ಪದವಿಯಲ್ಲಿ ಕನ್ನಡ ಕಲಿಕೆ ಕಡ್ಡಾಯ: ಆದೇಶ ಮರುಪರಿಶೀಲಿಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2021-10-26 15:19 GMT

ಬೆಂಗಳೂರು, ಅ.26: ಪದವಿ ಶಿಕ್ಷಣದ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಕೆ ಕಡ್ಡಾಯ ಮಾಡಿರುವ ಸರಕಾರದ ಕ್ರಮ ಸೂಕ್ತವಾದುದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ರಾಜ್ಯ ಸರಕಾರ ತನ್ನ ಆದೇಶವನ್ನು ಮರುಪರಿಶೀಸಬೇಕು ಎಂದು ಸೂಚಿಸಿದೆ. ಅಲ್ಲದೆ, ನಿಮ್ಮ(ಸರಕಾರ) ನೀತಿಯನ್ನು ಮರುಪರಿಶೀಲಿಸದಿದ್ದರೆ ನಾವು ಆದೇಶಕ್ಕೆ ತಡೆಯಾಜ್ಞೆ ನೀಡಬೇಕಾಗುತ್ತದೆ ಎಂದು ಆದೇಶಿಸಿದೆ. 

ಈ ಸಂಬಂಧ ಸಂಸ್ಕøತ ಭಾರತಿ ಕರ್ನಾಟಕ ಟ್ರಸ್ಟ್, ಸಂಸ್ಕøತ ಪ್ರಧ್ಯಾಪಕರ ಸಂಘ ಸೇರಿ ಹಲವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ, ರಾಜ್ಯ ಸರಕಾರದ ಆದೇಶಕ್ಕೆ ಹೈಕೋರ್ಟ್ ಆಕ್ಷೇಪ ಎತ್ತಿ, ಹೊರಗಿನಿಂದ ಬರುವ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಯುವಂತೆ ಒತ್ತಾಯಿಸುವುದು ಸರಿ ಎನ್ನಿಸದು ಎಂದು ಅಭಿಪ್ರಾಯಪಟ್ಟಿತು.

ರಾಜ್ಯ ಸರಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಸರಕಾರದ ಉದ್ದೇಶ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದಷ್ಟೇ ಆಗಿದೆ. ರಾಜ್ಯದಲ್ಲಿ ಉದ್ಯೋಗ ಮಾಡುವುದಕ್ಕೂ ಕನ್ನಡ ಕಲಿಕೆ ಬೇಕಾಗುತ್ತದೆ. ಹೀಗಾಗಿ ಕನ್ನಡ ಭಾಷೆಯನ್ನು ಪದವಿ ಹಂತದಲ್ಲಿ ಕಲಿಸಲು ಮುಂದಾಗಿದೆ ಎಂದು ಪೀಠಕ್ಕೆ ತಿಳಿಸಿದರು. 

ಇದಕ್ಕೆ ಒಪ್ಪದ ಪೀಠ, ಉದ್ಯೋಗದಲ್ಲಿ ಕನ್ನಡ ಕಲಿಕೆಯನ್ನು ಪರಿಗಣಿಸಬಹುದು. ಅದಕ್ಕೆ ನೀವು ಷರತ್ತು ಹಾಕಬಹುದು, ಶಿಕ್ಷಣದಲ್ಲಿ ಸೂಕ್ತವಲ್ಲ. ಹೊರಗಿನಿಂದ ಬಂದಂತ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಡ್ಡಾಯಗೊಳಿಸುವುದು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪದವಿಗೂ ಮೊದಲು ಕನ್ನಡ ಕಲಿಯದ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗಲಿದೆ ಎಂದು ಅಭಿಪ್ರಾಯಪಟ್ಟಿತು.

ಅಲ್ಲದೇ, ಸರಕಾರದ ಆದೇಶವನ್ನು ಮರುಪರಿಶೀಲಿಸುವಂತೆ ಸೂಚಿಸಿ, ವಿಚಾರಣೆ ಮುಂದೂಡಿತು. ಇದೇ ವೇಳೆ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಅರ್ಜಿದಾರರ ಮಧ್ಯಂತರ ಮನವಿ ಪರಿಗಣಿಸಿ ಆದೇಶಕ್ಕೆ ತಡೆ ನೀಡಬೇಕಾಗುತ್ತದೆ ಎಂದು ಮೌಖಿಕವಾಗಿ ತಿಳಿಸಿತು.
ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಮಾಡಿ ರಾಜ್ಯ ಸರಕಾರ ಆ. 7ರಂದು ಆದೇಶ ಹೊರಡಿಸಿದೆ. ಇದು ಸಂವಿಧಾನದ ವಿರೋಧಿ ಕ್ರಮವಾಗಿದೆ ಎಂದು ಆರೋಪಿಸಿರುವ ಅರ್ಜಿದಾರರು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಕನ್ನಡ ಕಡ್ಡಾಯ ಎಂದಿಲ್ಲ. ಹಾಗಿದ್ದೂ ಸರಕಾರ ಹೊರಗಿನಿಂದ ಬಂದಿರುವ ವಿದ್ಯಾರ್ಥಿಗಳ ಮೇಲೆ ಕನ್ನಡ ಹೇರಿಕೆ ಮಾಡುತ್ತಿದೆ.

ಶಾಲಾ ಕಲಿಕೆಯಲ್ಲೇ ಕನ್ನಡ ಕಡ್ಡಾಯವಿಲ್ಲ. ಅಂತಹುದರಲ್ಲಿ ಪದವಿ ಹಂತದಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡುವುದು ಸೂಕ್ತವಲ್ಲ. ಜತೆಗೆ ಪದವಿಯಲ್ಲಿ ಭಾಷೆ ವಿಷಯ ಆಯ್ಕೆಗೂ ಇದು ಅಡ್ಡಿಯಾಗಿದೆ. ಹೀಗಾಗಿ, ಕನ್ನಡ ಕಲಿಕೆ ಕಡ್ಡಾಯ ಮಾಡಿ ರಾಜ್ಯ ಸರಕಾರ ಹೊರಡಿಸಿರುವ ಆದೇಶ ರದ್ದುಗೊಳಿಸಬೇಕು ಎಂದು ಕೋರಿದ್ದಾರೆ. ವಕೀಲರ ವಾದ ಆಲಿಸಿದ ನ್ಯಾಯಪೀಠವು ಪ್ರಕರಣದ ವಿಚಾರಣೆಯನ್ನು ನ.10ಕ್ಕೆ ಮುಂದೂಡಿತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News