'ವೈಲ್ಡ್ ಕರ್ನಾಟಕ' ಸಾಕ್ಷ್ಯಚಿತ್ರಕ್ಕೆ ನೀಡಿದ್ದ ತಡೆ ಮುಂದುವರಿಕೆ

Update: 2021-10-25 17:46 GMT

ಬೆಂಗಳೂರು, ಅ.25: ದಾಂಡೇಲಿ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಚಿತ್ರೀಕರಿಸಲಾಗಿರುವ ‘ವೈಲ್ಡ್ ಕರ್ನಾಟಕ’ ಅಥವಾ ‘ಇಂಡಿಯಾಸ್ ವೈಲ್ಡ್ ಕರ್ನಾಟಕ’ ಎಂಬ ಸಾಕ್ಷ್ಯಚಿತ್ರ ಪ್ರಸಾರಕ್ಕೆ ನೀಡಲಾಗಿರುವ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ನ.17ರವರೆಗೆ ವಿಸ್ತರಿಸಿದೆ.

ಈ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದ ರವೀಂದ್ರ ರೆಡ್ಕರ್ ಮತ್ತು ಬೆಂಗಳೂರಿನ ಆರ್.ಕೆ.ಉಲ್ಲಾಸ್ ಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸಾಕ್ಷಚಿತ್ರ ನಿರ್ಮಾಪಕರ ಪರ ವಕೀಲ ವಿಕ್ರಂ ಹುಯಿಲಗೋಳ ವಾದ ಮಂಡಿಸಿ, ಅರ್ಜಿಯ ವಿಚಾರಣಾ ಮಾನ್ಯತೆಯನ್ನು ಆಕ್ಷೇಪಿಸಿ, ಯಾವ ಉದ್ದೇಶಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಅವಕಾಶ ಮಾಡಿಕೊಡಲಾಗಿದೆ ಹಾಗೂ ಅದನ್ನು ಹೇಗೆ ಬುಡಮೇಲು ಮಾಡಲಾಗುತ್ತಿದೆ ಎಂದು ಸೆಂಟ್ರಲ್ ವಿಸ್ಟಾ ಯೋಜನೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟವಾಗಿದೆ. 

ಈ ಪ್ರಕರಣದಲ್ಲಿ ಅದೇ ಆಗಿದೆ. ವ್ಯಾಜ್ಯ ಇರುವುದು ಚಿತ್ರ ನಿರ್ಮಾಪಕರು ಮತ್ತು ಸರಕಾರದ ನಡುವೆ. ಒಪ್ಪಂದ ಉಲ್ಲಂಘನೆಯಾಗಿದೆ ಎನ್ನುವ ಅರ್ಜಿದಾರರ ಆರೋಪ ಒಡಂಬಡಿಕೆ ವಿಚಾರವಷ್ಟೇ. ಅಂತಹ ಉಲ್ಲಂಘನೆಯಾಗಿಲ್ಲ ಎಂದು ಸ್ವತಃ ಸರಕಾರ ಹೇಳಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಇದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿಯನ್ನು ಪ್ರಾಥಮಿಕ ವಿಚಾರಣೆ ನಡೆಸಲಾಗುವುದು ಎಂದು ಹೇಳಿ ವಿಚಾರಣೆಯನ್ನು ನ.17ಕ್ಕೆ ಮುಂದೂಡಿತು. ಅಲ್ಲದೇ `ವೈಲ್ಡ್ ಕರ್ನಾಟಕ' ಸಾಕ್ಷ್ಯಚಿತ್ರವನ್ನು ಯಾವುದೇ ರೂಪದಲ್ಲೂ ಪ್ರಸಾರ ಹಾಗೂ ಯಾವುದೇ ಮಾಧ್ಯಮಗಳ ಮೂಲಕ ಪ್ರದರ್ಶಿಸಬಾರದು. ಮರು ಮುದ್ರಣ, ವಿತರಣೆ ಹಾಗೂ ಮಾರಾಟ ಮಾಡಬಾರದು ಎಂದು ಹಿಂದೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಮುಂದಿನ ವಿಚಾರಣೆ ತನಕ ವಿಸ್ತರಿಸಿತು.

ಅರ್ಜಿಯಲ್ಲಿ ಏನಿದೆ:  ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರವನ್ನು ಜಗತ್ತಿನಾದ್ಯಂತ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಚಿತ್ರ ನಿರ್ಮಾಣ ವಿಷಯದಲ್ಲಿ ಖಾಸಗಿ ವ್ಯಕ್ತಿಗಳೊಂದಿಗೆ ಅರಣ್ಯ ಇಲಾಖೆ ಮಾಡಿಕೊಂಡಿರುವ ಒಡಂಬಡಿಕೆಯ ಕೆಟಿಪಿಪಿ(ಕರ್ನಾಟಕ ಪಾರದರ್ಶಕ) ಕಾಯ್ದೆ ಪ್ರಕಾರ ಇಲ್ಲ. ಹೀಗಾಗಿ, ಸಾಕ್ಷ್ಯಚಿತ್ರದ ಪ್ರಸಾರಕ್ಕೆ ತಡೆ ನೀಡಬೇಕೆಂದು ಅರ್ಜಿದಾರರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News