ಜಾತಿಗೊಂದು ನಿಗಮ ರಚನೆಗೆ ಅವಕಾಶವಿದೆಯೇ ತಿಳಿಸಿ, ಇಲ್ಲವೇ ನಿಷೇಧಿಸಿ: ಹೈಕೋರ್ಟ್ ಗೆ ಪ್ರೊ.ರವಿವರ್ಮ ಕುಮಾರ್ ಮನವಿ

Update: 2021-10-28 14:25 GMT

ಬೆಂಗಳೂರು, ಅ.28: ‘ಕೆಲ ಜಾತಿ ಕೇಂದ್ರಿತ ಮಂಡಳಿ ರಚಿಸಿ ಅವುಗಳಿಗೆ ಸರಕಾರದ ಬೊಕ್ಕಸದಿಂದ ಹಣ ನೀಡಲಾಗುತ್ತಿದೆ. ಹಾಗೆ ಮಾಡಲು ಅವಕಾಶವಿದ್ದರೆ ಹೇಳಿ, ಇಲ್ಲವಾದಲ್ಲಿ ಈ ಪ್ರವೃತ್ತಿಗೆ ನಿಷೇಧ ಹೇರಬೇಕು. ಈ ದೃಷ್ಟಿಯಿಂದ ಪ್ರಕರಣವನ್ನು ತುರ್ತಾಗಿ ಆಲಿಸಬೇಕು' ಎಂದು ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್ ಅವರು ಗುರುವಾರ ಹೈಕೋರ್ಟ್ ಪೀಠಕ್ಕೆ ಮನವಿ ಮಾಡಿದ್ದಾರೆ.

ಜಾತಿ ಆಧಾರದಲ್ಲಿ ನಿಗಮ ಮಂಡಳಿಗಳನ್ನು ಸ್ಥಾಪಿಸಿದ ಸರಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ.25ರಂದು ಅಂತಿಮವಾಗಿ ಆಲಿಸಿ ವಿಲೇವಾರಿ ಮಾಡಲಾಗುವುದು ಎಂದು ಹೈಕೋರ್ಟ್ ಹೇಳಿದೆ.

ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಜೆ.ಶ್ರೀನಿವಾಸನ್ ಮತ್ತು ವಕೀಲ ಎಸ್.ಬಸವರಾಜು ಎಂಬುವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠವು ನಡೆಸಿತು. 

ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಜೆ.ಶ್ರೀನಿವಾಸನ್ ಪರವಾಗಿ ವಾದಿಸಿದ ಮಾಜಿ ಅಡ್ವೊಕೇಟ್ ಜನರಲ್, ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್ ಅವರು, ''ಜು.26ರಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಕ್ಕೂ ಮುನ್ನ ಬಿ.ಎಸ್.ಯಡಿಯೂರಪ್ಪ ಅವರು ಜು.19ರಂದು ರಾಜ್ಯದಲ್ಲಿ ಶೇ. 13ರಷ್ಟು ಮತ ಪ್ರಮಾಣ ಹೊಂದಿರುವ ಬಲಾಢ್ಯ ಒಕ್ಕಲಿಗ ಸಮುದಾಯದ ಹೆಸರಿನಲ್ಲಿ ಮಂಡಳಿ ರಚಿಸಿ ಆದೇಶ ಮಾಡಿದ್ದರು. ಜಾತಿಯಾಧಾರಿತವಾಗಿ ಮಂಡಳಿಗಳನ್ನು ರಚಿಸಿ ಅವುಗಳಿಗೆ ಅನುದಾನ ನೀಡುವ ಕ್ರಿಯೆ ನಡೆಯುತ್ತಿದೆ. ಅಲ್ಲದೇ, ಆ ಮಂಡಳಿಗಳ ಅಧ್ಯಕ್ಷ ಸ್ಥಾನ ಮತ್ತು ಸಿಬ್ಬಂದಿಯನ್ನಾಗಿ ರಾಜಕಾರಣಿಗಳ ಸಂಬಂಧಿ ಮತ್ತು ಬೆಂಬಲಿಗರನ್ನು ನೇಮಕ ಮಾಡಲಾಗುತ್ತಿದೆ'' ಎಂದು ಪೀಠಕ್ಕೆ ತಿಳಿಸಿದರು. 

ಇನ್ನೂ ಕೆಲ ಜಾತಿ ಕೇಂದ್ರಿತ ಮಂಡಳಿ ರಚಿಸಿ ಅವುಗಳಿಗೆ ಸರಕಾರದ ಬೊಕ್ಕಸದಿಂದ ಹಣ ನೀಡಬಹುದಾಗಿದೆ. ಹಾಗೆ ಮಾಡಲು ಅವಕಾಶವಿದ್ದರೆ ಹೇಳಿ, ಇಲ್ಲವಾದಲ್ಲಿ ಈ ಪ್ರವೃತ್ತಿಗೆ ನಿಷೇಧ ಹೇರಬೇಕು. ಈ ದೃಷ್ಟಿಯಿಂದ ಪ್ರಕರಣವನ್ನು ತುರ್ತಾಗಿ ಆಲಿಸಬೇಕು ಎಂದು ಮನವಿ ಮಾಡುತ್ತಿದ್ದೇನೆ. ಇಂದೇ ಮನವಿಯ ವಿಚಾರಣೆ ಆರಂಭಿಸಿದರೆ ಮನವಿ ನಿರ್ವಹಣೆಯ ಪ್ರಶ್ನೆಗೆ ಉತ್ತರಿಸಲು ಸಿದ್ಧವಿದ್ದೇನೆ ಎಂದರು.

ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ವಾದಿಸಿ, ಹಿಂದಿನ ನ್ಯಾಯಮೂರ್ತಿಗಳು 20 ದಿನಗಳಿಗೂ ಹೆಚ್ಚು ಕಾಲ ನಿರಂತರವಾಗಿ ಪ್ರಕರಣದ ವಿಚಾರಣೆ ನಡೆಸಿದ್ದಾರೆ. ರಾಜ್ಯ ಸರಕಾರವು ಸಮಗ್ರವಾದ ಆಕ್ಷೇಪಣೆಯನ್ನು ಸಿದ್ಧಪಡಿಸಿದ್ದು, ನವೆಂಬರ್ ಎರಡು ಅಥವಾ ಮೂರನೆ ವಾರದಲ್ಲಿ ವಿಚಾರಣೆ ನಡೆಸಿದರೆ ಅಂದು ವಾದಿಸಲಾಗುವುದು ಎಂದರು.

ಈ ಮಧ್ಯೆ, ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿಯ ಪರವಾಗಿ ವಾದಿಸಿದ ಹಿರಿಯ ವಕೀಲ ಎಸ್.ವಿಜಯ್ ಶಂಕರ್ ಅವರು ವಾದಿಸಿದರು. ವಿಚಾರಣೆ ಆರಂಭವಾಗುತ್ತಿದ್ದಂತೆ ವಿವಿಧ ಮಂಡಳಿಗಳಿಗೆ ಸರಕಾರ ಹಂಚಿಕೆ ಮಾಡಿರುವ ಅನುದಾನ ಮತ್ತು ಮಂಡಳಿಗಳು ಅನುದಾನ ವ್ಯಯಿಸಿರುವುದರ ಕುರಿತಾದ ವರದಿಯನ್ನು ಸಲ್ಲಿಸುವಂತೆ ಹಿಂದೆ ನ್ಯಾಯಾಲಯ ಆದೇಶಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಅನುಪಾಲನಾ ವರದಿ ಸಲ್ಲಿಸಲಾಗಿದೆ ಎಂದು ಸರಕಾರದ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಮರಾಠಾ ಅಭಿವೃದ್ಧಿ ಮಂಡಳಿ ಸೇರಿ ಇತರೆ ಮಂಡಳಿಗಳನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News