‘ಎನ್‍ಇಪಿ' ವಿರೋಧಿಸಿ ಅ.30, 31ಕ್ಕೆ ವಿಚಾರ ಸಂಕಿರಣ

Update: 2021-10-27 17:34 GMT

ಬೆಂಗಳೂರು, ಅ. 27: ಪೂರ್ವತಯಾರಿಯಿಲ್ಲದ ರಾಷ್ಟ್ರೀಯ ಶಿಕ್ಷಣ ನೀತಿ ಹೇರಿಕೆಯಿಂದ ಇನ್ನೂ ಪಠ್ಯಕ್ರಮ ಸಿದ್ಧಗೊಂಡಿಲ್ಲ, ತರಗತಿಗಳು ಆರಂಭಗೊಂಡಿಲ್ಲ. ಹೀಗಾಗಿ ವಿದ್ಯಾರ್ಥಿ-ಶಿಕ್ಷಕರನ್ನೂ ತ್ರಿಶಂಕು ಸ್ಥಿತಿಗೆ ತಳ್ಳಿದೆ. ಎನ್‍ಇಪಿ ಜಾರಿಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಅ.30, 31ರಂದು ದಿಲ್ಲಿಯಲ್ಲಿ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಹಮ್ಮಿಕೊಂಡಿದೆ.

ಅ.30ರ ಬೆಳಗ್ಗೆ 11: ಕ್ಕೆ ಹೊಸದಿಲ್ಲಿ, ಕೊಲ್ಕತ್ತಾ ಹಾಗೂ ಚೆನೈ (ಆಫ್‍ಲೈನ್ ಹಾಗೂ ಆನ್‍ಲೈನ್-ರಾಷ್ಟ್ರವ್ಯಾಪಿ) ನಲ್ಲಿ ಸಮ್ಮೇಳನ ನಡೆಯಲಿದ್ದು, ಸಾಮಾಜಿಕ ಹೋರಾಟಗಾರ ಪ್ರಕಾಶ ಎನ್.ಶಹಾ ಉದ್ಘಾಟಿಸಲಿದ್ದಾರೆ. ಭಾಷಣಕಾರರಾಗಿ ಎಐಎಸ್‍ಇಸಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರೊ.ಅನೀಸ್‍ಕುಮಾರ ರೇ, ಇತಿಹಾಸ ತಜ್ಞ ಪ್ರೊ.ಇರ್ಫಾನ್ ಹಬೀಬ್, ಚಿಂತಕರಾದ ಪ್ರೊ.ರೋಮಿಲಾ ಥಾಪರ್, ಪ್ರೊ.ಸುಖದೇವ್ ಥೋರಟ್, ಪ್ರೊ.ಎಲ್.ಜವಾಹರ್ ನೇಸನ್, ಪ್ರೊ.ಎ.ಕರುಣಾನಂದನ್, ಪ್ರೊ.ಸಚ್ಚಿದಾನಂದ ಸಿನ್ಹಾ, ಪ್ರೊ.ಚಂದ್ರಶೇಖರ್ ಚಕ್ರವರ್ತಿ, ಪ್ರೊ.ತಪೋಧೀರ್ ಭಟ್ಟಾಚಾರ್ಜಿ ಭಾಗವಹಿಸಲಿದ್ದಾರೆ.

ಅ.31ಕ್ಕೆ ಭಾಷಣಕಾರರಾಗಿ ಪಶ್ಚಿಮ ಬಂಗಾಲದ ಮಾಜಿ ಅಡ್ವೋಕೇಟ್ ಜನರಲ್ ಭಿಮಲ್, ಚಿಂತಕರಾದ ಪ್ರೊ.ಆದಿತ್ಯ ಮುಖರ್ಜಿ, ಪ್ರೊ.ಎ.ಕೆ.ರಾಮಕೃಷ್ಣನ್, ಪ್ರೊ.ಬೀರೇಂದ್ರ ಕೆ.ಆರ್.ನಾಯಕ, ಡಾ.ಶ್ಯಾಮಸುಂದರ ದೀಪ್ತಿ, ಪ್ರೊ.ಘನಶ್ಯಾಮ ನಾಥ್ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮವು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಯೂಟ್ಯೂಬ್ ಚಾನೆಲ್ ಮತ್ತು ಫೇಸ್‍ಬುಕ್ ಪೇಜ್ ಆದAll India Save Education Committee ಆನ್‍ಲೈನ್‍ನಲ್ಲೂ ಪ್ರಸಾರವಾಗಲಿದೆ.

ನೂತನ ಶಿಕ್ಷಣ ನೀತಿ ಜಾರಿಯಿಂದಾಗಿ ಶಿಕ್ಷಣ ಕ್ಷೇತ್ರದ ಆಡಳಿತ, ಬೋಧನಾ ಕ್ರಮ, ಪಠ್ಯಕ್ರಮದಲ್ಲಿ ಏಕರೂಪತೆ ತಂದು ಶಿಕ್ಷಣದ ಎಲ್ಲ ಪ್ರಕ್ರಿಯೆಗಳು ಕೇಂದ್ರೀಕರಣಗೊಂಡು ಫ್ಯಾಸೀವಾದಕ್ಕೆಡೆ ಮಾಡುತ್ತದೆ. ಆದುದರಿಂದ ಯಾವುದೇ ಕಾರಣಕ್ಕೂ ಶಿಕ್ಷಣ ನೀತಿ ಜಾರಿ ಮಾಡದೆ, ಅದನ್ನು ಕೂಡಲೇ ಹಿಂಪಡೆಯಬೇಕು ಎಂದು ಸಮಿತಿ ಅಧ್ಯಕ್ಷ ಪ್ರೊ.ಅಲ್ಲಮಪ್ರಭು ಬೆಟ್ಟದೂರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News