ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಟ್ವೀಟ್: ಸಿ.ಟಿ.ರವಿ ವಿರುದ್ಧ ಆಕ್ರೋಶ

Update: 2021-10-27 14:25 GMT

ಬೆಂಗಳೂರು, ಅ. 27: ‘ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಅನ್ನುವ ನಿಮ್ಮ ವಾದದ ಪ್ರಕಾರ ಈ ‘ಟೊಪ್ಪಿ' ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ?' ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯರ ವಿರುದ್ಧದ ಟ್ವೀಟ್ ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಬುಧವಾರ ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನ ಸಿ.ಟಿ.ರವಿ ಟ್ವಿಟರ್ ಮೂಲಕ ಸಿದ್ದರಾಮಯ್ಯ ಮುಸ್ಲಿಮರ ಪ್ರಾರ್ಥನೆಯೊಂದರಲ್ಲಿ ಪಾಲ್ಗೊಂಡಿದ್ದ ಫೋಟೋ ಶೇರ್ ಮಾಡಿದ್ದು ಫೇಸ್‍ಬುಕ್, ಟ್ವಿಟ್ಟರ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮಾತ್ರವಲ್ಲ, `ನಿಮ್ಮ ರಾಜಕೀಯಕ್ಕಾಗಿ ಕೀಳುಮಟ್ಟದ ಪದ ಬಳಕೆ ಕಪ್ಪುಚುಕ್ಕೆ' ಎಂದು ನೆಟ್ಟಿಗರು ರವಿ ವಿರುದ್ಧ ಕಿಡಿಕಾರಿದ್ದಾರೆ.

ಈ ಮಧ್ಯೆ ಸಿ.ಟಿ.ರವಿ ಟ್ವೀಟ್‍ಗೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ನಾನು ಕಂಬಳಿ ಹಾಕಿಕೊಳ್ಳುತ್ತೇನೆ, ಮುಸ್ಲಿಮರ ಟೋಪಿಯನ್ನು ಧರಿಸುತ್ತೇನೆ, ಕ್ರೈಸ್ತರ ಟೋಪಿಯನ್ನೂ ಧರಿಸುತ್ತೇನೆ, ಹಿಂದೂಗಳ ಟೋಪಿಯನ್ನು ಹಾಕಿಕೊಳ್ಳುತ್ತೇನೆ, ಇಲ್ಲವೆ ಗಾಂಧಿ ಟೋಪಿಯನ್ನಾದರೂ ಧರಿಸುತ್ತೇನೆ, ನನ್ನ ಪ್ರಶ್ನಿಸಲು ಸಿ.ಟಿ.ರವಿ ಯಾರು' ಎಂದು ಖಾರವಾಗಿ ಪ್ರಶ್ನಿಸಿದರು.

ಅಲ್ಲದೆ, ಹಲವು ಮಂದಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕೇಂದ್ರ ಸಚಿವ ರಾಜನಾಥ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ಟೋಪಿ ಧರಿಸಿರುವ ಚಿತ್ರಗಳನ್ನು ಟ್ಯಾಗ್ ಮಾಡಿ, ‘ಇವರು ಯಾರಿಗೆ ಹುಟ್ಟಿದ್ದು ಹೇಳಿ’ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

ಆಕ್ಷೇಪ: ‘ಸಿ.ಟಿ.ರವಿಯವರೇ, ನಿಮ್ಮ ರಾಜಕೀಯ ಏನೇ ಇರಲಿ, ನಿಮ್ಮ ಪದ ಬಳಕೆ ಇಷ್ಟೊಂದು ಕೀಳುಮಟ್ಟವೇ? ನಿಮ್ಮಂತಹವರು ರಾಜಕಾರಣಕ್ಕೆ ಕಪ್ಪು ಚುಕ್ಕೆ. ನಿಮ್ಮ ನಡವಳಿಕೆಗೆ ನಾಚಿಕೆಯಾಗಬೇಕು. ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯ ಏನೇ ಇರಲಿ ಸಂಸ್ಕಾರಯುತ ಬಾಂಧವ್ಯ ಈ ರೀತಿ ಇರಲಿ’ ಎಂದು ಸಿ.ಟಿ.ರವಿಗೆ ಸಲಹೆ ನೀಡಿದ್ದಾರೆ.

ನೀಚತನಕ್ಕೆ ಮಿತಿ ಬೇಡವೇ?: ‘ನಿಮ್ಮ ನೀಚತನಕ್ಕೂ ಒಂದು ಮಿತಿ ಬೇಡವೇ ಮಿಸ್ಟರ್ ಸಿ.ಟಿ.ರವಿ. ಇದೇನಾ ನಿಮ್ಮ ಬಿಜೆಪಿ ಸಂಸ್ಕøತಿ? ವೇದಗಳಲ್ಲಿ ಹೇಳಿಕೊಟ್ಟಿರೋ ಸಂಸ್ಕಾರ ಇದೇನಾ? ನಾಚಿಕೆಯಾಗಲ್ವ ನಿಮಗೆ? ನಿಮ್ಮಂತೋರು ತಾಲಿಬಾನ್ ಸರಕಾರದಲ್ಲಿ ಸಚಿವರಾಗೋಕೆ ಲಾಯಕ್ಕು ನೋಡಿ' ಎಂದು ಹರ್ಷಕುಮಾರ್ ಕುಗ್ವೆ ಟ್ವಿಟ್ಟರ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. ‘ವಿಕೃತ ಮನಸ್ಸಿನ ನಾ(ಲಾ)ಯಕ ಓಟಿ ರವಿ…' ಎಂದು ಎಚ್.ಪ್ರಿಯಾ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ'.. ದಾಸಶ್ರೇಷ್ಠ ಕನಕದಾಸರ ಈ ಮಾತುಗಳನ್ನು ಎಂದೋ ಮರೆತುಬಿಟ್ಟು ಕುಲಗಳನ್ನು ಒಡೆದು, ಸಮಾಜವನ್ನು ಅಸ್ಥಿರಗೊಳಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳುವುದೇ ರಾಜಕೀಯ ಎಂದು ಭಾವಿಸಿದ್ದು ದುರಂತ'

-ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

‘ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು' ಎಂದು ಕಂಬಳಿ ವಿಚಾರವನ್ನು ರಾಜಕೀಯಕ್ಕೆ ತಳುಕು ಹಾಕಿದ್ದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಇದಕ್ಕೆ ‘ಕುರಿ ಕಾಯ್ದಿರೋನು, ಕುರುಬರ ಜಾತಿಯಲ್ಲಿ ಹುಟ್ಟಿರೋನು ನಾನು, ಕಂಬಳಿ ಹಾಕಿಕೊಂಡಿರೋನು ಎಂದು ಹೇಳಿದ್ದೆ. ಅದು ಹೇಗೆ ಅವಮಾನ ಆಗುತ್ತದೆ? ಪ್ರಚಾರಕ್ಕಾಗಿ ಸುಳ್ಳು ಹೇಳುವುದು ಸರಿಯಲ್ಲ'

-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News