ನವೆಂಬರ್ 1ರಿಂದ ಅನಕ್ಷರಸ್ಥ ಕೈದಿಗಳಿಗೆ ಅಕ್ಷರ ಕಲಿಸಲು ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2021-10-28 13:56 GMT

ಬೆಂಗಳೂರು, ಅ. 28: ‘ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಒಟ್ಟು 16 ಸಾವಿರ ಮಂದಿ ಕೈದಿಗಳಿದ್ದು, ಆ ಪೈಕಿ ಆರು ಸಾವಿರಕ್ಕೂ ಅಧಿಕ ಮಂದಿ ಅನಕ್ಷರಸ್ಥರಿದ್ದು ಅವರಿಗೆ ನವೆಂಬರ್ ಒಂದರಿಂದ ಅಕ್ಷರ ಕಲಿಸಲು ಕ್ರಮ ವಹಿಸಲಾಗುವುದು' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಕರ್ನಾಟಕ ಸಿನಿಮಾ ನಿಯಂತ್ರಣ(ತಿದ್ದುಪಡಿ) ನಿಯಮಗಳ ಬಗ್ಗೆ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೆಬ್ಬೆಟ್ಟು ಒತ್ತಿ ಜೈಲಿಗೆ ಬಂದ ಕೈದಿಗಳನ್ನು ಅಕ್ಷರ ಕಲಿಸಿ ಅವರು ಬಿಡುಗಡೆ ಹೊಂದುವ ವೇಳೆ ಅವರಿಗೆ ಸಹಿ ಮಾಡುವ ಮಟ್ಟಿಗೆ ಅಕ್ಷರ ಕಲಿಸಲಾಗುವುದು' ಎಂದರು.

‘ಕೈದಿಗಳಿಗೆ ಅಕ್ಷರ ಕಲಿಕೆಗೆ ಕಾರ್ಯಕ್ರಮ ರೂಪಿಸಲಾಗುತಿದ್ದು, ಅಕ್ಷರ ಕಲಿಸಲು ಜೈಲುಗಳಲ್ಲಿನ ಕೈದಿಗಳನ್ನೇ ಬಳಸಿಕೊಳ್ಳಲಾಗುತ್ತದೆ. ಅವರಿಗೆ ಗೌರವಧನ ಕೊಡಲಾಗುತ್ತದೆ. ಕೈದಿಗಳಿಗೆ ಅಕ್ಷರ ಕಲಿಕೆಯಿಂದ ಅನುಕೂಲವಾಗಲಿದೆ. ಆ ದೃಷ್ಟಿಯಿಂದ ಇಲಾಖೆ ಕೈದಿಗಳಿಗೆ ನವೆಂಬರ್‍ನಲ್ಲಿ ಅಕ್ಷರ ಕಲಿಕೆಗೆ ಮುಂದಾಗಿದೆ' ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಕಾಶನ್ ಪದ್ಧತಿ ಬದಲು: ‘ಸದ್ಯ ಕವಾಯತು ಮಾಡುವ ಸಂದರ್ಭದಲ್ಲಿ ಆಂಗ್ಲ ಭಾಷೆಯಲ್ಲಿ ಕಾಶನ್ ಕೊಡುವ ಪದ್ಧತಿ ಇದ್ದು, ನವೆಂಬರ್ ಒಂದರಿಂದ ಕನ್ನಡದಲ್ಲಿ ಕವಾಯತು ಮಾಡಲಾಗುತ್ತದೆ. ಈಗಾಗಲೇ ತರಬೇತಿ ನೀಡಲಾಗಿದೆ' ಎಂದ ಅವರು, ‘ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಉದ್ಧಟತನ ಮಾಡಿದರೆ ಮೊಕದ್ದಮೆ ಹೂಡುತ್ತೇವೆ' ಎಂದು ಎಚ್ಚರಿಕೆ ನೀಡಿದರು.

ಈ ಪ್ರಕರಣದಲ್ಲಿ ಯಾವುದೇ ಪಕ್ಷದ ಎಷ್ಟೇ ಪ್ರಭಾವಿ ರಾಜಕಾರಣಿ ಇದ್ದರೂ ಬಿಡುವ ಪ್ರಶ್ನೆ ಇಲ್ಲ. ಕಾನೂನಿನ ಚೌಕಟ್ಟಿನಲ್ಲಿ ತಂದು ಕ್ರಮ ಕೈಗೊಳ್ಳಲಾಗುವುದು ಹಾಗೂ ಶಿಕ್ಷೆಯನ್ನು ಕೊಡಿಸಲಾಗುವುದು ಎಂದ ಅವರು, ನಿರ್ಮಾಪಕಸೌಂದರ್ಯ ಜಗದೀಶ್, ಅವರ ಕುಟುಂಬಸದಸ್ಯರಹಲ್ಲೆಪ್ರಕರಣಕ್ಕೆಸಂಬಂಧಿಸಿದಂತೆನನಗೆಮಾಹಿತಿ ಇಲ್ಲ. ಮಾಹಿತಿ ತರಿಸಿಕೊಂಡು ತಿಳಿಸುತ್ತೇನೆ ಎಂದರು.

ಕಾಯ್ದೆಗೆ ತಿದ್ದುಪಡಿ: ‘ಕರ್ನಾಟಕ ಸಿನಿಮಾ ನಿಯಂತ್ರಣ ಕಾಯ್ದೆ'ಗೆ ಪುನಃ ತಿದ್ದುಪಡಿ ತರುತ್ತಿದ್ದೇವೆ. ಮುಂಚೆ ಬಹಳ ದೊಡ್ಡ ಕೊಠಡಿ ಇರಬೇಕಿತ್ತು, ಪರಿಕರ ದೊಡ್ಡದಿಡಬೇಕಿತ್ತು. ಈಗ ತಂತ್ರಜ್ಞಾನ ಬದಲಾಗಿದೆ. ಇತ್ತಿಚಿನ ತಾಂತ್ರಿಕತೆ ದೃಷ್ಟಿಯಿಂದ ಯಾವ ಬದಲಾವಣೆ ಅಗತ್ಯವಿದೆ ಎಂದು ಸಭೆಯಲ್ಲಿ ಚರ್ಚೆಯಾಗಿದೆ. ಬೇರೆ ಬೇರೆ ಇಲಾಖೆಯವರ ಸಲಹೆ ಪಡೆಯಲಾಗಿದೆ. ಸಿನಿಮಾ ತಯಾರಕರೊಂದಿಗೆ ಈ ಹಿಂದೆ ಸಮಾಲೋಚನೆ ಮಾಡಲಾಗಿದೆ ಎಂದು ಅವರು ಹೇಳಿದರು.

‘ಪರವಾನಿಗೆ ಶುಲ್ಕ ರಿಯಾಯಿತಿ, ಪರವಾನಗೆ ಶುಲ್ಕ 5 ವರ್ಷಕ್ಕೊಮ್ಮೆ ನೀಡುವುದು ಸೇರಿದಂತೆ ಪೈರೆಸಿ ಪಿಡುಗು ಸಮಸ್ಯೆ ನಿವಾರಣೆಗೆ ಕ್ರಮದ ಬಗ್ಗೆ ಚರ್ಚೆ ಮಾಡಲಾಗಿದೆ. ಪೈರೆಸಿ ಕಂಡು ಹಿಡಿದು, ಆರೋಪಿಗಳನ್ನು ಪತ್ತೆ ಮತ್ತು ಕಣ್ಗಾವಳಿಕೆ ಹಾಗೂ ಶಿಕ್ಷೆ ಕೊಡಿಸಲು ಸಿಸಿಬಿ ಮತ್ತು ಸೈಬರ್ ಅಪರಾಧ ವಿಭಾಗದ ತಂಡದ ಜಂಟಿ ಕಾರ್ಯಾಚರಣೆ ಪಡೆ ರಚಿಸಲಾಗಿದೆ' ಎಂದು ಅವರು ವಿವರಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News