ಪ್ರವಾಸೋದ್ಯಮ ಪುನಃಶ್ಚೇತನಕ್ಕೆ ಅಗತ್ಯ ಕ್ರಮ: ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ

Update: 2021-10-28 16:37 GMT

ಬೆಂಗಳೂರು, ಅ. 28: ‘ವಿಶ್ವದಲ್ಲಿ ಕೋವಿಡ್-19 ಸಾಂಕ್ರಾಮಿಕ ಉಲ್ಬಣಿಸಿರುವುದರಿಂದ ಇಡೀ ಜಗತ್ತಿನಲ್ಲಿ ಪ್ರವಾಸೋದ್ಯಮ ತೀರ ತಳಮಟ್ಟಕೆ ಕುಸಿದಿದೆ. ಪ್ರವಾಸೋದ್ಯಮ ಕ್ಷೇತ್ರವನ್ನು ಭಾರತದಲ್ಲಿ ಮತ್ತೆ ಪುನಃಶ್ಚೇತನಗೊಳಿಸಲು ಸರಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ.ಕಿಶನ್ ರೆಡ್ಡಿ ತಿಳಿಸಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಏರ್ಪಡಿಸಿದ್ದ ‘ದಕ್ಷಿಣ ಭಾರತದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರ ಸಮ್ಮೇಳನ'ದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಎಲ್ಲ ಇಲಾಖೆಗಳು, ಖಾಸಗಿ ಸಂಸ್ಥೆಗಳು, ಸಂಘ ಸಂಸ್ಥೆಗಳೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಿ, ಹಲವು ಸಭೆಗಳನ್ನು ಕರೆದು ಚರ್ಚಿಸಲಾಗಿದೆ ಎಂದು ಹೇಳಿದರು.

‘ದೇಶದಲ್ಲಿ ಪ್ರವಾಸೊದ್ಯಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ಈಶಾನ್ಯ ರಾಜ್ಯಗಳ ಸಮಾವೇಶವನ್ನು ಈಗಾಗಲೇ ನಡೆಸಿ ಮಾಹಿತಿಯನ್ನು ಪಡೆಯಲಾಗಿದೆ. ಅದರಂತೆ ಇಂದು ದಕ್ಷಿಣ ಭಾರತದ 8 ರಾಜ್ಯಗಳ ಸಮಾವೇಶವನ್ನು ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಎಂಟು ರಾಜ್ಯಗಳ ಪ್ರವಾಸೋದ್ಯಮ ಮತ್ತು ಸಂಸ್ಕøತಿ ಸಚಿವರು, ಸಂಬಂಧಿಸಿದ ಇಲಾಖಾ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ. ಮಹತ್ವದ ಚರ್ಚೆಯ ನಂತರ ಪ್ರವಾಸೋದ್ಯಮ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮವಹಿಸಲಾಗುವುದು' ಎಂದು ಅವರು ವಿವರಿಸಿದರು.

‘ಶೀಘ್ರದಲ್ಲಿಯೇ ಡಿಜಿಟಲ್ ಪ್ರವಾಸೋದ್ಯಮದ ಬಗ್ಗೆ ಚರ್ಚಿಸುವಸಲುವಾಗಿ ಸಚಿವರುಗಳ ಸಭೆ ನಡೆಸಲಾಗುವುದು. ಪಾಶ್ಚಿಮಾತ್ಯ ದೇಶಗಳ ಹೆಚ್ಚು ಜನರನ್ನು ಆಕರ್ಷಿಸುವ ಪ್ರವಾಸಿ ತಾಣಗಳನ್ನು ಶೀಘ್ರದಲ್ಲಿಯೇ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಅಗತ್ಯ ಅನುದಾನವನ್ನು ಕೇಂದ್ರ ಸರಕಾರದಿಂದ ಬಿಡುಗಡೆ ಮಾಡಲಾಗುವುದು' ಎಂದು ಅವರು ನುಡಿದರು.

ನಮ್ಮ ದೇಶದಲ್ಲಿ ಇದುವರೆಗೂ ಯಾವ ರಾಜ್ಯದಲ್ಲೂ ಪ್ರವಾಸೋದ್ಯಮ ಪಾಲಿಸಿ(ನೀತಿ) ಇಲ್ಲ. ಅದನ್ನು ಕೂಡಲೇ ಜಾರಿಗೆ ತರಲು ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೇಂದ್ರ ಪ್ರವಾಸೋದ್ಯಮ ರಾಜ್ಯ ಸಚಿವ ಅಜಯ್ ಭಟ್, ರಾಜ್ಯ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಒಳಗೊಂಡಂತೆ ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News