳಿಸಿದ್ದು ನಮ್ಮ ಸರ್ಕಾರ.

ತಾಂಡಗಳು, ಹಟ್ಟಿಗಳು, ಮಜರೆಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕ್ರಾಂತಿಕಾರಕ ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯಿದೆಯನ್ನು ಜಾರಿಗೊಳಿಸಿ, ಲಕ್ಷಾಂತರ ಜನರಿಗೆ ಭೂಮಿಯ ಒಡೆತನದ ಹಕ್ಕು ನೀಡಿದ್ದು ನಮ್ಮ ಸರ್ಕಾರ ಎಂದು ಸಿದ್ದರಾಮಯ್ಯ ನುಡಿದರು.

ನಾವು ಮತ್ತೆ ಅಧಿಕಾರಕ್ಕೆ ಬಂದಮೇಲೆ ಬಂಜಾರ ಸಮುದಾಯದ ಕುಲಕಸುಬಾದ ಕಸೂತಿ ವೃತ್ತಿಯನ್ನು ಅಭಿವೃದ್ಧಿ ಪಡಿಸಲು 100 ಕೋಟಿ ಅನುದಾನ ನೀಡುತ್ತೇವೆ. ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಅವರಿಗೆ ತಮ್ಮ ಮತ ನೀಡುವ ಮೂಲಕ ಗೆಲ್ಲಿಸಿ ಕೊಡಬೇಕು ಎಂದು ಕೈಮುಗಿದು ಮನವಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News