ಪಾಂಡವಪುರ: ದಲಿತರಿಗೆ ಕ್ಷೌರ ನಿರಾಕರಣೆ; ಅಂಗಡಿ ಮಾಲಕನಿಗೆ ತರಾಟೆ

Update: 2021-10-28 15:57 GMT

ಮಂಡ್ಯ, ಅ.28: ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ ಅಂಗಡಿ ಮಾಲಕನಿಗೆ ಸ್ಥಳೀಯ ದಲಿತ ಮುಖಂಡರು ತರಾಟೆಗೆ ತೆಗೆದುಕೊಂಡಿರುವ ಘಟನೆ ಪಾಂಡವಪುರ ತಾಲೂಕಿನ ಕಣಿವೆಕೊಪ್ಪಲು ಗ್ರಾಮದಲ್ಲಿ ಗುರುವಾರ ನಡೆದಿದ್ದು, ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗ್ರಾಮದ ಮೆನ್ಸ್ ಬ್ಯೂಟಿ ಪಾರ್ಲರ್ ಒಂದರ ಮಾಲಕ ಕುಮಾರ್ ಎಂಬುವರು ದಲಿತರಿಗೆ ಕ್ಷೌರ ಮಾಡದೆ ನಿರಾಕರಿಸಿದ್ದಾರೆಂದು ವಿಷಯ ತಿಳಿದ ಗ್ರಾಮದ ದಲಿತ ಮುಖಂಡ ಹಾಗೂ ಸಮಾಜ ಪರಿವರ್ತನೆ ಸಂಘಟನೆಯ ಚಲುವರಾಜು ಎಂಬುವರು ಸ್ಥಳಕ್ಕೆ ತೆರಳಿ ಪ್ರಶ್ನಿಸಿದ್ದಾರೆ.

ಎಲ್ಲಿಯೂ ಅಸ್ಪೃಶ್ಯತೆ ಆಚರಿಸುವಂತಿಲ್ಲ. ಸಂವಿಧಾನ ಅದನ್ನು ನಿಷೇಧಿಸಿದೆ. ನಿನ್ನದು ಸಾರ್ವಜನಿಕ ಸೇವೆ. ಹಾಗಾಗಿ ಎಲ್ಲರಿಗೂ ತಾರತಮ್ಯವಿಲ್ಲದೆ ಸೇವೆ ಮಾಡಬೇಕು. ಆದರೂ, ದಲಿತರಿಗೆ ಕ್ಷೌರ ಮಾಡುತ್ತಿಲ್ಲವೇಕೆ ಎಂದು ಚಲುವರಾಜು ತರಾಟೆಗೆ ತೆಗೆದುಕೊಂಡಿದ್ದಾರೆ.

ನೀನು ಪಬ್ಲಿಕ್‍ನಲ್ಲಿ ಅಂಗಡಿ ಮಡಗಿಬಿಟ್ಟು ದಲಿತರಿಗೆ, ಹಿಂದುಳಿದವರಿಗೆ ಕ್ಷೌರ ಮಾಡುವುದಿಲ್ಲವೆಂದರೆ ಅರ್ಥವೇನು? ನೀನು ಜಾತಿ ನಿಂದನೆ ಮಾಡುತ್ತಿದ್ದಿ. ಬೆಳಗ್ಗೆಯಿಂದ ಇಬ್ಬರು ಹಿಂದುಳಿದವರಿಗೆ ಕಟಿಂಗ್, ಶೇವಿಂಗ್ ಮಾಡಿಲ್ಲ. ಏಕೆ ಮಾಡಲ್ಲ ಹೇಳು ನೀನು ಎಂದು ಚಲುವರಾಜು ಕೇಳಿದರು.

ಮೊದಲಿನಿಂದಲೂ ಮಾಡುತ್ತಿಲ್ಲ. ಈಗಲೂ ಮಾಡುವುದಿಲ್ಲ. ಇದನ್ನು ಗ್ರಾಮದ ಯಜಮಾನರು ಒಪ್ಪುವುದಿಲ್ಲ. ಹಾಗಾಗಿ ನಾನು ದಲಿತರಿಗೆ ಕ್ಷೌರ ಮಾಡುತ್ತಿಲ್ಲವೆಂದು ಅಂಗಡಿ ಮಾಲಕ ಕುಮಾರ್ ಚಲುವರಾಜು ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾನೆ. 

ತನ್ನ ಮಾತಿಗೆ ಕಿವಿಗೊಡದ ಹಿನ್ನೆಲೆಯಲ್ಲಿ ಕುಪಿತಗೊಂಡ ಚಲುವರಾಜು ಮತ್ತು ಇತರ ಕೆಲವು ದಲಿತ ಯುವಕರು ಪ್ರತಿಭಟನೆ ನಡೆಸಿದ್ದು, ವಿಷಯ ತಿಳಿದ ಪೊಲೀಸರು ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಗ್ರಾಮದ ಮುಖಂಡರು ಮತ್ತು ದಲಿತ ಮುಖಂಡರು ಸಮ್ಮುಖದಲ್ಲಿ ಮಾತುಕತೆ ನಡೆದು ಇನ್ನು ಮುಂದೆ ಈ ರೀತಿ ಆಗದಂತೆ ಗ್ರಾಮಸ್ಥರು ಒಪ್ಪಿಕೊಂಡಿದ್ದು, ನಂತರ, ದಲಿತರನ್ನು ಕರೆದು ಕ್ಷೌರ ಮಾಡಿಸಲಾಯಿತು.

ಚಲುವರಾಜು ಮಾತನಾಡಿ, ಮಾತುಕತೆ ಮುಖಾಂತರ ಪ್ರಕರಣ ಸುಖಾಂತ್ಯಗೊಂಡಿದೆ. ಆದರೆ, ಮತ್ತೆ ಇದು ಮರುಕಳಿಸಿದರೆ ತೀವ್ರ ಪ್ರತಿಭಟನೆ ಜತೆಗೆ, ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಘಟನೆ ವಿಡೀಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತಗೊಂಡಿದ್ದು, ಸ್ಥಳೀಯ ಶಾಸಕ ಸಿ.ಎಸ್.ಪುಟ್ಟರಾಜು ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮತ್ತೆ ಪ್ರಕರಣ ಮರುಕಳಿಸದಂತೆ ಕ್ರಮವಹಿಸಬೇಕೆಂದು ಆಗ್ರಹಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News