×
Ad

ಪ್ರೊ.ಭಗವಾನ್ ವಿರುದ್ಧ ವಿಚಾರಣೆಗೆ ಅನುಮತಿ ನೀಡಲು ವಿಳಂಬ: ಹೈಕೋರ್ಟ್ ಅಸಮಾಧಾನ

Update: 2021-10-28 18:40 IST

ಬೆಂಗಳೂರು, ಅ.28: 'ರಾಮಮಂದಿರ ಏಕೆ ಬೇಡ?' ಕೃತಿ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಗೂ ಸಮುದಾಯಗಳ ಮಧ್ಯೆ ದ್ವೇಷ ಬಿತ್ತಿದ ಆರೋಪದಡಿ ಸಾಹಿತಿ ಪ್ರೊ. ಕೆ.ಎಸ್.ಭಗವಾನ್ ವಿರುದ್ಧ ವಿಚಾರಣೆಗೆ ಅನುಮತಿ ನೀಡಲು ವಿಳಂಬ ಮಾಡಿದ ರಾಜ್ಯ ಸರಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ವಿಚಾರಣೆಗೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಸರಕಾರ 8 ವಾರದಲ್ಲಿ ಪರಿಗಣಿಸಿ ಇತ್ಯರ್ಥಪಡಿಸಬೇಕು. 

ಒಂದು ವೇಳೆ ನಿಗದಿತ ಅವಧಿಯಲ್ಲಿ ಅರ್ಜಿ ಇತ್ಯರ್ಥಪಡಿಸದಿದ್ದರೆ ಸರಕಾರದ ಮುಖ್ಯ ಕಾರ್ಯದರ್ಶಿ ಪ್ರತಿ ದಿನ 2 ಸಾವಿರ ರೂಪಾಯಿಯಂತೆ ದಂಡ ಪಾವತಿಸಬೇಕು ಎಂದು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.

ಏನಿದು ಪ್ರಕರಣ: ಪ್ರೊ. ಕೆ.ಎಸ್.ಭಗವಾನ್ 2018ರಲ್ಲಿ 'ರಾಮಮಂದಿರ ಏಕೆ ಬೇಡ?' ಎಂಬ ಕೃತಿಯನ್ನು ರಚಿಸಿದ್ದರು. ಇದನ್ನು ಸರಕಾರ ತನ್ನ ಗ್ರಂಥಾಲಯಗಳಿಗೂ ಸರಬರಾಜು ಮಾಡಿತ್ತು. ಆದರೆ, ಕೃತಿಯಲ್ಲಿ ರಾಮ ಹಾಗೂ ಹಿಂದುತ್ವದ ಕಲ್ಪನೆಗಳಿಗೆ, ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗಿದೆ. ಅಲ್ಲದೇ, ಸಮುದಾಯಗಳ ನಡುವೆ ದ್ವೇಷ ಬಿತ್ತಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಇಕ್ಕೇರಿ ನಿವಾಸಿ ಮಹಾಬಲೇಶ್ವರ ಎಂಬುವರು ಸಾಗರ ಜೆಎಂಎಫ್‍ಸಿ ಕೋರ್ಟ್‍ನಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಅಲ್ಲದೇ, ಭಗವಾನ್ ವಿರುದ್ಧ ಐಪಿಸಿ ಸೆಕ್ಷನ್ 153 ಎ (ಧಾರ್ಮಿಕ ಸೌಹಾರ್ದತೆ ಕದಡಿ ದ್ವೇಷ ಬಿತ್ತಿದ) ಐಪಿಸಿ ಸೆಕ್ಷನ್ 295 ಎ (ಪೂಜಾ ಸ್ಥಳ ಅವಮಾನಿಸಿ ಧಾರ್ಮಿಕ ನಂಬಿಕೆಗೆ ಧಕ್ಕೆ) ಹಾಗೂ ಐಪಿಸಿ ಸೆಕ್ಷನ್ 500 (ಮಾನಹಾನಿ) ಅಡಿ ವಿಚಾರಣೆ ನಡೆಸಲು ಪೂರ್ವಾನುಮತಿ ಕೋರಿ 2019ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಸರಕಾರ ಅರ್ಜಿ ಪರಿಗಣಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ ದೂರುದಾರರು ತಮ್ಮ ಅರ್ಜಿಯನ್ನು ಸರಕಾರ ಪರಿಗಣಿಸಿ ಸೂಕ್ತ ಆದೇಶ ಹೊರಡಿಸುವಂತೆ ನಿರ್ದೇಶಿಸಲು ಕೋರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News