ಡ್ರಗ್ಸ್‌ ಪ್ರಕರಣ: ಕೊನೆಗೂ ಆರ್ಯನ್‌ ಖಾನ್‌ ಗೆ ಜಾಮೀನು

Update: 2021-10-28 15:54 GMT

ಮುಂಬೈ,ಅ.28: ಮಾದಕ ದ್ರವ್ಯ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಕ್ ಖಾನ್ ಅವರ ಪುತ್ರ ಆರ್ಯನ್ ಖಾನ್‌ಗೆ ಮೂರು ವಾರಗಳ ಜೈಲುವಾಸದ ಬಳಿಕ ಗುರುವಾರ ಬಾಂಬೆ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಮಾದಕ ದ್ರವ್ಯಗಳ ನಿಯಂತ್ರಣ ಘಟಕ (ಎನ್‌ಸಿಬಿ)ವು ಅ.3ರಂದು ಮುಂಬೈ ಕರಾವಳಿಯಾಚೆ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿಯ ಮೇಲೆ ದಾಳಿ ನಡೆಸಿ ಆರ್ಯನ್ ಸೇರಿದಂತೆ ಎಂಟು ಜನರನ್ನು ವಶಕ್ಕೆ ತೆಗೆದುಕೊಂಡಿತ್ತು ಮತ್ತು ಪ್ರಾಥಮಿಕ ವಿಚಾರಣೆಯ ಬಳಿಕ ಅವರನ್ನು ಬಂಧಿಸಿತ್ತು. ಅ.8ರಿಂದಲೂ ಮುಂಬೈನ ಆರ್ಥರ್ ರಸ್ತೆ ಜೈಲಿನಲ್ಲಿರುವ ಆರ್ಯನ್‌ಗೆ ಈ ಮೊದಲು ವಿಶೇಷ ಎನ್‌ಸಿಬಿ ನ್ಯಾಯಾಲಯವು ಎರಡು ಬಾರಿ ಜಾಮೀನು ನಿರಾಕರಿಸಿತ್ತು.

ಆರ್ಯನ್ ಬಳಿ ಯಾವುದೇ ಮಾದಕ ದ್ರವ್ಯ ಪತ್ತೆಯಾಗಿಲ್ಲ ಎಂದು ಅವರ ಪರ ವಕೀಲರು ಪದೇಪದೇ ಬೆಟ್ಟು ಮಾಡಿದ್ದರೂ,ಆರ್ಯನ್ ಸಂಚಿನ ಭಾಗವಾಗಿದ್ದಾರೆ ಮತ್ತು ಅಕ್ರಮ ಮಾದಕ ದ್ರವ್ಯ ವ್ಯವಹಾರಗಳಲ್ಲಿ ಅವರು ಭಾಗಿಯಾಗಿದ್ದನ್ನು ಅವರ ವಾಟ್ಸ್‌ಆ್ಯಪ್ ಚಾಟ್‌ಗಳು ಬಹಿರಂಗಗೊಳಿಸಿವೆ ಎಂದು ಎನ್‌ಸಿಬಿ ವಾದಿಸಿತ್ತು.

ಆರ್ಯನ್ ಸ್ನೇಹಿತ ಅರ್ಬಾಝ್ ಮರ್ಚಂಟ್ ಮತ್ತು ಮಾಡೆಲ್ ಮುನ್‌ಮುನ್ ಧಮೇಚಾ ಅವರಿಗೂ ಗುರುವಾರ ಜಾಮೀನು ಭಾಗ್ಯ ಲಭಿಸಿದೆ.

ಆರ್ಯನ್ ಮಾದಕ ದ್ರವ್ಯಗಳನ್ನು ಸೇವಿಸಿದ್ದರು ಎನ್ನುವುದಕ್ಕೆ ಮತ್ತು ಅವರ ಬಳಿ ಮಾದಕ ದ್ರವ್ಯ ಪತ್ತೆಯಾಗಿದ್ದಕ್ಕೆ ಯಾವುದೇ ಸಾಕ್ಷಾಧಾರಗಳು ಇರದಿದ್ದ ಹಿನ್ನಲೆಯಲ್ಲಿ ಅವರ ಬಂಧನ ಮತ್ತು ಜಾಮೀನು ನಿರಾಕರಣೆಯು ಸಮರ್ಥನೀಯವೇ ಎಂಬ ಚರ್ಚೆಗಳನ್ನು ಹುಟ್ಟುಹಾಕಿತ್ತು.

ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಕಳೆದ ಮೂರು ದಿನಗಳಿಂದಲೂ ನಡೆಯುತ್ತಿದ್ದ ಜಾಮೀನು ಅರ್ಜಿ ವಿಚಾರಣೆಯಲ್ಲಿ ಆರ್ಯನ್ ಪರ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರು ವಾದಿಸಿದ್ದರು.

ಆರ್ಯನ್ ಬಂಧನವು ಅವರ ಸಾಂವಿಧಾನಿಕ ಖಾತರಿಗಳ ನೇರ ಉಲ್ಲಂಘನೆಯಾಗಿದೆ. ಅವರಿಗೆ ಬಂಧನದ ಕಾರಣವನ್ನು ಎಂದೂ ತಿಳಿಸಿರಲಿಲ್ಲ ಎಂದು ವಾದಿಸಿದ ರೋಹಟ್ಗಿ,ಈಗ ಅಪ್ರಸ್ತುತವಾಗಿರುವ ಮತ್ತು ಐಷಾರಾಮಿ ಹಡಗು ಪ್ರಯಾಣಕ್ಕೆ ಯಾವುದೇ ಸಂಬಂಧವೇ ಇಲ್ಲದ ಎರಡು ವರ್ಷಗಳ ಹಿಂದಿನ ವಾಟ್ಸ್ ಆ್ಯಪ್ ಚಾಟ್‌ಗಳನ್ನು ಪ್ರಕರಣವು ಸಂಪೂರ್ಣವಾಗಿ ಆಧರಿಸಿದೆ ಎಂದು ಹೇಳಿದರು.

ಇವರೆಲ್ಲ ಎಳೆಯ ವಯಸ್ಸಿನವರಾಗಿದ್ದಾರೆ. ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಬಹುದು ಮತ್ತು ಅವರು ವಿಚಾರಣೆಯನ್ನು ಎದುರಿಸುವ ಅಗತ್ಯವಿಲ್ಲ ಎಂದರು.

ಕಳೆದ ವಾರ ಆರ್ಯನ್‌ಗೆ ಜಾಮೀನು ನಿರಾಕರಿಸಿದ್ದ ವಿಶೇಷ ನ್ಯಾಯಾಲಯವು,ತನ್ನ ಸ್ನೇಹಿತ ಅರ್ಬಾಝ್ ಶೂದಲ್ಲಿ ಚರಸ್‌ನ್ನು ಬಚ್ಚಿಡಲಾಗಿತ್ತು ಎನ್ನುವುದು ಆರ್ಯನ್‌ಗೆ ತಿಳಿದಿತ್ತು ಮತ್ತು ಇದು ‘ಪ್ರಜ್ಞಾಪೂರ್ವಕ ಸ್ವಾಧೀನ’ಕ್ಕೆ ಸಮನಾಗಿದೆ ಎಂದು ಹೇಳಿತ್ತು. ನ್ಯಾಯಾಲಯದ ಈ ನಿಲುವನ್ನು ಪ್ರಶ್ನಿಸಿದ ರೋಹಟ್ಗಿ,‘ಅರ್ಬಾಝ್‌ನ ಶೂನಲ್ಲಿ ಏನು ಪತ್ತೆಯಾಗಿದೆ ಎನ್ನುವುದು ನನ್ನ ನಿಯಂತ್ರಣದಲ್ಲಿಲ್ಲ. ಪ್ರಜ್ಞಾಪೂರ್ವಕ ಸ್ವಾಧೀನದ ಪ್ರಶ್ನೆಯೇ ಇಲ್ಲಿಲ್ಲ. ಅರ್ಬಾಝ್ ನನ್ನ ಸೇವಕನಲ್ಲ,ಆತ ನನ್ನ ನಿಯಂತ್ರಣದಲ್ಲಿಲ್ಲ ’ಎಂದು ವಾದಿಸಿದರು.

ಆರ್ಯನ್ ಮಾದಕ ದ್ರವ್ಯ ಸೇವನೆಯ ಗೀಳನ್ನು ಹೊಂದಿದ್ದಾರೆ ಮತ್ತು ಅವರು ವಾಣಿಜ್ಯಿಕ ಪ್ರಮಾಣದಲ್ಲಿ ‘ಹಾರ್ಡ್ ಡ್ರಗ್ಸ್’ ಖರೀದಿಯಲ್ಲಿ ತೊಡಗಿಕೊಂಡಿದ್ದರು ಎನ್ನುವುದನ್ನು ಅವರ ವಾಟ್ಸ್‌ಆ್ಯಪ್ ಚಾಟ್‌ಗಳು ಬೆಟ್ಟು ಮಾಡುತ್ತಿವೆ. ಮಾದಕ ದ್ರವ್ಯ ಅಪರಾಧಗಳು ಶಿಕ್ಷಾರ್ಹ ನರಹತ್ಯೆಗಿಂತಲೂ ಕೆಟ್ಟದ್ದು ಎಂದು ಸರ್ವೋಚ್ಚ ನ್ಯಾಯಾಲಯವೇ ಹೇಳಿರುವುದರಿಂದ ಇಂತಹ ಪ್ರಕರಣಗಳಲ್ಲಿ ಜಾಮೀನು ನೀಡಿಕೆಯು ನಿಯಮವೇನಲ್ಲ ಎಂದು ಎನ್‌ಸಿಬಿ ಪರ ವಕೀಲ ಅನಿಲ ಸಿಂಗ್ ಅವರು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News