ಅಮೆರಿಕ ಮಾರುಕಟ್ಟೆಯಿಂದ ತೆರಳುವಂತೆ ಚೀನಾ ಟೆಲಿಕಾಂ ಸಂಸ್ಥೆಗೆ ಸೂಚನೆ‌

Update: 2021-10-27 16:49 GMT

ವಾಷಿಂಗ್ಟನ್, ಆ.27: ದೇಶದ ಭದ್ರತೆಗೆ ಬೆದರಿಕೆ ಎದುರಾಗಿರುವುದರಿಂದ ಮತ್ತು ಚೀನಾದೊಂದಿಗಿನ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಚೀನಾದ ಟೆಲಿಕಾಂ ಸಂಸ್ಥೆಯನ್ನು ಅಮೆರಿಕಾದ ಮಾರುಕಟ್ಟೆಯಿಂದ ಉಚ್ಚಾಟಿಸಲಾಗಿದೆ ಎಂದು ಅಮೆರಿಕ ಹೇಳಿದೆ.

ಅಮೆರಿಕದಲ್ಲಿ ಟೆಲಿಕಾಂ ಸೇವೆ ಒದಗಿಸುತ್ತಿರುವ 3 ಬೃಹತ್ ಸಂಸ್ಥೆಗಳಲ್ಲಿ ಒಂದಾಗಿರುವ ಚೀನಾ ಟೆಲಿಕಾಂ (ಅಮೆರಿಕ) ಕಾರ್ಪೊರೇಶನ್ ಸಂಸ್ಥೆಯು ನೀಡುತ್ತಿರುವ ಸ್ಥಳೀಯ, ಅಂತರ್‌ರಾಜ್ಯ ಮತ್ತು ಅಂತರಾಷ್ಟ್ರೀಯ ಟೆಲಿಕಾಂ ಸೇವೆಯನ್ನು 60 ದಿನದೊಳಗೆ ಸ್ಥಗಿತಗೊಳಿಸುವಂತೆ ಫೆಡರಲ್ ಸಂವಹನ ಆಯೋಗ(ಎಫ್‌ಸಿಸಿ) ಮಂಗಳವಾರ ಆದೇಶಿಸಿದೆ.

 ಚೀನಾದ ಸಂಸ್ಥೆಯಿಂದ ಕದ್ದಾಲಿಕೆ ಅಥವಾ ಅಮೆರಿಕದ ಮಾಹಿತಿ ಮತ್ತು ಸಂಪರ್ಕ ಜಾಲಕ್ಕೆ ತೊಂದರೆಯಾಗುವ ಭೀತಿಯಿದೆ. ಅಲ್ಲದೆ ಅಮೆರಿಕದ ವಿರುದ್ಧ ಗೂಢಾಚಾರಿಕೆ ಮತ್ತಿತರ ಕಾರ್ಯ ನಡೆಸುವ ಅಪಾಯವಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಭದ್ರತೆಗೆ ಎದುರಾಗಿರುವ ಬೆದರಿಕೆ ಹಿನ್ನೆಲೆಯಲ್ಲಿ ಚೀನಾ ಟೆಲಿಕಾಂ ಸಂಸ್ಥೆಗೆ 2 ದಶಕದ ಹಿಂದೆ ನೀಡಿದ್ದ ಲೈಸೆನ್ಸ್ ಅನ್ನು ಅಮಾನತುಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು 2019ರಲ್ಲಿ ಎಫ್‌ಸಿಸಿ ಹೇಳಿತ್ತು. ಅಲ್ಲದೆ ಚೀನಾದ ಮತ್ತೊಂದು ಸಂಸ್ಥೆ ಚೀನಾ ಮೊಬೈಲ್ ಲಿ. ಅನುಮತಿ ಕೋರಿ ಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು.

ಚೀನಾ ಸರಕಾರದ ಸ್ವಾಮ್ಯ ಮತ್ತು ನಿಯಂತ್ರಣದಲ್ಲಿರುವ ‘ ಚೀನಾ ಟೆಲಿಕಾಂ ಅಮೆರಿಕಾಸ್’ ಸಂಸ್ಥೆಯಿಂದ ರಾಷ್ಟ್ರೀಯ ಭದ್ರತೆಗೆ ಗಣನೀಯ ಅಪಾಯ ಎದುರಾಗಿದೆ ಎಂದು ಎಫ್‌ಸಿಸಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News