ನಮ್ಮ ‘ಮಿಷನ್ ಹಾನಗಲ್’ ಚುನಾವಣಾ ಭರವಸೆಯಲ್ಲ, ಸಾಧನೆಗಳು: ಸಿದ್ದರಾಮಯ್ಯ

Update: 2021-10-28 15:20 GMT

ಬೆಂಗಳೂರು, ಅ.28: ಮುಖ್ಯಮಂತ್ರಿಯಾಗಿ ನನ್ನ 5 ವರ್ಷಗಳ ಅಧಿಕಾರಾವಧಿಯಲ್ಲಿ ಹಾನಗಲ್ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಕೊಡುಗೆಗಳು. ನಮ್ಮ ‘ಮಿಷನ್ ಹಾನಗಲ್’ ಚುನಾವಣಾ ಭರವಸೆಯಲ್ಲ, ಸಾಧನೆಗಳು. ಕ್ಷೇತ್ರದ ಅಭಿವೃದ್ಧಿಗಾಗಿ ದುಡಿದ ಕಾಂಗ್ರೆಸ್ ಗೆ ನಿಮ್ಮ ಮತ ಮೀಸಲಿಡಿ. ಹಾನಗಲ್‍ನ ‘ಆಪದ್ಭಾಂದವ’ ಶ್ರೀನಿವಾಸ್ ಮಾನೆ ಅವರನ್ನು ಆಶೀರ್ವದಿಸಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ನಮ್ಮ ಸರಕಾರದ ಐದು ವರ್ಷಗಳ ಆಡಳಿತಾವಧಿಯಲ್ಲಿ ಸಿಂದಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ. ನಾಳಿನ ಉಪ ಚುನಾವಣೆಯಲ್ಲಿ ನಮ್ಮ ಶ್ರಮಕ್ಕೆ ಮತದ ರೂಪದಲ್ಲಿ ಕೂಲಿ ನೀಡಿ ಎಂದು ಮನವಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಅಪಪ್ರಚಾರಕ್ಕೆ ಕಿವಿಗೊಡದಿರಿ, ಪ್ರಚಾರ ಇಲ್ಲದ ನಮ್ಮ ಸಾಧನೆಯ ಮರೆಯದಿರಿ. ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಜನರ ಗೆಲುವು. ಶ್ರೀನಿವಾಸ್ ಮಾನೆ ಹಾಗೂ ಅಶೋಕ್ ಮನಗೂಳಿ ಅವರನ್ನು ಆಶೀರ್ವದಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಹಾನಗಲ್ ಕ್ಷೇತ್ರಕ್ಕೆ ಕಾಂಗ್ರೆಸ್ ಸರಕಾರದ ಕೊಡುಗೆಗಳು: 6.47 ಕೋಟಿ ರೂ.ವೆಚ್ಚದಲ್ಲಿ 1,15,232 ಮಕ್ಕಳಿಗೆ 6,69,252 ಮೊಟ್ಟೆ ಹಂಚಿಕೆ. ವಿವಿಧ ನಿಗಮಗಳಡಿ ತಾಲೂಕಿನ 825 ಫಲಾನುಭವಿಗಳಿಗೆ 3.48 ಕೋಟಿ ರೂ.ಸಾಲ ಹಾಗೂ ಸಹಾಯಧನ ಸೌಲಭ್ಯ. ಗಂಗಾಕಲ್ಯಾಣ ಯೋಜನೆಯಡಿ 144 ಕೊಳವೆ ಬಾವಿ ತೋಡಲಾಗಿದ್ದು, ಅವುಗಳಿಗೆ ವಿದ್ಯುತ್ ಸಂಪರ್ಕ ಹಾಗೂ ಪಂಪ್‍ಸೆಟ್ ವಿತರಣೆ.

ಸಮಾಜಕಲ್ಯಾಣ ಇಲಾಖೆ ವತಿಯಿಂದ 16,297 ವಿದ್ಯಾರ್ಥಿಗಳಿಗೆ 3.16 ಕೋಟಿ ವಿದ್ಯಾರ್ಥಿವೇತನ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ 9,804 ವಿದ್ಯಾರ್ಥಿಗಳಿಗೆ 2.10 ಕೋಟಿ ರೂ.ವಿದ್ಯಾರ್ಥಿವೇತನ. 4.53 ಕೋಟಿ ರೂ.ವೆಚ್ಚದಲ್ಲಿ 3253 ರೈತರಿಗೆ ಜಮೀನಿನಲ್ಲಿ ಸೂಕ್ಷ್ಮ ನೀರಾವರಿ ಘಟಕಗಳ ಅನುಷ್ಠಾನ.

ಕೃಷಿ ಚಟುವಟಿಕೆಗಳ ಉತ್ತೇಜನಕ್ಕಾಗಿ ಒಟ್ಟು 32.51 ಕೋಟಿ ರೂ.ಅನುದಾನ, ತಾಲೂಕಿನಲ್ಲಿ ತಾಯಂದಿರ ಮರಣ ಪ್ರಮಾಣ ಶೇ.3ರಷ್ಟು ಇಳಿಕೆ. 12,744 ಸದಸ್ಯರನ್ನು ಹೊಂದಿರುವ 686 ಸ್ತ್ರೀಶಕ್ತಿ ಗುಂಪುಗಳಿಗೆ 1.28 ಕೋಟಿ ರೂ.ಸುತ್ತು ನಿಧಿ. ಮಾತೃಪೂರ್ಣ ಯೋಜನೆಯಡಿ 4291 ತಾಯಂದಿರಿಗೆ 1,66,400 ಊಟ ವಿತರಣೆ, 34 ಕೋಟಿ ರೂ.ವೆಚ್ಚದಲ್ಲಿ ತಿಳ್ಳಕವಳ್ಳಿ ಏತ ನೀರಾವರಿ ಯೋಜನೆಯ ಅನುಷ್ಠಾನ. 37,309 ವಿದ್ಯಾರ್ಥಿಗಳಿಗೆ 2.17 ಕೋಟಿ ರೂ.ವೆಚ್ಚದಲ್ಲಿ ಉಚಿತ ಬಸ್‍ಪಾಸ್.

ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆಯಡಿ 1 ಕೋಟಿ ರೂ.ವೆಚ್ಚದಲ್ಲಿ 3172 ಮನೆಗಳಿಗೆ ವಿದ್ಯುತ್ ಸಂಪರ್ಕ. 94 ನೂತನ ಶಾಲಾ ಕೊಠಡಿಗಳ ನಿರ್ಮಾಣ, 50 ಕೊಠಡಿಗಳ ದುರಸ್ತಿ ಕಾಮಗಾರಿಗೆ 9 ಕೋಟಿ ರೂ.ವಿನಿಯೋಗ, 16,904 ರೈತರಿಗೆ 55.82 ಕೋಟಿ ರೂ.ವೆಚ್ಚದಲ್ಲಿ ಅಲ್ಪಾವಧಿ ಹಾಗೂ ಮಧ್ಯಮಾವಧಿ ಸಾಲ ವಿತರಣೆ.

ಸಿಂದಗಿ ಕ್ಷೇತ್ರಕ್ಕೆ ಕಾಂಗ್ರೆಸ್ ಸರಕಾರದ ಕೊಡುಗೆಗಳು: 53 ಲಕ್ಷ ರೂ.ವೆಚ್ಚದಲ್ಲಿ 5783 ಗ್ರಾಮೀಣ ಶೌಚಾಲಯ ನಿರ್ಮಾಣ, 272 ಕೊಳವೆ ನೀರು ಸರಬರಾಜು ಯೋಜನೆ ಅನುಷ್ಠಾನ, 80,778 ಪಡಿತರ ಚೀಟಿಗಳ ವಿತರಣೆ, ಪಡಸಾಲೆ ಕೇಂದ್ರದಲ್ಲಿ ಒಂದೇ ಸೂರಿನಡಿ ವಿವಿಧ 44 ಸಾರ್ವಜನಿಕ ಸೇವೆಗಳ ಲಭ್ಯತೆ. ಶಾಲಾ ಮಕ್ಕಳಿಗೆ 27,013 ಸೈಕಲ್ ವಿತರಣೆ ಹಾಗೂ 10 ಹೊಸ ಪ್ರಾಥಮಿಕ ಶಾಲಾ ಕಟ್ಟಡಗಳ ನಿರ್ಮಾಣ.

46 ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಹಾಗೂ 12 ಕಿರು ನೀರು ಸರಬರಾಜು ಯೋಜನೆಗಳ ಜಾರಿ, 96 ಕೋಟಿ ರೂ.ವೆಚ್ಚದಲ್ಲಿ ಅನ್ನಭಾಗ್ಯ ಯೋಜನೆಯಡಿ ತಲಾ 7 ಕೆಜಿ ಉಚಿತ ಅಕ್ಕಿ, ಕ್ಷೀರಭಾಗ್ಯ ಯೋಜನೆಯಡಿ 15 ಲಕ್ಷ ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶಯುಕ್ತ ಹಾಲು ವಿತರಣೆ, ವಿವಿಧ ವಿದ್ಯಾರ್ಥಿ ವೇತನ ಯೋಜನೆಯಡಿ ಒಟ್ಟು 46 ಕೋಟಿ ರೂ.ಅನುದಾನ ವಿದ್ಯಾರ್ಥಿಗಳ ಖಾತೆಗೆ ನೇರ ಜಮೆ.

ಕೃಷಿ ಭಾಗ್ಯ ಯೋಜನೆಯಡಿ 3157 ಕೃಷಿ ಹೊಂಡಗಳ ನಿರ್ಮಾಣ, 7264 ರೈತರ 7622 ಹೆಕ್ಟೇರ್ ಕೃಷಿ ಭೂಮಿಗೆ ಹನಿ, ತುಂತುರು ನೀರಾವರಿ ಸೌಲಭ್ಯ, ಸ್ತ್ರೀಶಕ್ತಿ ಗುಂಪುಗಳ ಸದಸ್ಯತ್ವ ಹೊಂದಿರುವ 11,045 ಮಹಿಳೆಯರ ಸ್ವಾವಲಂಬಿ ಬದುಕಿಗೆ ಆರ್ಥಿಕ ನೆರವು, ಮಾತೃಪೂರ್ಣ ಯೋಜನೆಯಡಿ 7778 ತಾಯಂದಿರಿಗೆ ಮಧ್ಯಾಹ್ನದ ಬಿಸಿಯೂಟ. ಉದ್ಯೋಗ ಖಾತ್ರಿ ಯೋಜನೆಯಡಿ 5 ಲಕ್ಷ ಮಾನವ ದಿನಗಳ ಸೃಜನೆ.

ನಿರಂತರ ಜ್ಯೋತಿ ಯೋಜನೆಯಡಿ 6.50 ಕೋಟಿ ರೂ.ವೆಚ್ಚದಲ್ಲಿ 50 ಹಳ್ಳಿಗಳಿಗೆ ದಿನದ 24 ತಾಸು ವಿದ್ಯುತ್. ತಾಲೂಕಿನ ವಿವಿಧ ಕೆರೆ ತುಂಬಿಸುವ ಯೋಜನೆಗಳಿಗೆ 13 ಕೋಟಿ ರೂ.ಅನುದಾನ ಬಳಕೆ. 22140 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 4 ಕೋಟಿ ವಿದ್ಯಾರ್ಥಿ ವೇತನ, ಶಾದಿಭಾಗ್ಯ ಯೋಜನೆಯಡಿ 2.50 ಕೋಟಿ ರೂ.ವೆಚ್ಚ, 495 ಮಂದಿ ಫಲಾನುಭವಿಗಳು, 963 ರೈತರಿಗೆ ಕೃಷಿ ಯಂತ್ರೋಪಕರಣ ಸೇವೆಯಿಂದ ಅನುಕೂಲ ಎಂದು ಸಿದ್ದರಾಮಯ್ಯ ಟ್ವೀಟರ್‍ನಲ್ಲಿ ಮಾಹಿತಿ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News