ಬಾಬಾಬುಡಾನ್ ದರ್ಗಾ: ಸಂಘೀ ಕುತಂತ್ರಗಳು ಮತ್ತು ನ್ಯಾಯಾಲಯಗಳಿಂದ ಬಚ್ಚಿಟ್ಟ ಸತ್ಯಗಳು

Update: 2021-10-27 05:34 GMT

ಬಾಬಾಬುಡಾನ್ ದರ್ಗಾವನ್ನು ನಾಶಮಾಡಲು ದತ್ತಾತ್ರೇಯ ದೇವಸ್ಥಾನವೆಂದು ಕಥನ ಕಟ್ಟುವುದು ಸಂಘಪರಿವಾರದ ಧಾರ್ಮಿಕ ಧ್ರುವೀಕರಣ ಯೋಜನೆಯ ಭಾಗ. ಅಂತಹ ಕಥನಗಳ ಮೂಲಕ ದಮನಿತರ ಐಕ್ಯತೆಯನ್ನು ಒಡೆಯುವ ಹಾಗೂ ದಲಿತ-ಹಿಂದೂಗಳ ಅಸ್ಮಿತೆಯನ್ನು ಬ್ರಾಹ್ಮಣ ಅಧೀನಗೊಳಿಸಿ ಮುಸ್ಲಿಂ ದ್ವೇಷದ ಎರಕದಲ್ಲಿ ಮರುಕಟ್ಟುವ ಷಡ್ಯಂತ್ರ. 


ಭಾಗ-3

ಸುಳ್ಳು-5: ಹಿಂದಿನ ಸರಕಾರ ನೇಮಿಸಿದ್ದ ಪರಿಣಿತರ ಉನ್ನತ ಸಮಿತಿ ಪಕ್ಷಪಾತಿಯಾಗಿದೆ ಮತ್ತು ಸುಪ್ರೀಂ ಕೋರ್ಟ್‌ನ ಆದೇಶದಂತೆ ಸರಕಾರ ತಾನು ನಿರ್ಧಾರವನ್ನು ತೆಗೆದುಕೊಳ್ಳದೆ ಪರಿಣಿತರ ಸಮಿತಿಗೆ ವಹಿಸಿದೆ. ಸತ್ಯ: ಹಿಂದಿನ ಸರಕಾರ ನೇಮಕ ಮಾಡಿದ ಉನ್ನತ ಮಟ್ಟದ ಸಮಿತಿಯು ಪಕ್ಷಪಾತಿಯಾಗಿತ್ತು ಎಂಬ ಅಹವಾಲುದಾರರ ವಾದವನ್ನು ಕೋರ್ಟ್ ಒಪ್ಪಿಕೊಳ್ಳುತ್ತದೆ. ಅದಕ್ಕೆ ಕಾರಣ ಉನ್ನತ ಸಮಿತಿಯ ಸದಸ್ಯರಾಗಿದ್ದ ಪ್ರೊ. ರಹಮತ್ ತರಿಕೆರೆಯವರು 2010ರಲ್ಲಿ ಮುಜರಾಯಿ ಕಮಿಷನರ್ ಅವರು ನಡೆಸಿದ ವಿಚಾರಣೆಯಲ್ಲಿ ಬಾಬಾ-ದತ್ತ ಒಂದೇ ಎಂಬ ಅಭಿಪ್ರಾಯವನ್ನು ಮಂಡಿಸಿದ್ದರು ಎಂಬುದು.

ಹಾಗಿದ್ದಲ್ಲಿ ಒಬ್ಬ ವ್ಯಕ್ತಿಯು ಒಂದು ನಿರ್ದಿಷ್ಟ ಅಭಿಪ್ರಾಯವನ್ನು ಹೊಂದಿದ್ದಲ್ಲಿ ಪರಿಣಿತಿ ಮತ್ತು ನಿಷ್ಪಕ್ಷ ಮೌಲ್ಯವಿವೇಚನೆಗಳು ಕಳೆದುಕೊಳ್ಳುತ್ತಾರೆ ಎಂದು ಭಾವಿಸಬಹುದೇ? ಸ್ವಯಂ ಕೋರ್ಟ್‌ಗಳೇ ಯಾವುದಾದರೂ ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಗೆ ಸಲಹೆ ಮಾಡಲು ಒಂದು ಪರಿಣಿತರ ಅಭಿಪ್ರಾಯ(amicus curiae)ಗಳನ್ನು ಪಡೆದುಕೊಳ್ಳುವುದಿಲ್ಲವೇ? ಮೇಲಾಗಿ ಈ ವಿವಾದದಲ್ಲಿ ಆಸಕ್ತರು ಹಾಗೂ ಅಹವಾಲುದಾರರು ಶಾಸನಾತ್ಮಕವಾದ, ಆಡಳಿತಾತ್ಮಕವಾದ, ಕಾನೂನಾತ್ಮಕವಾದ, ಪುರಾತತ್ವ ಶಾಸ್ತ್ರಕ್ಕೆ ಸಂಬಂಧಪಟ್ಟ ಹಾಗೂ ಐತಿಹಾಸಿಕವಾದ ದಾಖಲೆಗಳನ್ನೂ ಹಾಗೂ ಅದನ್ನು ಆಧರಿಸಿದ ಸಂಗತಿಗಳನ್ನೂ ಮುಂದಿಟ್ಟಿದ್ದಾರೆ. ಒಬ್ಬ ನ್ಯಾಯಾಧೀಶರಿಗಾಗಲೀ, ಒಬ್ಬ ಮುಜರಾಯಿ ಅಧಿಕಾರಿಗಾಗಲೀ ಅಥವಾ ಮಂತ್ರಿಗಳಿಗಾಗಲೀ ಕೊಟ್ಟ ಎಲ್ಲಾ ಬಗೆಯ ದಾಖಲೆಗಳ ಮೌಲ್ಯ ನಿರ್ಧಾರ ಮಾಡಲು ಬೇಕಾದ ಪರಿಣಿತಿ ಇರಲು ಸಾಧ್ಯವೇ? ಹೀಗಾಗಿ ಪರಿಣಿತರ ಸಮಿತಿಯ ರಚನೆ ಹೇಗೆ ತಪ್ಪಾದೀತು? ಎಲ್ಲಕ್ಕಿಂತ ಹೆಚ್ಚಾಗಿ, ಈ ಉನ್ನತ ಸಮಿತಿಯು ಶಿಫಾರಸುಗಳನ್ನು ನೀಡುವ ಸಮಿತಿಯೇ ಹೊರತು ನಿರ್ಣಯಗಳನ್ನು ತೆಗೆದುಕೊಳ್ಳುವ ಸಮಿತಿಯಲ್ಲ.

ಈ ಉನ್ನತ ಸಮಿತಿ ನೀಡಿದ ಶಿಫಾರಸುಗಳನ್ನು ಸಂಪುಟ ಉಪ ಸಮಿತಿ ತನ್ನ ವಿವೇಚನೆಯನ್ನು ಬಳಸಿ ತನ್ನ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅದಕ್ಕೆ ಬೇಕಿರುವ ಪರಿಣಿತರ ಸಹಾಯವನ್ನು ಪಡೆದುಕೊಂಡಿದೆ. ಇದು ಸುಪ್ರೀಂ ಕೋರ್ಟ್‌ನ ಆದೇಶದ ಉಲ್ಲಂಘನೆ ಹೇಗಾದೀತು? ಅದನ್ನು ಪಕ್ಷಪಾತಿ ಧೋರಣೆ ಹಾಗೂ ಸುಪ್ರೀಂ ಕೋರ್ಟ್‌ನ ಉಲ್ಲಂಘನೆ ಎನ್ನುವುದಾದಲ್ಲಿ ಬಿಜೆಪಿ ಸರಕಾರದಲ್ಲಿರುವ ಪ್ರತಿಯೊಬ್ಬರೂ ‘‘ದತ್ತಾತ್ರೇಯ ದೇವಸ್ಥಾನ ವಿಮೋಚನಾ’’ ಹೋರಾಟದಲ್ಲಿ ಭಾಗಿಗಳಾಗಿದ್ದವರೇ ಅಲ್ಲವೇ? ಮಂತ್ರಿ ಸುನೀಲ್ ಕುಮಾರ್ ಅಂತೂ ಹೈಕೋರ್ಟ್ ವ್ಯಾಖ್ಯಾನವನ್ನೇ ತನಗೆ ಬೇಕಾದಂತೆ ತಿರುಚಿದವರು. ಹಾಗಿದ್ದಲ್ಲಿ ಈ ಸರಕಾರ ರಚಿಸುವ ಸಮಿತಿಯಾಗಲೀ, ಅದು ತೆಗೆದುಕೊಳ್ಳುವ ತೀರ್ಮಾನವಾಗಲೀ ಪಕ್ಷಪಾತಿಯಾಗಿರುವುದಿಲ್ಲವೇ? ಒಂದೋ ಸ್ವಂತ ಅಭಿಪ್ರಾಯ ಏನೇ ಇದ್ದರೂ ಸರಕಾರದ ಸ್ಥಾನದಲ್ಲಿದ್ದಾಗ ಅಥವಾ ಸರಕಾರ ನೇಮಕ ಮಾಡಿದ ಸ್ಥಾನಗಳಲ್ಲಿದ್ದಾಗ ವ್ಯಕ್ತಿಗಳು ನಿಷ್ಪಕ್ಷವಾಗಿ ನಡೆದುಕೊಳ್ಳುವರು ಎಂದು ನಿರೀಕ್ಷಿಸುವುದಾಗಿದ್ದರೆ, ಹಿಂದಿನ ಸರಕಾರ ರಚಿಸಿದ ಸಮಿತಿಯೂ ನಿಷ್ಪಕ್ಷವಾಗಿ ವಿಚಾರಣೆ ನಡೆಸಿದೆ ಎಂದೇ ಒಪ್ಪಿಕೊಳ್ಳಬೇಕು ಅಥವಾ ಅಧಿಕಾರ ಸ್ಥಾನದಲ್ಲಿದ್ದಾಗಲೂ ವೈಯಕ್ತಿಕ ಅಭಿಪ್ರಾಯಗಳ ಪ್ರಭಾವವಿರುತ್ತದೆ ಎನ್ನುವುದಾದಲ್ಲಿ ಬಾಬಾಬುಡಾನ್ ದರ್ಗಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಸರಕಾರ ಮುಂದಿಡುವ ಯಾವುದೇ ಪ್ರಕ್ರಿಯೆಗಳು ವಿಶ್ವಾಸಾರ್ಹವಲ್ಲ ಎಂಬ ನಿರ್ಧಾರಕ್ಕೆ ಬರಬೇಕು. ಅಲ್ಲವೇ? ಸುಳ್ಳು-6- 1991ರ ಕಾಯ್ದೆ ಈ ಸಂಸ್ಥೆಗೆ ಅನ್ವಯವಾಗುವುದಿಲ್ಲ. ಸತ್ಯ: ಬಾಬರಿ ಮಸೀದಿ-ರಾಮಮಂದಿರ ವಿವಾದ ತಾರಕದಲ್ಲಿದ್ದಾಗ ಭಾರತದ ಪಾರ್ಲಿಮೆಂಟ್ ""Places Of Worship (Special Provisons) Act&1991'' ಎಂಬ ಕಾಯ್ದೆಯನ್ನು ಜಾರಿ ಮಾಡಿದೆ. ಅದರ ಪ್ರಕಾರ ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದವೊಂದನ್ನು ಹೊರತುಪಡಿಸಿ ಹಾಲಿ ಕೋರ್ಟ್‌ಗಳಲ್ಲಿರುವ ಹಾಗೂ ಮುಂದೆ ಬರಬಹುದಾದ ಧಾರ್ಮಿಕ ಉಪಾಸನಾ ಸ್ಥಳಗಳ ಧಾರ್ಮಿಕ ಸ್ವರೂಪಕ್ಕೆ ಸಂಬಂಧಪಟ್ಟ ವಿವಾದಗಳನ್ನು ಈ ಕಾಯ್ದೆಯಂತೆ ಬಗೆಹರಿಸಬೇಕು. ಈ ಕಾಯ್ದೆಯು 1947ರ ಆಗಸ್ಟ್ 15ರಂದು ಉಪಾಸನಾ ಸ್ಥಳಗಳ ಧಾರ್ಮಿಕ ಸ್ವರೂಪ ಯಾವ ರೀತಿಯಿತ್ತೋ ಅದೇ ಯಥಾಸ್ಥಿತಿಯನ್ನು ಉಳಿಸಿಕೊಳ್ಳಬೇಕೆಂದು ವಿಧಿಸುತ್ತದೆ ಹಾಗೂ ಈ ಬಗ್ಗೆ 1991ರ ನಂತರದಲ್ಲಿ ದಾಖಲಾಗುವ ಯಾವುದೇ ವಿವಾದಗಳನ್ನು ಅಥವಾ ಹಾಲಿ ಕೋರ್ಟ್‌ನಲ್ಲಿರುವ ವಿವಾದಗಳನ್ನು ಈ ಕಾಯ್ದೆಗೆ ತಕ್ಕಂತೆ ತೀರ್ಮಾನಿಸಬೇಕೆಂದು ವಿಧಿಸುತ್ತದೆ. ಅಲ್ಲದೆ ಅಂತಹ ಉಪಾಸನಾ ಸ್ಥಳಗಳನ್ನು ಒಂದು ಧಾರ್ಮಿಕ ಸ್ವರೂಪದಿಂದ ಮತ್ತೊಂದು ಧಾರ್ಮಿಕ ಸ್ವರೂಪಕ್ಕೆ ಅಥವಾ ಒಂದೇ ಧರ್ಮದ ಒಂದು ಪಂಥದಿಂದ ಮತ್ತೊಂದು ಪಂಥಕ್ಕೆ ಧಾರ್ಮಿಕ ರೂಪಾಂತರಗೊಳಿಸುವುದು ಶಿಕ್ಷಾರ್ಹ ಅಪರಾಧ. ಸಂಘಿಗಳು ಮುಂದಿಡುತ್ತಿರುವ ವಾದದ ಸತ್ಯಾಸತ್ಯತೆಗಳೇನೇ ಇದ್ದರೂ, ಅವರೂ ಕೂಡಾ 1947ರ ಆಗಸ್ಟ್ 15ರಂದು ಸದರಿ ಧಾರ್ಮಿಕ ಕೇಂದ್ರವು ಒಂದು ದರ್ಗಾ ಆಗಿತ್ತೆಂಬುದನ್ನು ಒಪ್ಪಿಕೊಳ್ಳುತ್ತಾರೆ!

ದರ್ಗಾ ಎಂದರೆ ಹಿಂದೂ-ಮುಸ್ಲಿಮರಿಬ್ಬರು ಶ್ರದ್ಧೆಯಿಂದ ನಡೆದುಕೊಳ್ಳುವ, ಶಾಖಾದ್ರಿ ಆಡಳಿತಾತ್ಮಕ ಮುಖ್ಯಸ್ಥನಾಗಿಯೂ, ಮುಜಾವರ್ ಅವರಿಂದ ನೇಮಕವಾಗುವ ಧಾರ್ಮಿಕ ವಿಧಾನಗಳನ್ನು ನಡೆಸಿಕೊಡುವ ವ್ಯವಸ್ಥೆ ಇರುವ, ಸೌಹಾರ್ದ ಕೇಂದ್ರವಾಗಿರುತ್ತದೆ. ಬಾಬಾಬುಡಾನ್ ದರ್ಗಾದಲ್ಲಿಯೂ ಅದೇ ಪದ್ಧತಿಗಳಿತ್ತೆಂಬುದನ್ನು ಬ್ರಿಟಿಷ್ ದಾಖಲೆಗಳೂ, ಮೈಸೂರು ಸಂಸ್ಥಾನದ ಆಡಳಿತಾತ್ಮಕ ನಡಾವಳಿಗಳು, ಸಂಸ್ಥೆಯಲ್ಲಿ ಲಭ್ಯವಿರುವ ಐತಿಹಾಸಿಕ ಹಾಗೂ ಶಾಸನಾತ್ಮಕ ದಾಖಲೆಗಳೂ, ಸ್ಪಷ್ಟಪಡಿಸುತ್ತವೆ. ಹೀಗಾಗಿ ಅಲ್ಲಿ ಹಿಂದೂ ಅರ್ಚಕರನ್ನು ನೇಮಕ ಮಾಡುವುದು ಮತ್ತು ಹಿಂದೂ ಆಗಮ ಪದ್ಧತಿಯಲ್ಲಿ ಪ್ರತಿಷ್ಠಾಪನೆ, ಧೂಪ, ದೀಪ, ಅರ್ಘ್ಯ, ನೈವೇದ್ಯಗಳಂತಹ ವಿಧಾನಗಳಿಗೆ ಅವಕಾಶ ಮಾಡಿಕೊಡುವುದು 1991ರ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಈ ಪ್ರಕರಣಕ್ಕೆ 1991ರ ಕಾಯ್ದೆ ಅನ್ವಯವಾಗುವುದಿಲ್ಲ ಎಂಬುದಕ್ಕೆ ಕೋರ್ಟ್‌ನ ಮುಂದೆ ಅಹವಾಲುದಾರರು ಮಂಡಿಸಿರುವ ವಾದವೇನೆಂದರೆ ಇದಕ್ಕೆ ಸಂಬಂಧಪಟ್ಟ ವಿವಾದವು 1978ರಲ್ಲೇ ಇತ್ಯರ್ಥವಾಗಿತ್ತು ಎಂಬುದು. ಅದರೆ 1978ರ ವಿವಾದವಿದ್ದದ್ದು ಸಂಸ್ಥೆಯನ್ನು ವಕ್ಫ್ ಬೋರ್ಡಿಗೆ ಸೇರಿಸುವ ಬಗ್ಗೆ ಮತ್ತು ಆ ವಿವಾದದಲ್ಲಿ ಈ ಸಂಸ್ಥೆಯ ಧಾರ್ಮಿಕ ಸ್ವರೂಪವು ದರ್ಗಾ ಎಂದೇ ಇತ್ಯರ್ಥವಾಗಿತ್ತು. ಅಲ್ಲದೆ ಇದು ‘‘ದರ್ಗಾ ಅಲ್ಲ ದೇವಸ್ಥಾನ’’ ಎಂಬ ವಿವಾದ ಕೋರ್ಟ್‌ನ ಮೆಟ್ಟಿಲು ಹತ್ತಿದ್ದು 2003ರಲ್ಲಿ. ಆ ಪ್ರಕರಣದಲ್ಲೇ ಹೈಕೋರ್ಟ್ ಇದು ದರ್ಗಾ ಎಂದು ತೀರ್ಮಾನಿಸಿದ್ದ 1989ರ ಮುಜರಾಯಿ ಕಮಿಷನ್‌ರ ತೀರ್ಪನ್ನು ರದ್ದು ಮಾಡಿ ಹೊಸದಾಗಿ ದಾಖಲೆಗಳನ್ನು ಪರಿಶೀಲಿಸಲು ಆದೇಶಿಸಿತ್ತು. ಹೀಗಾಗಿ ಇದು 1991ರ ಕಾಯ್ದೆ ಜಾರಿಯಾದ ನಂತರ 2003ರಲ್ಲಿ ಹುಟ್ಟಿಕೊಂಡ ಹೊಸ ಪ್ರಕರಣವಾಗಿದ್ದು 1991ರ ಕಾಯ್ದೆಯ ಪ್ರಕಾರ 1947ರ ಆಗಸ್ಟ್ 15ರಂದು ಯಾವ ದರ್ಗಾ ಸ್ವರೂಪದಲ್ಲಿ ಬಾಬಾಬುಡಾನ್ ದರ್ಗಾ ಇತ್ತೋ, ಯಾವ್ಯಾವ ಧಾರ್ಮಿಕ ವಿಧಾನಗಳು ನಡೆಯುತ್ತಿದ್ದವೋ ಅದೇ ಸ್ವರೂಪವನ್ನು ಉಳಿಸಿಕೊಳ್ಳಬೇಕಿರುವುದು ಸರಕಾರದ ಕರ್ತವ್ಯವಾಗಿರುತ್ತದೆ. ಅದರ ಬದಲಿಗೆ ಅಲ್ಲಿ ಹಿಂದೂ ಅರ್ಚಕರನ್ನು ನೇಮಕ ಮಾಡಿ, ಹಿಂದೂ ಆಗಮ ಪದ್ಧತಿಯ ಮೂಲಕ ಪೂಜೆಗಳನ್ನು ನಡೆಸುವುದು ಸಂಸ್ಥೆಯ ಧಾರ್ಮಿಕ ಸ್ವರೂಪವನ್ನೇ ಬದಲಿಸಿದಂತಾಗುತ್ತದೆ. ಮತ್ತದು 1991ರ ಕಾಯ್ದೆಯ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ನಿಷ್ಪಕ್ಷ ನ್ಯಾಯದ ಬುನಾದಿ ನಂಬಿಕೆಯೋ? ಸಾಕ್ಷಿ- ಪುರಾವೆಗಳೋ? 

ಇವೆಲ್ಲದರ ಜೊತೆಗೆ ಹೈಕೋರ್ಟ್ ಒಂದು ಅಪಾಯಕಾರಿ ಅಭಿಪ್ರಾಯವನ್ನೂ ಮಂಡಿಸಿದೆ. 2010ರಲ್ಲಿ ಮುಜರಾಯಿ ಕಮಿಷನರ್ ನಡೆಸಿದ ವಿಚಾರಣೆಯಲ್ಲಿ 1,015 ಜನರು ಕೊಟ್ಟ ಹೇಳಿಕೆ ಮತ್ತು ಪುರಾವೆಗಳನ್ನು ದಾಖಲಿಸಲಾಗಿದೆ. ಅದರಲ್ಲಿ ನೂರಾರು ಜನ ಹಿಂದೂಗಳು ಮತ್ತು ಮುಸ್ಲಿಮರು ಇದೊಂದು ದರ್ಗಾ ಆಗಿತ್ತೆಂದೂ ಹೇಳಿಕೆಯನ್ನು ನೀಡಿದ್ದಾರೆ. ಕೆಲವರು ಮಾತ್ರ ಈ ಸಂಸ್ಥೆಯಲ್ಲಿ ಹಿಂದೂ ಅರ್ಚಕರು ಆಗಮ ಪದ್ಧತಿಯಲ್ಲಿ ಪೂಜೆ ನಡೆಸುತ್ತಿದ್ದರೆಂದು ಹೇಳಿಕೆ ನೀಡಿದ್ದಾರೆ. ಆದರೆ ಅವರಾಗಲೀ, ಅಹವಾಲುದಾರರಾಗಲೀ ಅದನ್ನು ಸಮರ್ಥಿಸುವಂತಹ ಯಾವುದೇ ಪುರಾವೆಯನ್ನಾಗಲೀ ಒದಗಿಸಿಲ್ಲ. ಆದರೂ ಕೋರ್ಟ್ ಈ ಸಂಸ್ಥೆ ದರ್ಗಾ ಆಗಿತ್ತು ಎನ್ನುವವರ ನಂಬಿಕೆಯನ್ನಾ ಗಲೀ, ಇದು ದರ್ಗಾ ಮಾತ್ರವೇ ಆಗಿತ್ತು ಎಂಬ ಪುರಾವೆಗಳನ್ನಾಗಲೀ ಗಣನೆಗೆ ತೆಗೆದುಕೊಳ್ಳದೆ ಈ ಸಂಸ್ಥೆ ದೇವಸ್ಥಾನವಾಗಿತ್ತು ಎನ್ನುವವರ ನಂಬಿಕೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಏಕೆ? ಅಷ್ಟು ಮಾತ್ರವಲ್ಲ. ಅದನ್ನು ಆಧರಿಸಿ ಎರಡು ತಪ್ಪುನಿರ್ಣಯಗಳಿಗೆ ತಲುಪುತ್ತದೆ. ಮೊದಲನೆಯದು ನಂದಾದೀಪ ಹಚ್ಚುವುದು ಮತ್ತು ಪಾದುಕೆ ಪೂಜೆ ಮಾಡುವುದು ಇಸ್ಲಾಮಿಕ್ ನಂಬಿಕೆಗೆ ವಿರುದ್ಧ ಎಂದು ಕೋರ್ಟ್ ಅವಸರದ ಹಾಗೂ ತಪ್ಪುಅಭಿಪ್ರಾಯವನ್ನು ಪಡುತ್ತದೆ ಹಾಗೂ ಪಾದುಕೆ ಪೂಜೆ ಮತ್ತು ನಂದಾದೀಪವನ್ನು ಇನ್ನು ಮುಂದೆ ಮುಜಾವರ ಮಾಡಬಾರದು ಎಂಬ ಇಂಗಿತವನ್ನು ವ್ಯಕ್ತಪಡಿಸುತ್ತದೆ. ಇದು ಭಾರತದಲ್ಲಿ 1,400 ವರ್ಷಗಳಿಂದ ಭಾರತದಲ್ಲಿ ವಿಕಸನಗೊಂಡು ಬಂದಿರುವ ದರ್ಗಾ ಸಂಸ್ಕೃತಿಯ ಅಧಿಕೃತ ನಿರಾಕರಣೆಯಾಗಿದೆ. ಚಡಾವ್ (ಪಾದುಕೆ), ಚಿರಾಗ್(ದೀಪ), ಗೋರಿ (ಗದ್ದುಗೆ)ಗೆ ಚಾದರ್ ಹೊದಿಸುವುದು, ಸಕ್ಕರೆ ಓದಿಸುವುದು, ಗಂಧ ಲೇಪಿಸುವುದು, ತೆಂಗಿನಕಾಯಿ ಒಡೆಯುವುದು-ಇತ್ಯಾದಿಗಳು ಇಲ್ಲಿದ್ದ ಪದ್ಧತಿಗಳೆಂದೂ 1798ರಿಂದ ಲಭ್ಯವಿರುವ ಎಲ್ಲಾ ದಾಖಲೆಗಳು ತಿಳಿಸುತ್ತವೆ. ಹಾಗೆಯೇ ಅವು ಭಾರತದಾದ್ಯಂತ ಹರಡಿಕೊಂಡಿರುವ ಸೂಫಿ ರೂಪದ ಇಸ್ಲಾಮಿಕ್ ನಂಬಿಕೆಗಳ ಭಾಗ. ಅದನ್ನು ಗುರುತಿಸುವಲ್ಲಿ ಕೋರ್ಟ್ ವಿಫಲವಾಗಿದೆ ಮತ್ತು ಇಸ್ಲಾಮಿಕ್ ನಂಬಿಕೆಗಳನ್ನು ಏಕರೂಪಿಯಾಗಿ ಮುಂದಿಡುವ ಸಂಘಿಗಳ ವಾದವನ್ನು ಹೆಚ್ಚಿನ ವಿವೇಚನೆ ಇಲ್ಲದೆ ಒಪ್ಪಿಕೊಂಡುಬಿಟ್ಟಿದೆ. ಇದಕ್ಕಿಂತ ಅಪಾಯಕಾರಿಯಾಗಿರುವುದು ಈ ಸಂಸ್ಥೆಯಲ್ಲಿ ಹಿಂದೂ ಆಗಮ ಪದ್ಧತಿಯ ಪೂಜಾ ವಿಧಾನಗಳಿದ್ದವು ಮತ್ತು ಹಿಂದೂ ಅರ್ಚಕರಿದ್ದರು ಎಂಬ ಸಂಘಿಗಳ ವಾದವನ್ನು ಒಪ್ಪಿಕೊಳ್ಳಲು ಕೋರ್ಟ್ ಪುರಾವೆಗಳಿಗಿಂತ ಅಂತಹವರ ನಂಬಿಕೆಗಳ ನಿಜಾಯತಿಯನ್ನು ಒಂದು ಆಧಾರವಾಗಿ ಪರಿಗಣಿಸುತ್ತದೆ! ಇದಕ್ಕೆ ಪೂರಕವಾಗಿ ಹೈಕೋರ್ಟ್ ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪಿನ 809ನೇ ಪ್ಯಾರಾದಲ್ಲಿರುವ ಈ ವಾಕ್ಯಗಳನ್ನು ಉದ್ಧರಿಸುತ್ತದೆ:

809. ….Once the court has intrinsic material to accept that the faith or the belief is genuine and not a pretence, it must defer to the belief of the worshipper..
(ಅಂದರೆ, ಒಮ್ಮೆ ಕೋರ್ಟ್‌ನ ಬಳಿ ಭಕ್ತಾದಿಗಳ ನಂಬಿಕೆಯು ಪ್ರಾಮಾಣಿಕವೆಂದು ನಂಬಲು ಪುರಾವೆಗಳು ಸಿಕ್ಕಲ್ಲಿ ಕೋರ್ಟ್‌ಗಳು ಭಕ್ತರ ನಂಬಿಕೆಯ ಪರವಾಗಿ ವಾಲಬೇಕು)

ಇದು ಬಾಬರಿ ಮಸೀದಿ ಪ್ರಕರಣದಲ್ಲೂ, ಬಾಬಾಬುಡಾನ್ ದರ್ಗಾ ಪ್ರಕರಣದಲ್ಲೂ ನ್ಯಾಯವನ್ನು ಬಲಿಮಾಡಿದ ಹಾಗೂ ಬಹುಸಂಖ್ಯಾತರ ಹೆಸರಿನಲ್ಲಿ ಸಂಗಳು ಸೃಷ್ಟಿಸುತ್ತಿರುವ ಸುಳ್ಳು ಕಥನವನ್ನು ಅಧಿಕೃತಗೊಳಿಸುವ ಪ್ರಕ್ರಿಯೆಯನ್ನು ಗಟ್ಟಿಗೊಳಿಸುವ ದುರದೃಷ್ಟಕರ ನಿಲುವುಗಳಾಗಿವೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು ಸರಕಾರ ಈ ಪ್ರಕರಣದಲ್ಲಿ ಒದಗಿಸಲೇ ಬೇಕಿರುವ ಸಾರ್ವಜನಿಕ ವಿಚಾರಣಾ ವೇದಿಕೆಯಲ್ಲಿ ಜನರು ಗಟ್ಟಿಯಾಗಿ ಪ್ರಶ್ನಿಸುವ ಅಗತ್ಯವಿದೆ. ಬಾಬಾದತ್ತ ಬೇರೆಯಲ್ಲ- ಸಂಘಿಗಳೆಂದೂ ಬಂಧುಗಳಲ್ಲ

ಬಾಬಾಬುಡಾನ್ ದರ್ಗಾಗೆ ಮೊದಲಿನಿಂದಲೂ ನಡೆದುಕೊಳ್ಳುತ್ತಿದ್ದವರು ಬಡ ಮುಸ್ಲಿಮರು ಮತ್ತು ದಲಿತ-ಶೂದ್ರ ಹಿನ್ನೆಲೆಯ ಬಡ ಅಬ್ರಾಹ್ಮಣ ಹಿಂದೂಗಳು. ಬಡ ಹಿಂದೂ-ಮುಸ್ಲಿಮರ ಬೆರೆತು ಬಾಳಿದ ಬದುಕೇ ಇಲ್ಲಿ ಒಂದು ಸೌಹಾರ್ದಯುತ ಅಧ್ಯಾತ್ಮವಾಗಿದೆ. ಬಾಬಾಬುಡಾನ್ ದರ್ಗಾವನ್ನು ನಾಶಮಾಡಲು ದತ್ತಾತ್ರೇಯ ದೇವಸ್ಥಾನವೆಂದು ಕಥನ ಕಟ್ಟುವುದು ಸಂಘಪರಿವಾರದ ಧಾರ್ಮಿಕ ಧ್ರುವೀಕರಣ ಯೋಜನೆಯ ಭಾಗ. ಅಂತಹ ಕಥನಗಳ ಮೂಲಕ ದಮನಿತರ ಐಕ್ಯತೆಯನ್ನು ಒಡೆಯುವ ಹಾಗೂ ದಲಿತ-ಹಿಂದೂಗಳ ಅಸ್ಮಿತೆಯನ್ನು ಬ್ರಾಹ್ಮಣ ಅಧೀನಗೊಳಿಸಿ ಮುಸ್ಲಿಂ ದ್ವೇಷದ ಎರಕದಲ್ಲಿ ಮರುಕಟ್ಟುವ ಷಡ್ಯಂತ್ರ. ಮುಜಾವರರನ್ನು ದರ್ಗಾದಿಂದ ಹೊರತಳ್ಳುವ ಅವರ ಯೋಜನೆ ಸಾಂಕೇತಿಕವಾಗಿದೆ. ಅದು ಹಿಂದೂ-ಮುಸ್ಲಿಂ ಐಕ್ಯತೆಯ ಇತಿಹಾಸವನ್ನು ನಾಶಮಾಡುವ ಹಾಗೂ ಭವಿಷ್ಯದಲ್ಲೂ ಮುಸ್ಲಿಮರಿಗೆ ಈ ದೇಶದಲ್ಲಿ ಅಸ್ಮಿತೆಯನ್ನು ಹಾಗೂ ಪಾತ್ರವನ್ನು ನಿರಾಕರಿಸುವ ಫ್ಯಾಶಿಸ್ಟ್ ಕಾರ್ಯತಂತ್ರದ ಭಾಗವಾಗಿದೆ. ಹೀಗಾಗಿ ಇದು ಕೇವಲ ದರ್ಗಾ ಉಳಿಸುವ ಹೋರಾಟವಲ್ಲ. ನಮ್ಮ ಸೌಹಾರ್ದ ಇತಿಹಾಸವನ್ನು ಹಾಗೂ ನೆಮ್ಮದಿಯ ಭವಿಷ್ಯವನ್ನೂ ಖಾತರಿಪಡಿಸಿಕೊಳ್ಳುವ ಹೋರಾಟವಾಗಿದೆ.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News