ಚಿಕ್ಕಮಗಳೂರು: ನಗುಮೊಗದೊಂದಿಗೆ ಶಾಲೆಗೆ ಬಂದ ಚಿಣ್ಣರು

Update: 2021-10-25 14:22 GMT

ಚಿಕ್ಕಮಗಳೂರು: ಒಂದರಿಂದ ಐದನೇ ತರಗತಿಗಳ ಆರಂಭಕ್ಕೆ ರಾಜ್ಯ ಸರಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಸುಮಾರು 2 ವರ್ಷಗಳ ಬಳಿಕ ಸೋಮವಾರ ಕಾಫಿನಾಡಿನ ಸರಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳತ್ತ ಚಿಣ್ಣರು ನಗುಮೊಗದಿಂದಲೇ ಹೆಜ್ಜೆ ಹಾಕಿದರು. ಪುಟಾಣಿ ಮಕ್ಕಳ ಸ್ವಾಗತಕ್ಕಾಗಿ ಶಾಲೆಗಳನ್ನು ಸಿಂಗರಿಸಿಕೊಂಡಿದ್ದ ಶಿಕ್ಷಕರು ಮಕ್ಕಳ ಮೇಲೆ ಪುಷ್ಪವೃಷ್ಟಿ ಸುರಿಸಿ, ಹೂಗುಚ್ಛ ನೀಡಿ ಸ್ವಾಗತಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

ಕೊರೋನ ಸೋಂಕಿನ ಕಾರಣಕ್ಕೆ ಸರಕಾರಗಳು ಕಳೆದ ಎರಡು ವರ್ಷಗಳಿಂದ ಶಾಲಾ ಕಾಲೇಜುಗಳನ್ನು ಬಂದ್ ಮಾಡಿದ್ದು, ಇತ್ತೀಚೆಗೆ ಸೋಂಕಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಪದವಿ, ಪಿಯುಸಿ ಹಾಗೂ 6ರಿಂದ 10ನೇ ತರಗತಿಗಳನ್ನು ಹಂತ ಹಂತವಾಗಿ ಆರಂಭಿಸಿತ್ತು. ಆದರೆ ಮೂರನೇ ಅಲೆಯ ಭೀತಿ ಕಾರಣಕ್ಕೆ 1ರಿಂದ 5ನೇ ತರಗತಿಗಳ ಆರಂಭಕ್ಕೆ ಸರಕಾರ ಆಸಕ್ತಿ ತೋರಿರಲಿಲ್ಲ. ಆದರೆ ಶಿಕ್ಷಣ ತಜ್ಞರ ವರದಿ ಮೇರೆಗೆ ರಾಜ್ಯ ಸರಕಾರ ಸುಮಾರು 2 ವರ್ಷಗಳ ಬಳಿಕ 1ರಿಂದ 5ನೇ ತರಗತಿಗಳ ಆರಂಭಕ್ಕೆ ಆದೇಶಿಸಿದ್ದು, ಅ.25ರಿಂದ ಶಾಲೆಗಳ ಪುನಾರಂಭಕ್ಕೆ ಸಿದ್ಧತೆ ನಡೆಸಿತ್ತು. ಅದರಂತೆ ಸೋಮವಾರ ಬೆಳಗ್ಗೆ 1ರಿಂದ 5ನೇ ತರಗತಿಗಳು ಜಿಲ್ಲಾದ್ಯಂತ ಬಾಗಿಲು ತೆರದಿದ್ದು, ಚಿಣ್ಣರು ಶಾಲಾ ಪುಸ್ತಕಗಳೊಂದಿಗೆ ತರಗತಿಗಳಿಗೆ ಹಾಜರಾಗಿದ್ದು, ಶೇ.60ರಷ್ಟು ಮಕ್ಕಳು ಸೋಮವಾರ ಶಾಲೆಗಳಿಗೆ ಹಾಜರಾಗಿದ್ದರು.

ವಿದ್ಯಾರ್ಥಿಗಳು ಎರಡು ವರ್ಷಗಳ ಬಳಿಕ ಶಾಲೆಗೆ ಬರುತ್ತಿದ್ದ ಹಿನ್ನೆಲೆಯಲ್ಲಿ ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕೃತಗೊಳಿಸಲಾಗಿತ್ತು. ವಿದ್ಯಾರ್ಥಿಗಳು ಬರುವುದನ್ನೇ ಕಾತುರದಿಂದ ಕಾಯುತ್ತಿದ್ದ ಶಿಕ್ಷಕರು ಮಕ್ಕಳು ಬರುತ್ತಿದ್ದಂತೆ ಅವರಿಗೆ ಆರತಿ ಎತ್ತಿ, ಹೂ ನೀಡಿ, ವಿದ್ಯಾರ್ಥಿಗಳ ಮೇಲೆ ಪುಷ್ಪಾವೃಷ್ಟಿ ಮಾಡುವ ಮೂಲಕ ಸಂಭ್ರಮದಿಂದಲೇ ಸ್ವಾಗತಿಸಿದರು.

ಜಿಲ್ಲೆಯ ಬೀರೂರು, ಚಿಕ್ಕಮಗಳೂರು, ಕಡೂರು, ಕೊಪ್ಪ, ಮೂಡಿಗೆರೆ, ನರಸಿಂಹರಾ ಜಪುರ, ಶೃಂಗೇರಿ ಮತ್ತು ತರೀಕೆರೆ ಶೈಕ್ಷಣಿಕ ವಲಯಗಳಲ್ಲಿ 1ರಿಂದ 5ನೇ ತರಗತಿವರೆಗೆ 724 ಶಾಲೆ ಹಾಗೂ 606 ಹಿರಿಯ ಪ್ರಾಥಮಿಕ ಶಾಲೆಗಳಿದ್ದು ಶೇ.70ರಷ್ಟು ವಿದ್ಯಾರ್ಥಿಗಳು ಮೊದಲ ದಿನ ಶಾಲೆಗೆ ಹಾಜರಾಗಿದ್ದರು. ಈ ತಿಂಗಳ ಅಂತ್ಯದವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ವರೆಗೆ ಅರ್ಧದಿನ ಶಾಲೆಗಳು ನಡೆಯುತ್ತಿರುವುದರಿಂದ ಮಧ್ಯಾಹ್ನದ ಬಿಸಿಯೂಟ ನೀಡುತ್ತಿಲ್ಲ, ನ.1ರಿಂದ ಪೂರ್ಣಾವಧಿ ಶಾಲೆ ಆರಂಭಗೊಳ್ಳಲಿದ್ದು, ಅಂದಿನಿಂದ ಬಿಸಿಯೂಟ ಆರಂಭಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಶಾಲೆಗೆ ಬರುವ ಹಿನ್ನೆಲೆಯಲ್ಲಿ ಶಾಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಪ್ರತೀ ಶನಿವಾರ ಮತ್ತು ರವಿವಾರ ಶಾಲಾಕೊಠಡಿಯನ್ನು ಸ್ಯಾನಿಟೈಸ್ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಬೇಕು. 50ವರ್ಷ ಮೇಲ್ಪಟ್ಟ ಶಿಕ್ಷಕರು ಮುಖಗವಸು ಧರಿಸಿ ಶಾಲೆಗೆ ಬರುವಂತೆ ಸೂಚಿಸಲಾಗಿದೆ.

ಮೊದಲನೇ ದಿನವೇ ಶೇ.70ರಷ್ಟು ಹಾಜರಾತಿ ಕಂಡುಬಂದಿದೆ. ಸರಕಾರ ಮಾರ್ಗಸೂಚಿಗಳನ್ನು ಪಾಲಿಸುವುದರೊಂದಿಗೆ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲಾಗಿದೆ. ಮಕ್ಕಳು ಖುಷಿಯಿಂದ ಶಾಲೆಗೆ ಬಂದು ಮನೆಗೆ ಮರಳಿದ್ದಾರೆ. ಶಾಲೆಯತ್ತ ಮುಖ ಮಾಡದ ಮಕ್ಕಳು, ಪೋಷಕರ ಮನವೊಲಿಸಿ ಶೇ.100ರಷ್ಟು ಮಕ್ಕಳ ಹಾಜರಾತಿಗೆ ಶ್ರಮಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ವಿ.ಮಲ್ಲೇಶಪ್ಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News