'ಆರೆಸ್ಸೆಸ್ ಕೊಟ್ಟ ಖಡ್ಗ, ತ್ರಿಶೂಲ ಬದಿಗಿಡಿ, ಸಂವಿಧಾನದ ಆಶಯ ಎತ್ತಿಹಿಡಿಯಿರಿ': ಕಾಂಗ್ರೆಸ್

Update: 2021-10-28 09:51 GMT

ಬೆಂಗಳೂರು: ಇತ್ತೀಚೆಗೆ ವಿಜಯದಶಮಿ ದಿನ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ನೀಡಿರುವುದನ್ನು ಖಂಡಿಸಿ ಇದೀಗ ಕಾಂಗ್ರೆಸ್ ಪಕ್ಷವು ರಾಜ್ಯಾದ್ಯಂತ ಸಂವಿಧಾನ ದೀಕ್ಷೆಯ ಕಾರ್ಯಕ್ರಮ ನಡೆಸಲಿದೆ.

ಈ ಕುರಿತು ಮಾಹಿತಿ ನೀಡಿರುವ ಕೆಪಿಸಿಸಿ ಶಿಸ್ತು ಸಮಿತಿ ಸದಸ್ಯ ಸಿ.ಎಂ.ಧನಂಜಯ, ಆರೆಸ್ಸೆಸ್ ಕೊಟ್ಟ ಖಡ್ಗ, ತ್ರಿಶೂಲ ಬದಿಗಿಡಿ, ಸಂವಿಧಾನದ ಆಶಯ ಎತ್ತಿಹಿಡಿ’ ಎಂಬ ಅಭಿಯಾನದ ಮೂಲಕ ರಾಜ್ಯದ ಪ್ರತಿ ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲೂ ಸಂವಿಧಾನ ಪ್ರತಿಗಳನ್ನು ಇದೀ ನವೆಂಬರ್ 26ರಿಂದ  ಪದವಿ ಶಿಕ್ಷಣ ಹಂತದಲ್ಲಿರುವ ಯುವಕರಿಗೆ ಉಚಿತವಾಗಿ ವಿತರಿಸುವ ಕಾರ್ಯ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ವಿಜಯದಶಮಿ ದಿನ ಸಂಘಪರಿವಾರದ ಸಂಘಟನೆಗಳು ಯುವಕರ ಕೈಗೆ ತ್ರಿಶೂಲವನ್ನು ಕೊಟ್ಟವು. ಈ ಖಡ್ಗ ಹಾಗೂ ತ್ರಿಶೂಲಗಳನ್ನು ಯಾರ ವಿರುದ್ಧ ಬಳಸಬೇಕು? ತಾವು ತಾವೇ ತ್ರಿಶೂಲಗಳನ್ನು ಹಿಡಿದು ಸಂಘರ್ಷ ನಡೆಸಬೇಕೇ? ಅಥವಾ ಆರೆಸ್ಸೆಸ್ ಸರ್ವನಾಶಕ್ಕೆ ಮುನ್ನುಡಿ ಬರೆದಿರುವ ಬಿಜೆಪಿ ವಿರುದ್ಧ ತ್ರಿಶೂಲ ಆಯುಧಗಳನ್ನು ಬಳಸಲಾಗುತ್ತದೆಯೇ ಎಂಬುದನ್ನು ಸಂಘದವರು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.

ಬಿಜೆಪಿ ಮಾತೃಸಂಸ್ಥೆಗಳು ಯುವಕರಿಗೆ ತ್ರಿಶೂಲ ನೀಡಿ ಹಿಂಸೆಗೆ ಪ್ರಚೋದಿಸುತ್ತಿರುವ ವಿರುದ್ಧ ನಾವು ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಭಾರತ ಸಂವಿಧಾನದ ಪುಸ್ತಕವನ್ನು ಯುವಕರಿಗೆ ನೀಡುತ್ತೇವೆ. ಈ ಮೂಲಕ ಈ ದೇಶದ ಸಂವಿಧಾನದ ಸತ್ವವನ್ನು ಯುವಜನತೆಗೆ ತಲುಪಿಸುವ ಕಾರ್ಯ ಮಾಡುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News