ಜಮೀನು ಅತಿಕ್ರಮಣ ಆರೋಪ: ಬಿಜೆಪಿ ಶಾಸಕ ಶ್ರೀಮಂತ ಪಾಟೀಲ, ಪುತ್ರರ ವಿರುದ್ಧ ಪ್ರಕರಣ ದಾಖಲು

Update: 2021-10-28 16:33 GMT
ಶ್ರೀಮಂತ ಪಾಟೀಲ

ಬೆಳಗಾವಿ, ಅ.28: ಜಮೀನು ಅತಿಕ್ರಮಣ ಆರೋಪಕ್ಕೆ ಸಂಬಂಧಿಸಿದಂತೆ ಕಾಗವಾಡ ಕ್ಷೇತ್ರದ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ, ಅವರ ಪುತ್ರರಾದ ಶ್ರೀನಿವಾಸ ಮತ್ತು ಯೋಗೇಶ ಸೇರಿ 15ರಿಂದ 16 ಮಂದಿ ವಿರುದ್ಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಗವಾಡ ತಾಲೂಕಿನ ನವಿಲೇಹಾಳ ಗ್ರಾಮದ ನಿವಾಸಿ ದೇವದಾಸ ದೊಂಡಿಬಾ ಶೇರಖಾನೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಶಾಸಕ ಶ್ರೀಮಂತ ಪಾಟೀಲ ಅವರಿಂದ ಜೀವ ಬೇದರಿಕೆ ಇದೆ. ಜನಸಾಮಾನ್ಯರ ಜಮೀನು ಕಸಿದುಕೊಳ್ಳಲು ಅವರು ಮುಂದಾಗಿದ್ದಾರೆ. 

ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಶಾಸಕರು ಮತ್ತವರ ಪುತ್ರರ ಸೂಚನೆ ಮೇರೆಗೆ ಆಶೀಶ ಗಜಾನನ ಪಾಟೀಲ ನೇತೃತ್ವದಲ್ಲಿ ಬಂದ ಕೆಲವರು ನಮ್ಮ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದಲ್ಲದೇ ಜಾತಿ ಪ್ರಸ್ತಾಪಿಸಿ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ. ಜಮೀನು ಬಿಟ್ಟು ಹೋಗದಿದ್ದರೆ ಕೊಲೆ ಮಾಡುತ್ತೇವೆ ಎಂದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಜಮೀನಿನ ವಿಚಾರದಲ್ಲಿ ನ್ಯಾಯಾಲಯದಲ್ಲಿ ಸಿವಿಲ್ ದಾವೆ ನಡೆಯುತ್ತಿದೆ. ಈ ನಡುವೆ, ಶಾಸಕರು ಬೆಂಬಲಿಗರ ಮೂಲಕ ನಮಗೆ ತೊಂದರೆ ಕೊಡುತ್ತಿದ್ದಾರೆ. ಆ ಜಮೀನು ನನಗೆ ಸೇರಿದ್ದಾಗಿದೆ. ಅಲ್ಲಿ ಶಾಸಕರು ಗೊಬ್ಬರ ಕಾರ್ಖಾನೆ ನಿರ್ಮಿಸಲು ಮುಂದಾಗಿದ್ದಾರೆ. ನಮ್ಮ ಜಮೀನಿನ ಬಗ್ಗೆ ಕೇಳಲೂ ಹೋದರೆ ಬೆಂಬಲಿಗರ ಮೂಲಕ ಹಲ್ಲೆ ಮಾಡಿಸುತ್ತಿದ್ದಾರೆ ಎಂದು ದೇವದಾಸ ಆರೋಪಿಸಿದ್ದಾರೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಮಂತ ಪಾಟೀಲ, ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಈ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಪೊಲೀಸರು ತನಿಖೆ ನಡೆಸಿ ಸತ್ಯಾಸತ್ಯತೆ ಬಯಲಿಗೆಳೆಯಲಿ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News