ಹರಿಹರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಸಂಸ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಪ್ರತಿಭಟನೆ

Update: 2021-10-26 15:26 GMT

ಹರಿಹರ : ಒಳ ಮೀಸಲಾತಿ ಜಾರಿ, ಅನರ್ಹರರಿಗೆ ಎಸ್ಸಿ ಜಾತಿ ಪ್ರಮಾಣಪತ್ರ ನೀಡದಿರುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಸಂಸ ತಾಲೂಕು ಸಮಿತಿಯಿಂದ ನಗರದಲ್ಲಿ ಮಂಗಳವಾರ ಬೃಹತ್ ತಮಟೆ ಚಳವಳಿ ನಡೆಸಲಾಯಿತು.

ನಗರದ ಶ್ರೀತಾಂತ್ ಟಾಕೀಸ್ ಮುಂಭಾಗದಿಂದ ಆರಂಭವಾದ ಮೆರವಣಿಗೆ ಶಿವಮೊಗ್ಗ ವೃತ್ತ, ಗಾಂಧಿ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ತಲುಪಿತು. ಇದಕ್ಕೂ ಮುನ್ನ ಗಾಂಧಿ ವೃತ್ತದಲ್ಲಿ ಕೆಲ ಸಮಯ ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿದರು.

ದಸಂಸ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ, ಒಳ ಮೀಸಲಾತಿಗಾಗಿ ಎ.ಜೆ.ಸದಾಶಿವ ಆಯೋಗದ ವರದಿ ಈಗಾಗಲೇ ರಾಜ್ಯ ಸರಕಾರಕ್ಕೆ ತಲುಪಿ ಹಲವು ವರ್ಷಗಳಾಗಿವೆ. ವರದಿ ಜಾರಿ ಮಾಡುವ ದೃಷ್ಟಿಯಿಂದ ರಾಜ್ಯ ಸರಕಾರ ಸೂಕ್ತ ಕ್ರಮಕೈಗೊಳ್ಳದಿರುವುದು ನಿರಾಶೆ ಹುಟ್ಟಿಸಿದೆ. ಎಸ್ಸಿ ಪಟ್ಟಿಯಲ್ಲಿರುವ ನಿಜವಾದ ಅಸ್ಪøಶ್ಯ ಜನಾಂಗದವರಿಗೆ  ಅನ್ಯಾಯವಾಗುತ್ತಿದೆ. ಇದೊಂದು ರೀತಿ ದೀಪದ ಕೆಳಗೆ ಕತ್ತಲು ಎಂಬಂತಾಗಿದೆ. ಎಸ್ಸಿ ವರ್ಗದಲ್ಲಿರುವ ಜಾತಿ, ಜನಾಂಗಗಳಿಗೆ ಜನಸಂಖ್ಯೆ ಆಧರಿಸಿ ಮೀಸಲಾತಿ ನೀಡದಿರುವುದು ಪ್ರಕೃತಿ ನ್ಯಾಯಕ್ಕೆ ದ್ರೋಹ ಬಗೆದಂತೆ ಎಂದರು.

ಪ್ರಕೃತಿ ಸಹಜ ನ್ಯಾಯಯುತವಾಗಿರುವ ನ್ಯಾ.ಎ.ಜೆ.ಸದಾಶಿವರ ವರದಿಯನ್ನು ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ, ವರದಿಯನ್ವಯ ಒಳಮೀಸಲಾತಿ ಪರಿಪೂರ್ಣವಾಗಿ ಜಾರಿ ಮಾಡಬೇಕೆಂಬುದು ನಮ್ಮೆಲ್ಲರ ಹಕ್ಕೊತ್ತಾಯವಾಗಿದೆ ಎಂದರು.

ಜಿಲ್ಲಾ ಸಂಚಾಲಕ ಮಂಜುನಾಥ್ ಕುಂದುವಾಡ ಮಾತನಾಡಿ, ಬೇಡ ಜಂಗಮ ಹೆಸರಿನಲ್ಲಿ ಎಸ್ಸಿ ಜಾತಿ ಪ್ರಮಾಣ ಪತ್ರ ನೀಡುತ್ತಿರುವ ಪ್ರಕರಣಗಳು ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿದೆ. ವಾಸ್ತವಾಂಶ ಗೊತ್ತಿದ್ದರೂ ಅನರ್ಹ ವೀರಶೈವರಿಗೆ ಬೇಡ ಜಂಗಮರೆಂದು ಘೋಷಿಸಿ ಅವರಿಗೆ ಎಸ್ಸಿ ಜಾತಿ ಪ್ರಮಾಣಪತ್ರಗಳನ್ನು ವಿವಿಧ ತಹಶೀಲ್ದಾರರು ನೀಡುತ್ತಿದ್ದಾರೆ. ನಿಜವಾದ ಬೇಡಜಂಗಮರು ರಾಜ್ಯದ ಸೀಮಿತ ಜಿಲ್ಲೆಗಳಲ್ಲಿದ್ದಾರೆ. ಉಳಿದ ಜಿಲ್ಲೆಗಳಲ್ಲಿಯೂ ಅಕ್ರಮವಾಗಿ ಇದೇ ಮಾನದಂಡ ಬಳಸಿ ಅನರ್ಹರು ಎಸ್ಸಿ ಜಾತಿ ಪ್ರಮಾಣಪತ್ರ ಪಡೆಯುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದರು.

ಎಸ್ಸಿ ಜಾತಿ ಪ್ರಮಾಣಪತ್ರ ಪಡೆದ ಅನರ್ಹರು ಹಾಗೂ ಪ್ರಮಾಣ ಪತ್ರ ನೀಡಿದ ತಹಸೀಲ್ದಾರರ ಮೇಲೆ ಕೂಡಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗಟ್ಟಬೇಕು. ಅನರ್ಹರಿಗೆ ನೀಡಿರುವ ಎಸ್ಸಿ ಜಾತಿ ಪ್ರಮಾಣ ಪತ್ರಗಳನ್ನು ಪತ್ತೆಹಚ್ಚಿ ರದ್ದುಪಡಿಸಬೇಕು. ಈ ಕುರಿತು ಸರಿಕಾರದಿಂದ ಕಟ್ಟುನಿಟ್ಟಿನ ಕಾನೂನು ರಚಿಸಿ ದಲಿತರ ಸಂವಿಧಾನಬದ್ಧ ಹಕ್ಕನ್ನು ಸಂರಕ್ಷಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.

ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ನಾನಾ ಮಹಾ ಪುರುಷರ ಹೆಸರಲ್ಲಿ ಅಭಿವೃದ್ಧಿ ನಿಮಗಗಳನ್ನು ಸ್ಥಾಪಿಸಲಾಗಿದೆ. ಆದರೆ, ಆ ನಿಗಮಗಳಿಗೆ ಸೂಕ್ತ ಅನುದಾನ ಬಿಡುಗಡೆ ಮಾಡದಿರುವುದರಿಂದ ಈ ಜಾತಿ, ಜನಾಂಗಗಳ ಬಹುತೇಕರಿಗೆ ನಿಗಮಗಳಿಂದ ಸಾಲ, ಸವಲತ್ತುಗಳು ಕನ್ನಡಿಯ ಗಂಟಾಗಿದೆ. ಅಲ್ಪಸ್ವಲ್ಪ ಅನುದಾನ ನೀಡಿ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಸರ್ಕಾರ ಬೀಗುವ ಬದಲು ಬೇಡಿಕೆಗೆ ತಕ್ಕಂತೆ ಸದರಿ ನಿಗಮಗಳಿಗೆ ಅನುದಾನ  ಒದಗಿಸುವತ್ತ ಸರ್ಕಾರ ಚಿತ್ತ ಹರಿಸಬೇಕಿದೆ ಎಂದರು.  

ಚಲನಚಿತ್ರ ನಿರ್ದೇಶಕ ಮಂಡ್ಯದ ಅಭಿಗೌಡ್ರು ಮಾತನಾಡಿ, ಸಂವಿಧಾನ ವಿರೋಧಿಯಂತಹ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹ ರಾಷ್ಟ್ರೀಯ ಶಿಕ್ಷಣ ನೀತಿ ರಚಿಸಿ ಎಲ್ಲಾ ರಾಜ್ಯಗಳ ಮೇಲೂ ಹೇರಲು ಹೊರಟಿರುವುದು ಭಾರತ ಒಕ್ಕೂಟ ಸರ್ಕಾರದ ಕಿಡಿಗೇಡಿತನವಾಗಿದೆ ಎಂದರು.  

ದಸಂಸ ಮಹಿಳಾ ಜಿಲ್ಲಾ ಸಂಚಾಲಕಿ ವಿಜಯಲಕ್ಷ್ಮಿ, ನ್ಯಾಮತಿಯ ಚಂದ್ರಪ್ಪ, ಶಿವಮೊಗ್ಗದ ರವಿ, ದರ್ಗಾಪ್ರಸಾದ್, ಮಂಜು, ಹನುಮಂತಪ್ಪ ಅಣಜಿ, ವಾಸನ ಮಂಜುನಾಥ್, ಗ್ರಾಪಂ ಸದಸ್ಯರಾದ ಮಂಜಪ್ಪ, ಎಚ್.ಎಂ.ಹನುಮಂತಪ್ಪ, ರಾಮಪ್ಪ ಮಿಟ್ಲಕಟ್ಟೆ, ಪರಶುರಾಮ್, ನಿಟ್ಟೂರು ಕೃಷ್ಣಪ್ಪ, ಪ್ರದೀಪ್, ರಾಕೇಶ್, ಗುಡ್ಡಪ್ಪ, ಪ್ರವೀಣ್, ಅಂಜನಿ, ಸಂತೋಷ್, ರವಿ ಸಾರಥಿ, ದೇವೇಂದ್ರಪ್ಪ, ಹೊಸಪಾಳ್ಯ ಯುವರಾಜ್, ಅಲೆಮಾರಿ ಸಮುದಾಯ ಸಂಘದ ವಿ.ಸಣ್ಣ ಅಜ್ಜಯ್ಯ, ವಕೀಲರಾದ ಕೆ.ವೀರೇಶ್, ದುರುಗೇಶ್, ಎಸ್.ಕೆ.ವೀರೇಶ್ ಕುಮಾರ್, ಹನುಮಂತಪ್ಪ ಕೋಂಡ್ರು, ಎಸ್.ಕೆ.ಜಯಪ್ಪ, ಕೆ.ಚಿನ್ನರೆಡ್ಡಿ, ಸುಂಕಪ್ಪ ಮಿರಾಲಿ, ಶಂಕರ ಮಿರಾಲಿ, ಅಂಜನ್ ಕುಮಾರ್ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News