ಶ್ರೀರಾಮಸೇನೆ ಕಾರ್ಯಕರ್ತರಿಂದ ಬೆಳಗಾವಿ ಯುವಕನ ಹತ್ಯೆ ಪ್ರಕರಣ: ಡಿಎನ್‍ಎ ಪರೀಕ್ಷೆಗಾಗಿ ಮೃತದೇಹ ಹೊರತೆಗೆಯಲು ನಿರ್ಧಾರ

Update: 2021-10-29 06:04 GMT
Photo: Social media

ಬೆಂಗಳೂರು: ಹಿಂದು ಯುವತಿಯೊಂದಿಗೆ ಪ್ರೇಮ ವ್ಯವಹಾರ ಹೊಂದಿದ್ದಾನೆಂಬ ಕಾರಣಕ್ಕೆ ಇತ್ತೀಚೆಗೆ ಬೆಳಗಾವಿಯಲ್ಲಿ ಹತ್ಯೆಗೀಡಾದ ಅರ್ಬಾಝ್  ಮುಲ್ಲಾ ಎಂಬ ಯುವಕನ ಶವವನ್ನು ಸದ್ಯದಲ್ಲಿಯೇ ಡಿಎನ್‍ಎ ಪರೀಕ್ಷೆಗಾಗಿ ಹೊರತೆಗೆಯುವ ನಿರೀಕ್ಷೆಯಿದೆ. ಇಬ್ಬರು ಶ್ರೀ ರಾಮ ಸೇನೆ ಕಾರ್ಯಕರ್ತರ ಸಹಿತ 10 ಮಂದಿ ಆರೋಪಿಗಳನ್ನು ಈ ಪ್ರಕರಣದಲ್ಲಿ ಹೆಸರಿಸಲಾಗಿದ್ದು ಅವರಿಗೂ ಈ ಹತ್ಯೆಗೂ ಸಂಬಂಧವಿದೆ ಎಂಬುದನ್ನು ದೃಢೀಕರಿಸಲು ಡಿಎನ್‍ಎ ಪರೀಕ್ಷೆ ಸಹಾಯಕವಾಗಲಿದೆ.

ಅರ್ಬಾಝ್‍ನ  ಮೃತದೇಹ ಖಾನಾಪುರ  ಸಮೀಪದ ರೈಲ್ವೆ ಹಳಿಯಲ್ಲಿ ಸೆಪ್ಟೆಂಬರ್ 28ರಂದು ಪತ್ತೆಯಾಗಿದ್ದರೆ ಮರುದಿನ ಆತನ ದಫನ ಕಾರ್ಯ ಖಾನಾಪುರ ದಫನಭೂಮಿಯಲ್ಲಿ ನಡೆದಿತ್ತು.

ಈ ಪ್ರಕರಣದ ಆರೋಪಿಗಳ ಪೈಕಿ ಪುಂಡಲೀಕ ಮಹಾರಾಜ್ ಮತ್ತು ಪ್ರಶಾಂತ್ ಕಲ್ಲಪ್ಪ ಅವರು ಶ್ರೀ ರಾಮ ಸೇನೆ ಹಿಂದೂಸ್ಥಾನ ಸಂಘಟನೆಯ ಕಾರ್ಯಕರ್ತರು ಎಂದು ಹೇಳಲಾಗಿದ್ದರೂ ಸಂಘಟನೆ ಮಾತ್ರ ಈ ಇಬ್ಬರ ಚಟುವಟಿಕೆಗಳು ಹಾಗೂ ಈ ಹತ್ಯೆ ಪ್ರಕರಣದಿಂದ ದೂರ ಸರಿದು ನಿಂತಿದೆ.

ಅರ್ಬಾಝ್ ಪ್ರೀತಿಸುತ್ತಿದ್ದನೆಂದು ಹೇಳಲಾದ ಯುವತಿಯ ಹೆತ್ತವರನ್ನೂ ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

ಅರ್ಬಾಝ್ ಶವ ಯಾವಾಗ ಹೊರತೆಗೆಯಲಾಗುವುದೆಂಬುದು ಖಚಿತವಾಗಿಲ್ಲವಾದರೂ ಸದ್ಯದಲ್ಲಿಯೇ ಪ್ರಕ್ರಿಯೆಯು ಕಂದಾಯ ಇಲಾಖೆ ಸಹಾಯಕ ಆಯುಕ್ತರ ಉಸ್ತುವಾರಿಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ ಯುವಕ ಹತ್ಯೆಯಾದ ಸ್ಥಳದಲ್ಲಿ ಪತ್ತೆಯಾದ ರಕ್ತದ ಮಾದರಿಗಳನ್ನು ಆತನ ಡಿಎನ್‍ಎ ಮಾದರಿಗಳೊಂದಿಗೆ ಹೋಲಿಕೆ ಮಾಡಲಾಗುವುದು. ಅಷ್ಟೇ ಅಲ್ಲದೆ ಆತನನ್ನು ಹತ್ಯೆಗೈಯ್ಯುವ ಮುನ್ನ ಸಾಗಿಸಲಾಗಿದ್ದ ಬೆಳಗಾವಿ ಶ್ರೀ ರಾಮ ಸೇನೆ ಘಟಕಕ್ಕೆ ಸೇರಿದ್ದೆನ್ನಲಾದ ವ್ಯಾನಿನ ಡಿಎನ್‍ಎ ಮಾದರಿಗಳನ್ನೂ  ಶವದಿಂದ ಸಂಗ್ರಹಿಸಲಾಗುವ ಡಿಎನ್‍ಎ ಮಾದರಿಗಳೊಂದಿಗೆ ಹೋಲಿಸಲಾಗುವುದು. ಅರ್ಬಾಝ್ ದೇಹದಲ್ಲಿದ್ದ ಬಟ್ಟೆ ಸಹಿತ ಇತರ ವಸ್ತುಗಳ ಡಿಎನ್‍ಎ ಮಾದರಿಗಳನ್ನೂ  ಪರಿಶೀಲಿಸಲಾಗುವುದು ಎಂದು ತಿಳಿದು ಬಂದಿದೆ.

ಅರ್ಬಾಝ್ ಕುಟುಂಬ ನೀಡಿದ ದೂರಿನ ಪ್ರಕಾರ ಯುವತಿಯ ಕುಟುಂಬವು ಆತನ ಹತ್ಯೆಗಾಗಿ ಆರೋಪಿಗಳಿಗೆ ರೂ 5 ಲಕ್ಷ ಪಾವತಿಸಿತ್ತು. ಇನ್ನೊಂದೆಡೆ ಆರೋಪಿಗಳು ಆತನನ್ನು ಬಿಟ್ಟು ಬಿಡಲು ಆತನ ಕುಟುಂಬದಿಂದ ರೂ 17,000ದಿಂದ ರೂ 90,000 ತನಕ ಬೇಡಿಕೆಯಿರಿಸಿದ್ದರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News