ಆರೆಸ್ಸೆಸ್‍ಗೆ ಚುನಾವಣೆ ಇಲ್ಲದೆ ನೇಮಕವಾಗುವ ಪದಾಧಿಕಾರಿಗಳೆಲ್ಲ ಒಂದು ಜಾತಿಯವರೇ ಯಾಕೆ: ಸಿದ್ದರಾಮಯ್ಯ ಪ್ರಶ್ನೆ

Update: 2021-10-25 18:19 GMT
ಸಿದ್ದರಾಮಯ್ಯ (File Photo)

ಬೆಂಗಳೂರು, ಅ. 25: ಆರೆಸ್ಸೆಸ್‍ಗೆ ಚುನಾವಣೆ ಇಲ್ಲದೆ ನೇಮಕವಾಗುವ ಪದಾಧಿಕಾರಿಗಳೆಲ್ಲ ಒಂದು ಜಾತಿಯವರೇ ಯಾಕೆ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಓರ್ವ ಜಾತೀವಾದಿ ಎಂದಿದ್ದ ಬಿಜೆಪಿಗೆ ಸೋಮವಾರ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ ಅವರು, ‘ಬಾಯಲ್ಲಿ ನಾವೆಲ್ಲ ಒಂದು, ನಾವೆಲ್ಲ ಹಿಂದು' ಎನ್ನುವ ಮಂತ್ರ. ಅಂತರಂಗದಲ್ಲಿ ಜಾತಿಗಳನ್ನು ಒಡೆದು ಆಳುವ ಕುತಂತ್ರ. ಮೀಸಲಾತಿ ಸಂಬಂಧದ ‘ಮಂಡಲ್ ಆಯೋಗ'ದ ವಿರುದ್ಧ ‘ಕಮಂಡಲ' ಹಿಡಿದ ಬಿಜೆಪಿ ನಾಯಕರ ಜಾತಿ ಹಿಪಾಕ್ರಸಿಯನ್ನು ಬಿಚ್ಚಿಟ್ಟರೆ ಅದೊಂದು ಕೊನೆಯಿಲ್ಲದ ಧಾರಾವಾಹಿ ಆದೀತು' ಎಂದು ವಾಗ್ದಾಳಿ ನಡೆಸಿದ್ದಾರೆ.

‘ಕುರುಬ ಸಮಾವೇಶ ನಡೆಸಿದ್ದ ಕೆ.ಎಸ್.ಈಶ್ವರಪ್ಪ, ಪಂಚಮಸಾಲಿ ಲಿಂಗಾಯತರ ಸಮಾವೇಶ ನಡೆಸಿದ ಯತ್ನಾಳ್, ಬ್ರಾಹ್ಮಣ ಸಮಾವೇಶದಲ್ಲಿ ಪಾಲ್ಗೊಂಡ ಪ್ರಹ್ಲಾದ್ ಜೋಷಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಸುರೇಶ್ ಕುಮಾರ್, ಒಕ್ಕಲಿಗನೆಂಬ ಕಾರಣಕ್ಕೆ ಸಚಿವನಾದೆ ಎನ್ನುವ ಆರ್.ಅಶೋಕ್ ಜಾತಿವಾದಿಗಳಾ? ಜಾತ್ಯತೀತರಾ?' ಎಂದು ಪ್ರಶ್ನಿಸಿದ್ದಾರೆ.

‘ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಲಿಂಗಾಯತ ಸ್ವಾಮಿಗಳನ್ನು ಮನೆಗೆ ಕರೆಸಿ ದುಡ್ಡು ಹಂಚಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಾತಿವಾದಿಯೇ? ಜಾತ್ಯತೀತವಾದಿಯೇ? ಶೋಷಿತ ಜಾತಿಗಳ ಸಮಾವೇಶದಲ್ಲಿ ನಾನು ಭಾಗವಹಿಸಿದರೆ ಜಾತಿವಾದಿ, ನೀವು ಭಾಗವಹಿಸಿದರೆ ಜಾತ್ಯತೀತರಾ? ಜಾತಿ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ ಎಂದು ಬಿಜೆಪಿ ನಾಯಕರು ಪ್ರಮಾಣ ಮಾಡಲಿ, ನಾನು ರಾಜಕೀಯದಿಂದ ನಿವೃತ್ತಿ ಆಗುತ್ತೇನೆ. ಆತ್ಮವಂಚನೆ ಬಿಟ್ಟು ಪ್ರಾಮಾಣಿಕ ರಾಜಕೀಯ ಮಾಡಿ' ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

‘ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ನಾನು ಭಾಗವಹಿಸಿದರೆ ಹಿಂದೂ ವಿರೋಧಿ. ಟಿಪ್ಪು ಬಗ್ಗೆ ಸರಕಾರದಿಂದಲೇ ಪುಸ್ತಕ ಪ್ರಕಟಿಸಿ ಹಾಡಿ ಹೊಗಳಿದ ಮಾಜಿಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮುಸ್ಲಿಂ ಗಣವೇಷ ಹಾಕಿ ಖಡ್ಗ ಹಿಡಿದು ಕುಣಿದ ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್ ಹಿಂದೂ ಕುಲ ತಿಲಕರೇ?' ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

‘ಜಾತಿ ನಾಶವಾಗುವವರೆಗೆ ಮೀಸಲಾತಿ ಇರಬೇಕೆಂಬ ನನ್ನ ಮಾತಿಗೆ ನಾನೀಗಲೂ ಬದ್ಧ. ಮಂಡಲ್ ವರದಿ ವಿರೋಧಿಸಿ ಮೈಗೆ ಬೆಂಕಿ ಹಚ್ಚಿಕೊಂಡಿದ್ದ ಬಿಜೆಪಿ ನಾಯಕರೇ ಈಗ ನಿಮಗೆ ಮೀಸಲಾತಿ ವಿರೋಧಿಸುವ ತಾಕತ್ ಇದೆಯೇ? ಅಂದ ಹಾಗೆ ಬಿಜೆಪಿ ನಾಯಕರೇ, ನಿಮ್ಮ ಮಾತೃ ಸಂಸ್ಥೆಯಾದ ಆರೆಸ್ಸೆಸ್‍ಗೆ ಚುನಾವಣೆ ಇಲ್ಲದೆ ನೇಮಕವಾಗುವ ಪದಾಧಿಕಾರಿಗಳೆಲ್ಲ ಒಂದು ಜಾತಿಯವರೇ ಯಾಕೆ? ಚುನಾವಣೆಯಲ್ಲಿ ಆಯ್ಕೆಯಾಗುವ ಬಿಜೆಪಿ ಅಭ್ಯರ್ಥಿಗಳಲ್ಲಿ ಎಲ್ಲ ಜಾತಿಗಳಿಗೆ ಸೇರಿದವರು ಇರುವುದು ಯಾಕೆ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News