ನನ್ಮನ್ನು ಟೀಕಿಸಿದರೆ ಕಾಂಗ್ರೆಸ್ ಗೆ ಬರುವ ಮತಗಳೂ ಬರುವುದಿಲ್ಲ: ಸಿಎಂ ಬೊಮ್ಮಾಯಿ

Update: 2021-10-25 16:54 GMT
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (File Photo)

ಹಾನಗಲ್: ನನ್ನನ್ನು ಬಯ್ಯುವದನ್ನೇ ಕಾಂಗ್ರೆಸ್ ಉದ್ಯೋಗವಾಗಿಸಿಕೊಂಡಿದೆ. ಉಪ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರಕ್ಕೆ ಕಾಂಗ್ರೆಸ್ ಏನು ಕೊಡುಗೆ ನೀಡಿದೆ ಎಂಬುದನ್ನು ಹೇಳುವುದಿಲ್ಲ. ಬದಲಿಗೆ ನನ್ನನ್ನು ಬೈಯ್ಯುತ್ತಾರೆ. ಆದರೆ ಅವರಿಗೆ ಗೊತ್ತಿಲ್ಲ, ನನ್ನನ್ನು ಬಯ್ಯುವುದರಿಂದ ಅವರಿಗೆ ಬರುವ ಮತಗಳೂ ಬರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

ಅವರು ಇಂದು ಹಾನಗಲ್ ವಿಧಾನಸಭೆ ಕ್ಷೇತ್ರದ  ಹಳೆಶೀಗಿಹಳ್ಳಿಯಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿಯ ಅಭಿವೃದ್ಧಿಪರ ಚಿಂತನೆ ಹಾಗೂ ಕಾರ್ಯಗಳಿಂದ ಸಮಾಜದಲ್ಲಿ ಸಾಮಾಜಿಕ ಸಮೀಕರಣವಾಗಿದೆ. ಕಾಂಗ್ರೆಸ್ ತರಹ ಜಾತಿ ಒಡೆದು ಮಾತನಾಡುವುದಾಗಲಿ, ಸುಮುದಾಯಗಳನ್ನು ಚುನಾವಣಾ ಕಾರಣಕ್ಕೆ ಬಳಕೆ ಮಾಡಿಕೊಳ್ಳುವುದಾಗಲಿ ಚುನಾವಣಾ ನಂತರದಲ್ಲಿ ಕಡೆಗಣಿಸುವುದಾಗಲಿ ನಮಗೆ ತಿಳಿದಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿ ಅಭಿವೃದ್ಧಿ ಹೊಂದಬೇಕು, ಯೋಜನೆಗಳು ಫಲಾನುಭವಿಗಳಿಗೆ ತಲುಪಬೇಕು ಎನ್ನುವುದು ನಮ್ಮ ಆಶಯ ಎಂದು ಅವರು ಹೇಳಿದರು.

ಹಾನಗಲ್ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಯಾವಾಗಲೂ ಪ್ರಶ್ನೆ ಮಾಡುತ್ತಾರೆ. ಅವರಿಗೆ ಹಳೆಶೀಗೆಹಳ್ಳಿಗೆ ಒಮ್ಮೆ ಕರೆದುಕೊಂಡು ಬನ್ನಿ ಇಲ್ಲಿನ ರಸ್ತೆಗಳನ್ನು ತೋರಿಸಿ, ಅಭಿವೃದ್ಧಿ ಅಂದರೆ ಏನು ಎನ್ನುವುದನ್ನು ಕಾಂಗ್ರೆಸ್ ನೋಡಲಿ ಎಂದು ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್ ಪಕ್ಷದ ಮೇಲೆ ಟೀಕಾ ಪ್ರಹಾರ ಮುಂದುವರೆಸಿ ಮಾತನಾಡಿದ ಅವರು, ಸಿದ್ದಾರಾಮಯ್ಯ ಅವರಿಗೆ ಅಭಿವೃದ್ಧಿಯಾಗಲಿ ಭೂಮಿಯಾಗಲಿ ಕಾಣುವುದಿಲ್ಲ, ನಮ್ಮ ರೈತರು ಕೊಡಗೈ ದಾನಿಗಳು ನಮ್ಮ ಕೈಗಳು ಯಾವಾಗಲೂ ಭೂಮಿ ನೋಡುತ್ತವೆ ಆಕಾಶವನ್ನಲ್ಲ ಎಂದು ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News