ಆನ್‍ಲೈನ್ ಗೇಮ್ ನಿಷೇಧ: ಡ್ರೀಮ್ 11 ಸಂಸ್ಥಾಪಕರ ವಿರುದ್ಧ ಕ್ರಮ ಜರುಗಿಸದಂತೆ ಹೈಕೋರ್ಟ್ ಸೂಚನೆ

Update: 2021-10-28 16:49 GMT

ಬೆಂಗಳೂರು, ಅ.28: ಆನ್‍ಲೈನ್ ಗೇಮ್ ನಿಷೇಧಿಸಿ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದಿರುವ ನಿಯಮಗಳ ಪ್ರಕಾರ ಡ್ರೀಮ್ 11 ಗೇಮ್ ಆ್ಯಪ್ ನಡೆಸುತ್ತಿರುವ ಸ್ಪೋರ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕರಾದ ಭವಿತ್ ಶೇಠ್ ಹಾಗೂ ಹರ್ಷ ಜೈನ್ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ.

ತಮ್ಮ ವಿರುದ್ಧ ದಾಖಲಿಸಿರುವ ಎಫ್‍ಐಆರ್ ರದ್ದು ಕೋರಿ ಡ್ರೀಮ್ 11 ಸಂಸ್ಥಾಪಕರಾದ ಭವಿತ್ ಶೇಠ್ ಹಾಗೂ ಹರ್ಷ ಜೈನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಪೊಲೀಸರು ಮುಂದಿನ ವಿಚಾರಣೆವರೆಗೂ ಯಾವುದೇ ಬಲವಂತದ ಕ್ರಮ ಜರುಗಿಸಬಾರದು ಎಂದು ಸೂಚಿಸಿ ವಿಚಾರಣೆಯನ್ನು ನ.9ಕ್ಕೆ ಮುಂದೂಡಿದೆ.

ಏನಿದು ಪ್ರಕರಣ: ಇತ್ತೀಚೆಗೆ ಆನ್‍ಲೈನ್ ಗೇಮ್ ನಿಷೇಧಿಸಿರುವ ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯ್ದೆಯ ಸೆಕ್ಷನ್ 79 ಹಾಗೂ 80 ರ ಅಡಿ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಡ್ರೀಮ್ 11 ಆ್ಯಪ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ನಾಗರಭಾವಿ ನಿವಾಸಿ ಮಂಜುನಾಥ್ ಎಂಬುವರು ನೀಡಿದ ದೂರಿನ ಮೇರೆಗೆ ಅ.7ರಂದು ಆ್ಯಪ್ ಸಂಸ್ಥಾಪಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

ಈ ಎಫ್‍ಐಆರ್ ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ಸ್ಪೋರ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕರು, ದೂರುದಾರರು ತಮ್ಮ ವಿರುದ್ಧ ಯಾವುದೇ ಆಧಾರವಿಲ್ಲದೆ ಅಸ್ಪಷ್ಟ ಆರೋಪ ಮಾಡಿದ್ದಾರೆ. 'ಡ್ರೀಮ್ 11' ಗೇಮ್ ಆಫ್ ಸ್ಕಿಲ್ ಆಗಿದೆಯೇ ಹೊರತು ಜೂಜು ಅಲ್ಲ. ಹಾಗಿದ್ದೂ ದೂರುದಾರರು ಕರ್ನಾಟಕ ಪೊಲೀಸ್ ಕಾಯ್ದೆ-1963ಕ್ಕೆ ತಂದಿರುವ ತಿದ್ದುಪಡಿ ತಂದು ಗೇಮ್ ಆಫ್ ಚಾನ್ಸ್ ರೀತಿಯ ಜೂಜು ಎಂದು ಭಾವಿಸಿ ದೂರು ದಾಖಲಿಸಿದ್ದಾರೆ. 

ಡ್ರೀಮ್ 11 ಆನ್‍ಲೈನ್ ಗೇಮ್ ಮೂಲಕ ಜನ ಹಣ ಕಳೆದುಕೊಳ್ಳಲಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ವಾಸ್ತವಕ್ಕೆ ದೂರವಾಗಿದ್ದು, ತಮ್ಮ ವಿರುದ್ಧ ದಾಖಲಿಸಿರುವ ಎಫ್‍ಐಆರ್ ರದ್ದುಪಡಿಸಬೇಕು ಎಂದು ಕೋರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News