ಮೈಸೂರು: ಕನ್ನಡ ರಾಜ್ಯೋತ್ಸವ ಅಂಗವಾಗಿ 'ಕನ್ನಡಕ್ಕಾಗಿ ನಾವು' ಅಭಿಯಾನಕ್ಕೆ ಧ್ವನಿಯಾದ ನೂರಾರು ವಿದ್ಯಾರ್ಥಿಗಳು

Update: 2021-10-28 18:04 GMT

ಮೈಸೂರು,ಅ.28: ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದ ಓವೆಲ್ ಮೈದಾನದಲ್ಲಿ 11 ಗಂಟೆಗೆ ನಡೆದ ಲಕ್ಷ ಕಂಠಗಳ ಕಾರ್ಯಕ್ರಮದಲ್ಲಿ ಸುಮಂತ್ ವಸಿಸ್ಠ ತಂಡದವರಿಂದ ಮೂಡಿಬಂದ ಸಾಮೂಹಿಕ ಹಾಡಿಗೆ ನೆರೆದಿದ್ದ ನೂರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಧ್ವನಿಗೂಡಿಸಿ ಹಾಡುವ ಮೂಲಕ ಆನಂದಪಟ್ಟರು.

ನಾಡಗೀತೆಯಾದ ಜಯ ಭಾರತ ಜನನಿಯ ತನುಜಾತೆ ಹಾಡಿನ ಪ್ರಾರಂಭದ ಮೂಲಕ ಕುವೆಂಪು ರಚಿತ “ಬಾರಿಸು ಕನ್ನಡ ಡಿಂಡಿಮವ” ನಿಸಾರ್ ಅಹ್ಮದ್ ರಚಿತ “ಜೋಗದ ಸಿರಿ ಬೆಳಕಿನಲಿ” ಹಂಸಲೇಖ ಅವರ “ಹುಟ್ಟಿದರೆ ಕನ್ನಡ ನಾಡಲ್ಲೆ ಹುಟ್ಟಬೇಕು” ಮತ್ತು ಸೋಲಿಲ್ಲದ ಸರದಾರ ಚಿತ್ರದಿಂದ “ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ” ಮತ್ತು ಗಂಧದ ಗುಡಿ ಚಿತ್ರದ “ನಾವಾಡುವ ನುಡಿಯೇ ಕನ್ನಡ ನುಡಿ, ನಾವಿರವ ತಾಣವೆ ಗಂಧದ ಗುಡಿ” ಹಾಡಿಗೆ ನೆರೆದಿದ್ದ ವಿದ್ಯಾರ್ಥಿಗಳು ಮೈ ಮರೆತು ಹಾಡಿದರು.

ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ, ಸಂಸದ ಪ್ರತಾಪ್ ಸಿಂಹ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎ.ಹೇಮಂತ್ ಕುಮಾರ್ ಗೌಡ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿಯ ಸಿಇಒ ಎ.ಎಂ.ಯೋಗೀಶ್, ನಗರ ಪಾಲಿಕೆ ಆಯುಕ್ತ ಜಿ.ಲಕ್ಷ್ಮಿಕಾಂತ್ ರೆಡ್ಡಿ ಸೇರಿದಂತೆ ಇತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News