ಡ್ರಗ್ಸ್ ಜಾಲ ಪ್ರಕರಣ: ಕೇರಳ ಮಾಜಿ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರನಿಗೆ ಹೈಕೋರ್ಟ್‍ನಿಂದ ಜಾಮೀನು

Update: 2021-10-28 17:32 GMT

ಬೆಂಗಳೂರು, ಅ.28: ಡ್ರಗ್ಸ್ ಜಾಲದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಮುಹಮ್ಮದ್ ಅನೂಪ್ ಜತೆ ಹಣಕಾಸು ವ್ಯವಹಾರ ನಡೆಸಿರುವ ಪ್ರಕರಣದಲ್ಲಿ ಕಳೆದೊಂದು ವರ್ಷದಿಂದ ನ್ಯಾಯಾಂಗ ಬಂಧನದಲ್ಲಿದ್ದ ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಜಾರಿ ನಿರ್ದೇಶನಾಲಯ(ಇಡಿ) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ (ಪಿಎಂಎಲ್‍ಎ) ದಾಖಲಿಸಿರುವ ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಆರೋಪಿ ಬಿನೀಶ್ ಕೊಡಿಯೇರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಪೀಠ, ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಿಡಿಸಿದೆ. ಬಿನೀಶ್ ಕೊಡಿಯೇರಿಯನ್ನು 2020ರ ಅ.29ರಂದು ಇಡಿ ಅಧಿಕಾರಿಗಳು ಬಂಧಿಸಿದ್ದರು.

ಪ್ರಕರಣವೇನು: ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತನಾಗಿರುವ ಮೊಹಮ್ಮದ್ ಅನೂಪ್ ಜತೆ ಹಣಕಾಸು ವಹಿವಾಟು ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ಅಧಿಕಾರಿಗಳು ಬಿನೀಶ್ ಕೊಡಿಯೇರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. 

ಈ ವೇಳೆ ಶೆಲ್ ಕಂಪೆನಿ(ನಕಲಿ ಸಂಸ್ಥೆ)ಗಳ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿದ್ದು ವಿಚಾರ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪಿಎಂಎಲ್‍ಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. 

ವಿಚಾರಣೆ ವೇಳೆ ಹಲವು ಶೆಲ್ ಕಂಪೆನಿಗಳ ಮೂಲಕ ವಿದೇಶಗಳಿಗೆ ಹಣ ರವಾನಿಸಿದ ಅಂಶಗಳು ಬೆಳಕಿಗೆ ಬಂದಿವೆ ಎಂದು ಇಡಿ ಆರೋಪಿಸಿ, ನಗರದ 34ನೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಬಿನೀಶ್ ಗೆ ಜಾಮೀನು ನೀಡಲು ವಿಚಾರಣಾ ನ್ಯಾಯಾಲಯ ನಿರಾಕರಿಸಿತ್ತು. ನಂತರ ಬಿನೀಶ್ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News