ರೇಷ್ಮೆ ಬೆಳೆಗಾರರಿಗೆ ಗುರುತಿನ ಚೀಟಿ ನೀಡುತ್ತಿರುವುದು ಸಂತಸ ತಂದಿದೆ: ಸಚಿವ ಡಾ.ನಾರಾಯಣ ಗೌಡ

Update: 2021-10-28 16:20 GMT

ಬಳ್ಳಾರಿ, ಅ.28: ರೇಷ್ಮೆ ಇಲಾಖೆ ವತಿಯಿಂದ 1.38 ಲಕ್ಷ ರೇಷ್ಮೆ ಬೆಳೆಗಾರರಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯಕ್ರಮಕ್ಕೆ ರೇಷ್ಮೆ , ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಚಾಲನೆ ನೀಡಿದರು.

ಗುರುವಾರ ಬಳ್ಳಾರಿಯ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡ, ರೇಷ್ಮೆ ಬೆಳೆಗಾರರಿಗೆ ಗುರುತಿನ ಚೀಟಿ(ಐಡಿ ಕಾರ್ಡ್) ಹಾಗೂ ಪಾಸ್‍ಬುಕ್ ವಿತರಿಸುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು.

ನಾನು ರಾಜ್ಯದಾದ್ಯಂತ ಪ್ರವಾಸದಲ್ಲಿದ್ದಾಗ ಶಿವಮೊಗ್ಗ ಹಾಗೂ ಚಿತ್ರದುರ್ಗದಲ್ಲಿ ರೈತರ ಜೊತೆ ಸಂವಾದ ನಡೆಸಿದಾಗ ರಾಮನಗರ ಮಾರುಕಟ್ಟೆಗೆ ತೆರಳುವ ಸಂದರ್ಭದಲ್ಲಿ ಪೊಲೀಸರು ಹಾಗೂ ಮತ್ತಿತ್ತರಿಂದ ತೊಂದರೆಯಾಗುತ್ತಿದೆ ಎಂದು ದೂರು ನೀಡಿದ್ದರು. ಆ ದೂರನ್ನು ಆಧಾರಿಸಿ ರೇಷ್ಮೆ ಬೆಳೆಗಾರರಿಗೆ ಐಡಿ ಕಾರ್ಡ್ ಹಾಗೂ ಪಾಸ್ ಬುಕ್ ವಿತರಿಸುವ ನಿರ್ಣಯಕೈಗೊಂಡು ಅದನ್ನು ಈ ದಿನ ಸಾಕಾರಗೊಳಿಸಿದ್ದೇವೆ ಎಂದು ಅವರು ಹೇಳಿದರು.

ರೇಷ್ಮೆ ಬೆಳೆಗಾರರಿಗೆ ಐಡಿ ಕಾರ್ಡ್ ವಿತರಿಸುತ್ತಿರುವುದು ಸಂತಸ ತಂದಿದೆ. ಇದರಿಂದ ಪೊಲೀಸರು ರೇಷ್ಮೆ ಬೆಳೆಗಾರರ ವಾಹನ ತಡೆಯುವುದು ಹಾಗೂ ಅವರಿಂದ ಆಗುತ್ತಿದ್ದ ಕಿರುಕುಳ ತಪ್ಪಲಿದೆ ಎಂದು ನಾರಾಯಣಗೌಡ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಸೋಮಶೇಖರ್ ರೆಡ್ಡಿ ಮಾತನಾಡಿ, ಅತ್ಯಂತ ಕ್ರಿಯಾಶೀಲ ಸಚಿವರಾದ ನಾರಾಯಣಗೌಡ ಅವರು, ರೇಷ್ಮೆ ಇಲಾಖೆಯಲ್ಲಿ ಅದ್ಭುತವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರೇಷ್ಮೆ ಬೆಳೆಗಾರರಿಗೆ ಐಡಿ ಕಾರ್ಡ್ ನೀಡುತ್ತಿರುವುದು ಉತ್ತಮವಾದ ಕಾರ್ಯ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್, ರೇಷ್ಮೆ ಇಲಾಖೆ ಆಯುಕ್ತ ಪೆದ್ದಪ್ಪಯ್ಯ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ ಹಾಗೂ ಬಳ್ಳಾರಿ ಸಿಇಒ ನಂದಿನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News