ಶಿಕ್ಷಕರ ನೇಮಕಕ್ಕೆ ವರ್ಷಕ್ಕೆ ಎರಡು ಬಾರಿ ಸಿಇಟಿ ನಡೆಸಲು ಚಿಂತನೆ: ಸಚಿವ ನಾಗೇಶ್

Update: 2021-10-26 14:31 GMT

ಬೆಂಗಳೂರು, ಅ.26: ಸರಕಾರವು 5 ಸಾವಿರ ಶಿಕ್ಷಕರ ನೇಮಕಾತಿಗೆ ಒಪ್ಪಿಗೆ ನೀಡಿದೆ. ಶೀಘ್ರದಲ್ಲೇ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗುವುದು. ಆದರೆ ಕಳೆದ ಬಾರಿ ನಡೆದ ಸಿಇಟಿ ಪರೀಕ್ಷೆಯಲ್ಲಿ ಕೇವಲ 3 ಸಾವಿರ ಶಿಕ್ಷಕರಾಗಲು ಅರ್ಹತೆ ಪಡೆದುಕೊಡಿದ್ದಾರೆ. ಆದುದರಿಂದ ವರ್ಷಕ್ಕೆ ಎರಡು ಬಾರಿ ಸಿಇಟಿ ಪರೀಕ್ಷೆಗಳನ್ನು ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

ಕಲಬುರಗಿಯ ಆದರ್ಶನಗರದ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಶಿಕ್ಷಕರ ನೇಮಕಾತಿಗೆ ನಡೆಯುವ ಸಿಇಟಿ ಪರೀಕ್ಷೆಯಲ್ಲಿ ಅಧಿಸೂಚನೆ ಹೊರಡಿಸಿದಷ್ಟು ಸಂಖ್ಯೆಯ ಶಿಕ್ಷಕರು ಪಾಸಾಗುತ್ತಿಲ್ಲ. ಮುಂದಿನ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಚಿಂತನೆ ನಡೆದಿದೆ. ಆದುದರಿಂದ ವರ್ಷಕ್ಕೆ ಎರಡು ಬಾರಿ ಸಿಇಟಿಯನ್ನು ನಡೆಸಲಾಗುವುದು ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಕ್ಷಕರ ಹುದ್ದೆ ನೇಮಕ ಮಾಡಿಕೊಳ್ಳುವ ಬಗ್ಗೆ ಆಸಕ್ತಿ ತೋರಿಸಿದ್ದು, ಸರಕಾರಿ ಶಾಲೆಯಲ್ಲಿ ಮೂಲಸೌಕರ್ಯ ಹೆಚ್ಚಿಸುವಂತೆ ಸೂಚನೆ ನೀಡಿದ್ದಾರೆ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ಮೂರು ತಿಂಗಳಲ್ಲಿ ಒಬ್ಬ ಶಿಕ್ಷಕನನ್ನೂ ಜನಪ್ರತಿನಿಧಿಗಳ ಶಿಫಾರಸ್ಸು ಆಧರಿಸಿ ವರ್ಗಾವಣೆ ಮಾಡಿಲ್ಲ. ಶೈಕ್ಷಣಿಕ ಮಟ್ಟ ಕುಸಿಯುವ ಭೀತಿಯಿಂದ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಿಲ್ಲ ಎಂದರು. 
ಸೋಮವಾರದಿಂದ ಪ್ರಾಥಮಿಕ ಶಾಲೆಗಳನ್ನು ರಾಜ್ಯದಾದ್ಯಂತ ಆರಂಭಿಸಲಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕ್ರಮೇಣ ಮಕ್ಕಳ ಹಾಜರಾತಿ ಹೆಚ್ಚಾಗಲಿದೆ ಎಂದು ಸಚಿವ ನಾಗೇಶ್ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ನಲಿನ್ ಅತುಲ್, ನಿರ್ದೇಶಕ ಬಿ.ಕೆ.ಎಸ್. ವರ್ಧನ್, ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ, ಡಿಡಿಪಿಐ ಅಶೋಕ ಭಜಂತ್ರಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News