ಹವಾಮಾನ ವೈಫರೀತ್ಯಕ್ಕೆ ಕಾಫಿ ಬೆಳೆ ನಾಶ; ವಿಶೇಷ ಪರಿಹಾರ ನೀಡಲು ಆಗ್ರಹ

Update: 2021-10-26 15:37 GMT

ಚಿಕ್ಕಮಗಳೂರು, ಅ.26: ಹವಾಮಾನ ವೈಫರೀತ್ಯದಿಂದಾಗಿ ಜಿಲ್ಲಾದ್ಯಂತ ಅಕಾಲಿಕ ಮಳೆಯಾಗುತ್ತಿದ್ದು, ಇದು ಕಾಫಿಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. 2015ರಿಂದ ಇಲ್ಲಿಯವರೆಗೆ  ನಿರಂತರವಾದ ಅತೀವೃಷ್ಟಿ ಮತ್ತು ಅನಾವೃಷ್ಟಿ ಪರಿಣಾಮ ಕಾಫಿಬೆಳೆಗಾರರು ಬೆಳೆ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾಫಿ ಬೆಳೆಗಾರರ ನೆರವಿಗೆ ಕೂಡಲೇ ಧಾವಿಸಬೇಕೆಂದು ಕಾಫಿ ಬೆಳೆಗಾರರ ಸಂಘದ ಅಧಕ್ಷ ಎಚ್.ಟಿ.ಮೋಹನ್‍ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಆಗ್ರಹಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅತಿವೃಷ್ಟಿ, ಅಕಾಲಿಕ ಮಳೆಯಂತಹ ಹವಾಮಾನ ವೈಫರೀತ್ಯದ ಪರಿಣಾದಿಂದಾಗಿ ಕಳೆದ ಕೆಲ ವರ್ಷಗಳಿಂದ ಕಾಫಿ ಬೆಳೆ ಸಂಪೂರ್ಣವಾಗಿ ನಾಶ ವಾಗಿದೆ. ಇದರೊಂದಿಗೆ ರೋಗಬಾದೆ, ಬೆಲೆಕುಸಿತ, ಕಾರ್ಮಿಕರ ಕೊರತೆ, ಕಾಡುಪ್ರಾಣಿಗಳ ಹಾವಳಿಯಿಂದಾಗಿ ಬೆಳೆಗಾರರು ಭಾರೀ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಸಂಬಂಧ ಕೇಂದ್ರ ಸರಕಾರಕ್ಕೆ ಅನೇಕ ಬಾರಿ ನಿಯೋಗಗಳ ಮೂಲಕ ಮನವಿ ಮಾಡಿದ್ದರೂ ಕೇಂದ್ರ ಸರಕಾರ ಕಾಫಿ ಉದ್ಯಮದ ಸಮಸ್ಯೆಗಳ ಪರಿಹಾರಕ್ಕೆ ಕಿಂಚಿತ್ ಕಾಳಜಿ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

2021ನೇ ಸಾಲಿನಲ್ಲಿ ಮಳೆಯು ನಿರಂತರವಾಗಿ ಸುರಿಯುತ್ತಲೇ ಇದ್ದು, ಅರೇಬಿಕಾ ಕಾಫಿಯನ್ನು ಕುಯ್ಯಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಕಾಫಿತೋಟಗಳಲ್ಲಿ ನಿರಂತರ ಮಳೆಯಿಂದಾಗಿ ಕಳೆ ಪದೇ ಪದೇ ಬರುತ್ತಿದ್ದು, ಕಾರ್ಮಿಕರಿಂದ ಮತ್ತೆ ಮತ್ತೆ ಕಳೆ ನಿರ್ಮೂಲನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸಕ್ತ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕಾಫಿ ಒಣಗಿಸಲು ಸಾಧ್ಯವಾಗದೇ ಕಾಫಿಯು ಗುಣಮಟ್ಟ ಕಳೆದುಕೊಳ್ಳುತ್ತಿದೆ. ಜೊತೆಗೆ ಬೆಳೆಗಾರರು ವರ್ಷವಿಡೀ ಬೆವರು ಸುರಿಸಿ ಬೆಳೆದ ಫಸಲು ಕೈಗೆ ಬರುವ ಮುನ್ನವೇ ಹಾಳಾಗುತ್ತಿದೆ. ಪರಿಣಾಮ ಬೆಳೆಗಾರರು ಬೆಳೆ, ಬೆಲೆ ಇಲ್ಲದೇ ಆರ್ಥಿಕವಾಗಿ ದಿವಾಳಿಯಾಗಿದ್ದಾರೆ. ಇದರೊಂದಿಗೆ ಹವಾಮಾನ ವೈಫರೀತ್ಯದಿಂದಾಗಿ ಈ ಬಾರಿಯ ಕಾಳುಮೆಣಸು ಫಸಲು ಶೇ.85ರಷ್ಟು ನೆಲಕಚ್ಚಿದೆ ಎಂದು ತಿಳಿಸಿದ್ದಾರೆ.

ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯ ಜನಪ್ರತಿನಿಧಿಗಳು ಈ ವಿಷಯದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಕಾಫಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರದ  ಗಮನಸೆಳೆದು ಆತಂಕದಲ್ಲಿರುವ ಬೆಳೆಗಾರರಿಗೆ ಶೀಘ್ರದಲ್ಲೇ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಒತ್ತಾಯಿಸಿರುವ ಅವರು,  ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕಾಫಿಗೆ ಯಾವುದೇ ತರಹದ ಬೆಳೆವಿಮೆ ಇಲ್ಲವಾಗಿದ್ದು, ಈ ವಿಚಾರವಾಗಿಯೂ ಜನಪ್ರತನಿಧಿಗಳು ಗಮನಹರಿಸಬೇಕು. ಕಾಫಿ ಬೆಳೆಗೆ ವಿಮೆ ಪರಿಹಾರ ನೀಡಬೇಕು. ಜೊತೆಗೆ ರಾಷ್ಟ್ರೀಯ ವಿಪತ್ತು ಯೋಜನೆಯಡಿ ಕಾಫಿಗೆ ಕೊಡುತ್ತಿರುವ ಪರಿಹಾರ ಭಾರೀ ಕಡಿಮೆ ಇದ್ದು, ಕಾಫಿ ಬೆಳೆಯಲು ತಗುಲುವ ಖರ್ಚು ವೆಚ್ಚ ಪರಿಗಣಿಸಿ ರಾಷ್ಟ್ರೀಯ ವಿಪತ್ತು ಯೋಜನೆಯಡಿಯಲ್ಲಿ ಕಾಫಿಗೆ ಪ್ರತ್ಯೇಕ ಪರಿಹಾರವನ್ನು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕೇಂದ್ರ ಸರಕಾರದ ಮೇಲೆ ಹೆಚ್ಚಿನ ಒತ್ತಡ ಹೇರಬೇಕೆಂದು ಹೇಳಿಕೆಯಲ್ಲಿ ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News