ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯ ಪರಿಸ್ಥಿತಿ ತೀವ್ರ ಆತಂಕಕಾರಿ: ಅಮೆರಿಕದ ಸಂಸ್ಥೆಯ ವರದಿಯಲ್ಲಿ ಉಲ್ಲೇಖ

Update: 2021-10-28 17:33 GMT
photo:twitter/@nadinemaenza

ವಾಷಿಂಗ್ಟನ್, ಅ.28: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತಿದ್ದು ಅಲ್ಪಸಂಖ್ಯಾತರ ಮೇಲಿನ ದಾಳಿ ಪ್ರಕರಣ ಹೆಚ್ಚುತ್ತಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿನ ಅಮೆರಿಕದ ಆಯೋಗ(ಯುಎಸ್‌ಸಿಐಆರ್‌ಎಫ್)ನ ಅಧ್ಯಕ್ಷೆ ನ್ಯಾಡಿನ್ ಮಯೆಂಝಾ ಆಗ್ರಹಿಸಿದ್ದಾರೆ.

ಅಲ್‌ಜಝೀರಾ ಸುದ್ಧಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಭಾರತದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ ಪ್ರಕರಣ, ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ), ಹೋರಾಟಗಾರರು, ಕಾರ್ಯಕರ್ತರು, ಪ್ರತಿಭಟನಾಕಾರರನ್ನು ಜೈಲಿಗಟ್ಟುವುದು ಮುಂತಾದ ವಿಷಯಗಳಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಯುಎಸ್‌ಸಿಐಆರ್‌ಎಫ್, ಧಾರ್ಮಿಕ ಸ್ವಾತಂತ್ರ ಮತ್ತು ವಿದೇಶಿ ಕಾರ್ಯನೀತಿಯ ಬಗ್ಗೆ ಅಮೆರಿಕ ಅಧ್ಯಕ್ಷ, ಅಮೆರಿಕ ಸಂಸತ್ತು ಹಾಗೂ ಅಮೆರಿಕದ ವಿದೇಶಾಂಗ ಇಲಾಖೆಗೆ ಶಿಫಾರಸು ಮಾಡುತ್ತದೆ. ಆಯೋಗದ ಈಗಿನ ಅಧ್ಯಕ್ಷೆ ನ್ಯಾಡಿನ್ ಈ ಹಿಂದೆ ಆಯೋಗದ ಆಯುಕ್ತರಾಗಿ ಹಾಗೂ ಉಪಾಧ್ಯಕ್ಷರಾಗಿ ಕಾರ್ಯನಿವಹಿರ್ಸಿದ ಅನುಭವಿ.

ಅಲ್‌ಜಝೀರಾದೊಂದಿಗಿನ ಸಂದರ್ಶನದಲ್ಲಿ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳಿವು:

ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ: ಭಾರತದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರವು ಹಿಂದು ರಾಷ್ಟ್ರೀಯವಾದಿ ನೀತಿಯನ್ನು ಪ್ರೋದರಿಂದ ಧಾರ್ಮಿಕ ಸ್ವಾತಂತ್ರ್ಯ ವ್ಯವಸ್ಥಿತವಾಗಿ ಉಲ್ಲಂಘನೆಯಾಗುತ್ತಿದೆ. ಇದು ಮುಸ್ಲಿಮ್, ಕ್ರಿಶ್ಚಿಯನ್, ಸಿಖ್, ದಲಿತರು(ಈ ಹಿಂದೆ ಅಸ್ಪಶ್ಯರು ಎಂದು ಕರೆಸಿಕೊಳ್ಳುತ್ತಿದ್ದವರು) ಹಾಗೂ ಆದಿವಾಸಿಗಳು ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ನ್ಯಾಡಿನ್ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಪ್ರಸ್ತಾವಿತ ಎನ್‌ಆರ್‌ಸಿಯಿಂದ ದೇಶದಾದ್ಯಂತ ಮುಸ್ಲಿಮರು ಹಕ್ಕಿನಿಂದ ವಂಚಿತರಾಗುವ ಅಪಾಯವಿದೆ, ಯಾಕೆಂದರೆ ಈ ಕಾಯ್ದೆಯು ನೆರೆದೇಶಗಳಾದ ಅಫ್ಗಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ನೆಲೆ ಕಲ್ಪಿಸುವ ಉದ್ದೇಶ ಹೊಂದಿದೆ, ಆದರೆ ಎನ್‌ಆರ್‌ಸಿಯಿಂದ ಅತಂತ್ರವಾಗುವ ಮುಸ್ಲಿಮರಿಗೆ ಯಾವ ಪರಿಹಾರ ಸೂತ್ರವನ್ನೂ ಇದರಲ್ಲಿ ಕಲ್ಪಿಸಲಾಗಿಲ್ಲ. ತಮ್ಮ ಪೌರತ್ವವನ್ನು ಸಾಬೀತುಪಡಿಸುವ ದಾಖಲೆಯನ್ನು ಒದಗಿಸಲು ವಿಫಲವಾಗುವವರು ದೇಶರಹಿತರಾಗಿ ಗಡೀಪಾರಿಗೆ ಮತ್ತು ಬಂಧನಕ್ಕೂ ಒಳಗಾಗುವ ಪರಿಸ್ಥಿತಿಯಿದೆ.

2019ರಲ್ಲಿ ಅಸ್ಸಾಂನಲ್ಲಿ ಸಿದ್ಧಪಡಿಸಲಾದ ಎನ್‌ಆರ್‌ಸಿ ಪಟ್ಟಿಯಿಂದ ಸುಮಾರು 1.9 ಮಿಲಿಯನ್ ವ್ಯಕ್ತಿಗಳ ಹೆಸರನ್ನು ಕೈಬಿಡಲಾಗಿದ್ದು ಇದರಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿದೆ. ಎನ್‌ಆರ್‌ಸಿಯಿಂದ ಹೊರಗುಳಿಯುವ ಹಿಂದುಗಳಿಗೆ 2019ರಲ್ಲಿ ರೂಪಿಸಲಾದ ಸಿಎಎಯಡಿ ರಕ್ಷಣೆ ದೊರಕುತ್ತದೆ. * ಸಿಎಎ ವಿರೋಧಿ ಹೋರಾಟಗಾರರ ಬಂಧನ: ನಾಗರಿಕ ಸಮಾಜದ ಧ್ವನಿಯನ್ನು ಹತ್ತಿಕ್ಕುವ ಭಾರತ ಸರಕಾರದ ಕ್ರಮ ತೀವ್ರ ಕಳವಳಕಾರಿ. ಕಾನೂನುಬಾಹಿರ ಕೃತ್ಯ ತಡೆ ಕಾಯ್ದೆ(ಯುಎಪಿಎ), ಆರ್ಥಿಕ ಕೊಡುಗೆ ನಿಯಂತ್ರಣ ಕಾಯ್ದೆ(ಎಫ್‌ಸಿಆರ್‌ಎ)ಯಂತಹ ನೀತಿಗಳನ್ನು ದುರುಪಯೋಗಪಡಿಸಿಕೊಂಡು ಭಾರತ ಸರಕಾರ ಧಾರ್ಮಿಕ ಕಿರುಕುಳದ ಬಗ್ಗೆ ವರದಿ ಮಾಡುವ ವ್ಯಕ್ತಿಗಳನ್ನು, ಎನ್‌ಜಿಒಗ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದೆ.

ಭಾರತವನ್ನು ಸಿಪಿಸಿ ಪಟ್ಟಿಯಲ್ಲಿ ಸೇರಿಸಲು ಶಿಫಾರಸು: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪಕ ಉಲ್ಲಂಘನೆಯಾಗುತ್ತಿರುವುದರಿಂದ ಆ ದೇಶವನ್ನು ಸಿಪಿಸಿ(ವಿಶೇಷ ಆತಂಕದ ದೇಶಗಳ ಪಟ್ಟಿ)ಗೆ ಸೇರಿಸಬೇಕೆಂದು ಆಯೋಗ 2021ರ ವಾರ್ಷಿಕ ವರದಿಯಲ್ಲಿ ಶಿಫಾರಸು ಮಾಡಿದೆ. ಇತರ ಕೆಲವು ದೇಶಗಳನ್ನೂ ಪಟ್ಟಿಗೆ ಸೇರಿಸುವಂತೆ ನಾವು ಶಿಫಾರಸು ಮಾಡಿದ್ದೇವೆ. ಇಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಪರಿಗಣಿಸದೆ ಧಾರ್ಮಿಕ ಸ್ವಾತಂತ್ರ್ಯದ ವಿಷಯಕ್ಕೆಮಾತ್ರ ಗಮನ ನೀಡಲಾಗುತ್ತದೆ.

* ಹಿಂದು ರಾಷ್ಟ್ರೀಯವಾದ ನೀತಿಗೆ ಬಿಜೆಪಿ ಸರಕಾರದ ಪ್ರೋ ಅಲ್ಪಸಂಖ್ಯಾತರ ಮೇಲೆ ನಡೆಯುವ ಧಾರ್ಮಿಕ ಕಿರುಕುಳಕ್ಕೂ ಬಿಜೆಪಿ ಸರಕಾರದ ಕಾರ್ಯನೀತಿಗೂ ಸಂಬಂಧವಿಲ್ಲ. ಇದು ರಾಜಕೀಯೇತರ ವಿಷಯಕ್ಕೆ ಸಂಬಂಧಿಸಿ ನಡೆಯುವ ಪ್ರಕರಣ ಎಂಬ ಭಾರತ ಸರಕಾರದ ವಾದದಲ್ಲಿ ಹುರುಳಿಲ್ಲ. ಧಾರ್ಮಿಕ ಹಕ್ಕುಗಳ ಉಲ್ಲಂಘನೆಯು ಮುಸ್ಲಿಮ್, ಕ್ರಿಶ್ಚಿಯನ್, ಸಿಖ್, ದಲಿತರು ಹಾಗೂ ಆದಿವಾಸಿಗಳು ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಭಾರತ ಸರಕಾರ ಹಾಗೂ ಸರಕಾರೇತರ ಸಂಘಟನೆಗಳು ಸಾಮಾಜಿಕ ಮಾಧ್ಯಮವನ್ನು ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಮತ್ತು ತಪ್ಪು ಮಾಹಿತಿ ಪ್ರಸಾರಕ್ಕೆ ಬಳಸುವುದನ್ನು ಮುಂದುವರಿಸಿದೆ.

2014ರಲ್ಲಿ ಅಧಿಕಾರಕ್ಕೆ ಬಂದಂದಿನಿಂದ ಪ್ರಧಾನಿ ನರೇಂದ್ರ ಮೋದಿಯವರ ಹಿಂದು ರಾಷ್ಟ್ರೀಯವಾದಿ ಸರಕಾರ ದೇಶದ ಸುಮಾರು 200 ಮಿಲಿಯನ್ ಮುಸ್ಲಿಮರ ಸಹಿತ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುತ್ತಿರುವ ಆರೋಪ ಎದುರಿಸುತ್ತಿದೆ ಎಂದು ಹೇಳಿರುವ ನ್ಯಾಡಿನ್, ಧಾರ್ಮಿಕ ಸ್ವಾತಂತ್ರದ ಪರಿಸ್ಥಿತಿಯನ್ನು ಗಮನಿಸಿ ಅಮೆರಿಕ ಸರಕಾರಕ್ಕೆ ಕಾರ್ಯನೀತಿಗೆ ಸಂಬಂಧಿಸಿದ ಶಿಫಾರಸು ಮಾಡುವುದಷ್ಟೇ ನಮ್ಮ ಕರ್ತವ್ಯವಾಗಿದೆ. ಆಯೋಗದ ವರದಿಯನ್ನು ತಿರಸ್ಕರಿಸುವುದಾಗಿ ಭಾರತ ಸರಕಾರ ಹೇಳಿರುವುದು ನಮ್ಮ ಸ್ವತಂತ್ರ ಕಾರ್ಯನಿರ್ವಹಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.

 ಸಿಪಿಪಿ ಪಟ್ಟಿ

ವಿಶೇಷ ಕಳವಳದ ಪಟ್ಟಿಯ ದೇಶದಲ್ಲಿ ಭಾರತವನ್ನು ಸೇರಿಸಬೇಕೆಂದು ಆಯೋಗ 2021ರ ವರದಿಯಲ್ಲಿ ಶಿಫಾರಸು ಮಾಡಿದೆ. ಸೌದಿ ಅರೆಬಿಯಾ, ಚೀನಾ, ಇರಾನ್, ಮ್ಯಾನ್ಮಾರ್, ಎರಿಟ್ರಿಯಾ, ನೈಜೀರಿಯಾ, ಉತ್ತರ ಕೊರಿಯಾ, ಪಾಕಿಸ್ತಾನ, ತಜಿಕಿಸ್ತಾನ, ಸಿರಿಯಾ, ರಶ್ಯಾ, ವಿಯೆಟ್ನಾಮ್ ಮತ್ತು ತುರ್ಕ್‌ಮೆನಿಸ್ತಾನ್ ಇದರಲ್ಲಿರುವ ಇತರ 14 ದೇಶಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News