ಶಿಕ್ಷಕರಿಲ್ಲದ ಶಾಲೆಗಳು

Update: 2021-10-26 07:39 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೋವಿಡ್‌ನಿಂದಾಗಿ ಕಳೆದ ಸುಮಾರು ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ರಾಜ್ಯದ ಸರಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಶಾಲೆಗಳಲ್ಲಿನ 1ರಿಂದ 5ನೇ ಶಾಲಾತರಗತಿಗಳು ಸೋಮವಾರ ಆರಂಭವಾಗಿವೆ. ಬರೋಬ್ಬರಿ ಒಂದೂವರೆ ವರ್ಷದ ನಂತರ ಶಾಲೆಗೆ ಕಾಲಿಡುವ ಮಕ್ಕಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಭ್ರಮದಿಂದ ಸ್ವಾಗತಿಸಿದೆ. ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರ ಸಮ್ಮತಿ ಪತ್ರವನ್ನು ಕಡ್ಡಾಯವಾಗಿ ತರಬೇಕು ಹಾಗೂ ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದ ಶಿಕ್ಷಕರು ಮಾತ್ರ ಪಾಠ ಮಾಡಬೇಕು ಎಂಬುದು ಸೇರಿದಂತೆ ಹಲವಾರು ಕರಾರುಗಳನ್ನು ಹಾಕಲಾಗಿದೆ. ಕೋವಿಡ್ ಮೂರನೇ ಅಲೆಯ ಅಪಾಯ ಸದ್ಯಕ್ಕೆ ಎದುರಾಗಿಲ್ಲವಾದರೂ ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡುವಂತಿಲ್ಲ. ಅಂತಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡ ಕ್ರಮಗಳು ಸೂಕ್ತವಾಗಿವೆ. ಆದರೆ ಸರಕಾರಿ ಶಾಲೆಗಳ ಪರಿಸ್ಥಿತಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಉತ್ತೇಜನಾಕಾರಿಯಾಗಿಲ್ಲ. ರಾಜ್ಯದ ಸುಮಾರು 3,351 ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ ಯಾಕೆ ಭರ್ತಿ ಮಾಡಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ ಸರಕಾರದ ಬಳಿ ಸೂಕ್ತ ಉತ್ತರವಿಲ್ಲ. ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರಕಾರಕ್ಕೆ ಆಸಕ್ತಿ ಇಲ್ಲವೇ ಅಥವಾ ನೇಮಕ ಮಾಡಿಕೊಳ್ಳುವ ಶಿಕ್ಷಕರಿಗೆ ಸಂಬಳ ಕೊಡಲು ಖಜಾನೆಯಲ್ಲಿ ಹಣವಿಲ್ಲವೇ ಎಂಬುದಕ್ಕೆ ನಿರ್ದಿಷ್ಟ ಉತ್ತರದ ಅಗತ್ಯವಿದೆ.

 ಸರಕಾರಿ ಶಾಲೆಗಳಲ್ಲಿ ಸುಮಾರು 20 ಸಾವಿರ ಶಿಕ್ಷಕರ ಕೊರತೆ ಇದೆ ಎಂಬುದನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಒಪ್ಪಿಕೊಂಡಿದ್ದಾರೆ. ಶೀಘ್ರವೇ 5 ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳುವ ಭರವಸೆಯನ್ನು ನೀಡಿದ್ದಾರೆ.ಸಚಿವರ ಹೇಳಿಕೆ ಸಂಪೂರ್ಣ ತೃಪ್ತಿದಾಯಕವಲ್ಲ. ಇಪ್ಪತ್ತು ಸಾವಿರ ಶಿಕ್ಷಕರ ಕೊರತೆ ಇರುವಾಗ ಕೇವಲ ಐದು ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಾಗಿ ಅವರು ನೀಡಿರುವ ಭರವಸೆ ಕಣ್ಣೊರೆಸುವ ತಂತ್ರ ಎಂಬ ಭಾವನೆ ಸಹಜವಾಗಿ ಬರುತ್ತದೆ. ಹಿಂದಿನ ಶಿಕ್ಷಣ ಸಚಿವರೂ ಹೀಗೇ ಭರವಸೆ ನೀಡಿದ್ದರು. ಭರವಸೆ ಈಡೇರಿಸಲಾಗದಿರುವುದಕ್ಕೆ ಕೋವಿಡ್ ನೆಪ ಹೇಳಿದರೆ ಜನ ನಂಬುವುದಿಲ್ಲ.

ಏಕೋಪಾಧ್ಯಾಯ ಶಾಲೆಗಳಲ್ಲಿ ಎಲ್ಲ ತರಗತಿಗಳಿಗೆ ಪಾಠ ಮಾಡುವುದರಿಂದ ಹಿಡಿದು ಎಲ್ಲ ಕಾರ್ಯವನ್ನು ಒಬ್ಬರೇ ಶಿಕ್ಷಕರು ನಿರ್ವಹಿಸಬೇಕಾಗುತ್ತದೆ. ಹೀಗಾಗಿ ಇಂತಹ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಕುಸಿಯುತ್ತದೆ. ಹೆಚ್ಚಿನ ಏಕ ಶಿಕ್ಷಕ ಶಾಲೆಗಳಲ್ಲಿ ಇರುವುದು 1ರಿಂದ 5ನೇ ತರಗತಿ.ಕೆಲ ಶಾಲೆಗಳಲ್ಲಿ ಏಳನೇ ತರಗತಿಯವರೆಗೂ ಒಬ್ಬರೇ ಶಿಕ್ಷಕರು ಪಾಠ ಮಾಡುವ ಅನಿವಾರ್ಯತೆ ಇದೆ.

ಬಹುತೇಕ ಏಕೋಪಾಧ್ಯಾಯ ಶಾಲೆಗಳಲ್ಲಿ ಮುಖ್ಯ ಶಿಕ್ಷಕರೂ ಇವರೇ ಆಗಿರುತ್ತಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಜೊತೆಗೆ ವಿದ್ಯಾರ್ಥಿಗಳ ದಾಖಲಾತಿಗಳನ್ನು ನೋಡಿಕೊಳ್ಳಬೇಕು. ಇಷ್ಟೇ ಅಲ್ಲ, ಮಧ್ಯಾಹ್ನದ ಬಿಸಿಯೂಟದ ಯೋಜನೆ, ಬಿಸಿ ಹಾಲು ವಿತರಣೆ ಮುಂತಾದ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಇನ್ನು ಮೇಲಧಿಕಾರಿಗಳು ಕರೆಯುವ ಶೈಕ್ಷಣಿಕ ಹಾಗೂ ಆಡಳಿತಕ್ಕೆ ಸಂಬಂಧಿಸಿದ ಸಭೆ, ಸಮಾರಂಭಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲೇಬೇಕು. ವಿಧ ವಿಧದ ಶೈಕ್ಷಣಿಕ ತರಬೇತಿಗಳಲ್ಲೂ ಭಾಗವಹಿಸಬೇಕು. ಎಂತಹದ್ದೇ ತುರ್ತು ಖಾಸಗಿ ಸಮಸ್ಯೆ ಇದ್ದರೂ ರಜೆ ಸಿಗುವುದಿಲ್ಲ. ರಜೆ ಬೇಕೆಂದಾದರೆ ಹತ್ತಿರದ ಶಾಲೆಯ ಶಿಕ್ಷಕರಿಗೆ ಹೊಣೆ ಹೊರಿಸಿ ಹೋಗಬೇಕು. ಹತ್ತಿರದ ಶಾಲೆಯ ಶಿಕ್ಷಕರು ಜವಾಬ್ದಾರಿ ತೆಗೆದುಕೊಳ್ಳಲು ನಿರಾಕರಿಸಿದರೆ ಇಕ್ಕಟ್ಟಿನ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ ಹಳ್ಳಿಗಾಡಿನ ಶಾಲೆಗಳಲ್ಲಿ ಕಂಪ್ಯೂಟರ್ ಹಾಗೂ ಇಂಟರ್‌ನೆಟ್ ಸೇರಿದಂತೆ ಯಾವುದೇ ಸೌಲಭ್ಯ ಇರುವುದಿಲ್ಲ. ಹೀಗಾಗಿ ತಂತ್ರಜ್ಞಾನದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಲು ತಾಲೂಕು ಕೇಂದ್ರ ಅಥವಾ ಬ್ಲಾಕ್ ಶಿಕ್ಷಣಾಧಿಕಾರಿಗಳ ಕಚೇರಿಗೆ ಎಡತಾಕಬೇಕು. ಇಂತಹ ಸಮಸ್ಯೆಗಳಿಂದ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಮಾಡಲು ಆಗುವುದಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರ ಪರಿಸ್ಥಿತಿ ಶೋಚನೀಯವಾಗಿದೆ.

ಯಾವುದೇ ಶಾಲೆಯಲ್ಲಿ ಹತ್ತಕ್ಕಿಂತ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿದ್ದರೆ ಅಂತಹ ಶಾಲೆಗಳನ್ನು ಏಕೋಪಾಧ್ಯಾಯ ಶಾಲೆಗಳೆಂದು ಘೋಷಿಸಲಾಗಿದೆ. ಆದರೆ ಮಕ್ಕಳು ಎಷ್ಟೇ ಇದ್ದರೂ ಬೇರೆ ಬೇರೆ ತರಗತಿಯವರು ಇರುವುದರಿಂದ ಆಯಾ ತರಗತಿಗಳಿಗೆ ತಪ್ಪದೇ ಪಾಠ ಮಾಡಬೇಕಾಗುತ್ತದೆ. ಒಂದು ತರಗತಿಗೆ ಕನಿಷ್ಠ ಐದು ವಿಷಯಗಳಿರುತ್ತವೆ. ಇವುಗಳನ್ನೆಲ್ಲ ಒಬ್ಬರೇ ಶಿಕ್ಷಕರು ನಿಭಾಯಿಸಬೇಕೆಂದರೆ ಅದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಲು ದಿನದ 24 ತಾಸುಗಳು ಸಾಕಾಗುವುದಿಲ್ಲ. ಯಾವುದೇ ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಪಾಠ ಮಾಡಲು ಸಾಧ್ಯವಾಗುವುದಿಲ್ಲ. ನಿಗದಿತ ಕಾಲಾವಧಿಯಲ್ಲಿ ಪಠ್ಯ ಮುಗಿಸಲು ಕೂಡ ಆಗುವುದಿಲ್ಲ. ಇದರಿಂದಾಗಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತದೆ. ಯುನೆಸ್ಕೋ ಇತ್ತೀಚೆಗೆ ಬಿಡುಗಡೆ ಮಾಡಿರುವ ಒಂದು ವರದಿಯ ಪ್ರಕಾರ ಶೇಕಡಾ ಎಪ್ಪತ್ತರಷ್ಟು ಮಕ್ಕಳಲ್ಲಿ ತಮ್ಮ ತರಗತಿಗಳ ಕಲಿಕಾ ಮಟ್ಟಕ್ಕೆ ತಕ್ಕಂತೆ ಅವರು ಸಾಮರ್ಥ್ಯ ಪಡೆದುಕೊಂಡಿಲ್ಲ ಎಂಬುದು ಬಹಿರಂಗವಾಗಿದೆ. ಏಕೋಪಾಧ್ಯಾಯ ಶಾಲೆಗಳಲ್ಲಿ ಈ ಪರಿಸ್ಥಿತಿ ಇನ್ನೂ ಕಡಿಮೆಯಿರುತ್ತದೆ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ.

ಎಲ್ಲಾ ಮಕ್ಕಳಿಗೆ ಶಿಕ್ಷಣ ಕಡ್ಡಾಯ ಎಂದು ಶಾಸನ ರೂಪಿಸಿದ ನಂತರವೂ ಅದು ಪರಿಣಾಮಕಾರಿಯಾಗಿ ಜಾರಿ ಮಾಡಲು ಸಾಧ್ಯವಿಲ್ಲ ಎಂದಾದರೆ ಅದಕ್ಕೆ ಹೊಣೆ ಯಾರು? ಸರಕಾರ ಕಟು ನಿಷ್ಠೆಯಿಂದ ಪಾಲಿಸಬೇಕಾದ ಸಾಮಾಜಿಕ ಕಲ್ಯಾಣದ ಹೊಣೆಗಾರಿಕೆಯಲ್ಲಿ ಶಿಕ್ಷಣವೂ ಒಂದು. ಆದರೆ ಕಟು ವಾಸ್ತವವೆಂದರೆ ಬಹುತೇಕ ಸರಕಾರಿ ಶಾಲೆಗಳು ಏಕೋಪಾಧ್ಯಾಯ ಶಾಲೆಗಳು ಮಾತ್ರವಲ್ಲ, ಏಕ ಕೊಠಡಿಯ ಶಾಲೆಗಳೂ ಆಗಿವೆ. ಒಂದೇ ಕೊಠಡಿಯಲ್ಲಿ ಐದಾರು ತರಗತಿಗಳನ್ನು ಒಬ್ಬರೇ ಶಿಕ್ಷಕರು ನಿಭಾಯಿಸುತ್ತಾರೆ. ನಾಳಿನ ಭಾರತದ ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸಬೇಕಾದ ಮಕ್ಕಳ ಶಿಕ್ಷಣದ ಬಗ್ಗೆ ಸರಕಾರದ ಈ ತಾತ್ಸಾರದ ಧೋರಣೆ ಸರಿಯಲ್ಲ. ಸರಕಾರಿ ಶಾಲೆಗಳ ಅವ್ಯವಸ್ಥೆಯನ್ನು ಸರಿಪಡಿಸಲು ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News