ಕ್ರಿಶ್ಚಿಯನ್ ಮಿಷನರಿಗಳ ಸಮೀಕ್ಷೆ ಪ್ರಶ್ನಿಸಿ ಅರ್ಜಿ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2021-10-25 13:00 GMT
File Photo: PTI

ಬೆಂಗಳೂರು: ರಾಜ್ಯದಲ್ಲಿ ಚರ್ಚ್‍ಗಳ ಮತ್ತು ಕ್ರಿಶ್ಚಿಯನ್ ಮಿಷನರಿಗಳ ಕಾರ್ಯವೈಖರಿಯನ್ನು ಸಮೀಕ್ಷೆ ನಡೆಸುವಂತೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ನಿರ್ದೇಶನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಈ ಕುರಿತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್(ಪಿಯುಸಿಎಲ್) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಮೂರು ವಾರದಲ್ಲಿ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದೆ.   

ಅರ್ಜಿದಾರರ ಪರ ವಾದಿಸಿದ ಮಾಜಿ ಅಡ್ವೊಕೇಟ್ ಜನರಲ್, ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಅವರು, ರಾಜ್ಯದಲ್ಲಿನ ಚರ್ಚ್‍ಗಳ ಸಮೀಕ್ಷೆಯಿಂದ ಖಾಸಗಿತನದ ಹಕ್ಕು ಉಲ್ಲಂಘನೆಯಾಗಲಿದೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಸರಕಾರ ಅಭಿವೃದ್ಧಿ ಕಾರ್ಯಕ್ಕಾಗಿ ಅಂಕಿ ಅಂಶ ಸಂಗ್ರಹಿಸೋದಕ್ಕೆ ಸರ್ವೇ ನಡೆಸಲಾಗುತ್ತಿದೆ ಎಂದು ಹೇಳಿದೆ. ಇದರಿಂದ, ಅಲ್ಪಸಂಖ್ಯಾತರ ಯಾವ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ಅರ್ಜಿದಾರರಿಗೆ ಪ್ರಶ್ನಿಸಿತು.

ಈ ವೇಳೆ ಅರ್ಜಿದಾರರ ಪರ ವಕೀಲರು, ಶಾಸಕರೊಬ್ಬರ ಮನವಿಯಂತೆ ಅಂಕಿ ಅಂಶಗಳನ್ನು ಸಂಗ್ರಹಿಸಲಾಗುತ್ತಿದೆ. ಅಲ್ಲದೇ, ಮತಾಂತರದ ಕಾರಣ ನೀಡಿ ಸರ್ವೇ ಮಾಡಲಾಗುತ್ತಿದೆ. ಇದರಿಂದ, ಖಾಸಗಿತನದ ಹಕ್ಕು ಉಲ್ಲಂಘನೆಯಾಗಲಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. 

ವಕೀಲರ ವಾದ ಆಲಿಸಿದ ನ್ಯಾಯಪೀಠವು ಚರ್ಚ್‍ಗಳ ಸರ್ವೇ ಆದೇಶಕ್ಕೆ ಸದ್ಯಕ್ಕೆ ತಡೆ ಇಲ್ಲ ಎಂದು ಅಭಿಪ್ರಾಯಪಟ್ಟು, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲು 3 ವಾರಗಳ ಕಾಲಾವಕಾಶ ನೀಡಿದೆ.

ಜು.7ರಂದು, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರಾಜ್ಯದ 1,700 ಚರ್ಚ್‍ಗಳು ಮತ್ತು ಪ್ರಾರ್ಥನಾ ಮಂದಿರಗಳಲ್ಲಿ ಎಷ್ಟು ಕಾನೂನುಬದ್ಧವಾಗಿದೆ ಮತ್ತು ಅವುಗಳ ಚಟುವಟಿಕೆಗಳನ್ನು ಪರಿಶೀಲಿಸಲು ಸಮೀಕ್ಷೆಯನ್ನು ನಡೆಸಲು ಜಿಲ್ಲಾ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿತು.

ಅರ್ಜಿಯಲ್ಲಿ ಏನಿದೆ: ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್, ತನ್ನ ಅರ್ಜಿಯಲ್ಲಿ, ಈ ಆದೇಶವು ತಾರತಮ್ಯ ಮತ್ತು ಭಾರತೀಯ ಸಂವಿಧಾನದ ಉಲ್ಲಂಘನೆ ಎಂದು ಹೇಳಿದೆ. ಚರ್ಚ್‍ಗಳ ಸ್ಥಳ, ಖಾತಾ ಸಂಖ್ಯೆ, ಚರ್ಚ್ ಪಾದ್ರಿಯ ವಿವರಗಳಿಗೆ ಸಂಬಂಧಿಸಿದ ಡೇಟಾವನ್ನು ಸಂಗ್ರಹಿಸಲು ಯಾವುದೇ ಕಾರಣಗಳನ್ನು ಅಥವಾ ಉದ್ದೇಶವನ್ನು ಸರಕಾರ ಹೇಳಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News