ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ದಾವಣಗೆರೆ ವಿವಿಯ ಪ್ರಕಾಶ್, ಪ್ರಸನ್ನ ಅವರಿಗೆ ಸ್ಥಾನ

Update: 2021-10-26 13:24 GMT

ದಾವಣಗೆರೆ: ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೆರಿಕದ ಸ್ಟ್ಯಾನ್ಫೋರ್ಡ್ ಸಿದ್ಧಪಡಿಸಿದ ಪಟ್ಟಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಇಬ್ಬರು ವಿಜ್ಞಾನಿಗಳು ಸ್ಥಾನ ಪಡೆದಿದ್ದಾರೆ.

ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ. ಡಿ.ಜಿ.ಪ್ರಕಾಶ್ ಮತ್ತು ಸಹ ಪ್ರಾಧ್ಯಾಪಕ ಡಾ. ಬಿ.ಸಿ. ಪ್ರಸನ್ನಕುಮಾರ ಅವರು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯ ತಯಾರಿಸಿದ 2020ರ ವರೆಗಿನ ಜಾಗತಿಕ ಮಟ್ಟದ ಅತ್ಯುನ್ನತ ಶೇ. 2ರಷ್ಟು ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟದ ಸಂಶೋಧನೆ, ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡಎಚ್ ಇಂಡೆಕ್ಸ್, ಐ ಟೆನ್ ಇಂಡೆಕ್ಸ್ ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಲೂಕಿನ ಮುಜರೆ ಹನುಮನಹಳ್ಳಿ ಗ್ರಾಮದ ಡಾ.ಪ್ರಕಾಶ್ ಅವರು ಭೇದಾತ್ಮಕ ರೇಖಾಗಣಿತ, ಭಿನ್ನರಾಶಿ ಕಲನಶಾಸ್ತ್ರ, ಅನ್ವಯಿಕ ಗಣಿತಶಾಸ್ತ್ರ, ವಿಭಿನ್ನ ಸಮೀಕರಣಗಳಿಗೆ ಪರಿಹಾರ ಕುರಿತು ಸಂಶೋಧನೆ ಮಾಡಿದ್ದರೆ. 

ಚಿಕ್ಕಮಗಳೂರು ಜಿಲ್ಲೆ ತಾಲ್ಲೂಕಿನ ಕುಡ್ಲೂರು ಗ್ರಾಮದ ಡಾ. ಪ್ರಸನ್ನಕುಮಾರ್ ಅವರು ಶಾಖ ಮತ್ತು ಸಮೂಹ ವರ್ಗಾವಣೆ, ಸಂಖ್ಯಾತ್ಮಕ ವಿಶ್ಲೇಷಣೆ, ಘನ ಯಂತ್ರಶಾಸ್ತ್ರ, ದ್ರವ ಯಂತ್ರಶಾಸ್ತ್ರ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿ, ಲೇಖನಗಳನ್ನು ಪ್ರಕಟಿಸಿದ್ದಾರೆ. ಇಬ್ಬರೂ ಗಣಿತಜ್ಞರು ಕಳೆದ 15 ವರ್ಷಗಳಿಂದ ಬೋಧನೆ, ಸಂಶೋಧನೆ ಮತ್ತು ಸಮುದಾಯ ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಗಮನರ್ಹ ಸಾಧನೆ ಮಾಡಿದ ಪ್ರಕಾಶ್ ಮತ್ತು ಪ್ರಸನ್ನ ಅವರನ್ನು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ, ಪ್ರಸಾರಾಂಗ ಕುಲಸಚಿವೆ ಪ್ರೊ. ಎಚ್.ಎಸ್. ಅನಿತಾ, ವಿಜ್ಞಾನ ನಿಕಾಯದ ಡೀನ್ ಪ್ರೊ. ರಾಮಲಿಂಗಪ್ಪ ಅವರು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News