ಪೆಗಾಸಸ್ ಗೂಢಚಾರಿಕೆ ಕುರಿತು ಸ್ವತಂತ್ರ ತನಿಖೆಗಾಗಿ ‘ಸುಪ್ರೀಂ’ ಆದೇಶ ಸ್ವಾಗತಾರ್ಹ: ಪಿಎಫ್‍ಐ

Update: 2021-10-28 18:06 GMT

ಬೆಂಗಳೂರು, ಅ.28: ನಾಗರಿಕರ ಮೇಲೆ ಅನಧಿಕೃತವಾಗಿ ಪೆಗಾಸಸ್ ತಂತ್ರಾಂಶ ಬಳಸಿ ಗೂಢಚಾರಿಕೆ ನಡೆಸಿದ ಆರೋಪದ ಕುರಿತು ತನಿಖೆ ನಡೆಸಲು ಸ್ವತಂತ್ರ ತಜ್ಞರ ಸಮಿತಿ ರಚಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷರಾದ ಓ.ಎಂ.ಎ.ಸಲಾಮ್ ಸ್ವಾಗತಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರ ನೇತೃತ್ವದ ಪೀಠದ ಆದೇಶವು ಮೋದಿ ಸರಕಾರದ ನಿರಂಕುಶಾಧಿಕಾರದ ಧೋರಣೆಗೆ ನೀಡಿದ ಹೊಡೆತವಾಗಿದೆ. ಸಾಂವಿಧಾನಿಕವಾಗಿ ಖಾತರಿಪಡಿಸಿದ ಖಾಸಗಿತನದ ಹಕ್ಕನ್ನು ಎತ್ತಿಹಿಡಿಯುವಲ್ಲಿ ಈ ತೀರ್ಪು ಪೂರಕವಾಗಿದೆ ಎಂದು ತಿಳಿಸಿದ್ದಾರೆ.

ವಿರೋಧ ಪಕ್ಷದ ನಾಯಕರು, ನಾಗರಿಕ ಹಕ್ಕುಗಳ ಕಾರ್ಯಕರ್ತರು ಮತ್ತು ಸರಕಾರಿ ಏಜೆನ್ಸಿಗಳ ಮುಖ್ಯಸ್ಥರು ಸೇರಿದಂತೆ 40ಕ್ಕೂ ಹೆಚ್ಚು ನಾಗರಿಕರನ್ನು ಸರಕಾರವು ಬೇಹುಗಾರಿಕೆ ನಡೆಸಿದೆ ಎಂಬ ಆರೋಪವು ಭಾರತದಂತಹ ಪ್ರಜಾಪ್ರಭುತ್ವ ಸಮಾಜಕ್ಕೆ ಗಂಭೀರ ಕಳವಳಕಾರಿ ವಿಷಯವಾಗಿದೆ. ಇದು ನಾಗರಿಕರು ಮತ್ತು ರಾಜಕೀಯ ವಿರೋಧಿಗಳನ್ನು ಸಂಭಾವ್ಯ ಶತ್ರುಗಳೆಂದು ಪರಿಗಣಿಸುವ ನಿರಂಕುಶ ಪ್ರಭುತ್ವಗಳ ವಿಶಿಷ್ಟ ನಡವಳಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಸುಪ್ರೀಂಕೋರ್ಟ್ ಇಂದ ಹಲವಾರು ಅವಕಾಶಗಳನ್ನು ನೀಡಲಾಗಿದ್ದರೂ ಕೇಂದ್ರವು ಪ್ರತಿಕ್ರಿಯಿಸಲು ಹಿಂಜರಿಯುತ್ತಿರುವುದು ಆರೋಪದಲ್ಲಿ ಸತ್ಯವಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ನೇರ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತಾಂತ್ರಿಕ ಸಮಿತಿಯ ಸಂಪೂರ್ಣ ತನಿಖೆ ನ್ಯಾಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಒಂದು ಸಮಂಜಸವಾದ ಹೆಜ್ಜೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿ ಬಾರಿಯೂ ರಾಷ್ಟ್ರೀಯ ಭದ್ರತೆಯ ನೆಪವನ್ನು ಮುಂದಿಟ್ಟು ಕೇಂದ್ರ ಸರಕಾರ ಬಚಾವಾಗಲು ಸಾಧ್ಯವಿಲ್ಲ ಎಂಬ ಸುಪ್ರೀಂಕೋರ್ಟ್ ನ ಎಚ್ಚರಿಕೆಯು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಮೋದಿ ಸರಕಾರದ ಕಣ್ಣು ತೆರೆಸಬೇಕು ಎಂದು ಸಲಾಮ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News