ಬಿಜೆಪಿ ಸೇರುವಂತೆ ನನಗೂ 30 ಕೋ.ರೂ. ಆಫರ್ ಬಂದಿತ್ತು: ಶಾಸಕ ವಿ.ಮುನಿಯಪ್ಪ

Update: 2021-10-29 06:44 GMT

ಚಿಂತಾಮಣಿ, ಅ.29:  ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರಕಾರ ಪತನಗೊಳಿಸಿದ ಬಿಜೆಪಿ ಆಪರೇಶನ್‌ ಕಮಲದ ಮೂಲಕ ಕಾಂಗ್ರೆಸ್‌-ಜೆಡಿಎಸ್‌ 17 ಶಾಸಕರನ್ನು ಖರೀದಿಸುವ ಸಂದರ್ಭದಲ್ಲಿ ಬಿಜೆಪಿ ನಾಯಕರು ನನಗೂ 30 ಕೋಟಿ ರೂ. ಕೊಡಲು ಬಂದಿದ್ದರು. ಆದರೆ ನಾನು ಸೇರಲಿಲ್ಲ ಎಂದು ಮಾಜಿ ಸಚಿವ, ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿ.ಮುನಿಯಪ್ಪ ಹೇಳಿದ್ದಾರೆ.

ಚಿಂತಾಮಣಿ ತಾಲೂಕಿನ ಕೋರ್ಲಪರ್ತಿ ಪರ್ತಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಾಜೆಕ್ಟ್‌ ಪ್ರಜಾ ಪ್ರತಿನಿಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, 10 ವರ್ಷ ಮಂತ್ರಿಯಾಗಿದ್ದ ನಿಮ್ಮನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ಆಮಿಷ ಒಡ್ಡಿದ್ದರು. ಇದನ್ನು ನಾನು ನಿರಾಕರಿಸಿದ್ದು, ನನಗೆ ದುಡ್ಡಿನ ಅವಶ್ಯಕತೆ ಇದೆ. ಆದರೆ ಈ ಥರಾದ ಹಣ ಬೇಡ ಎಂದು ಅವರನ್ನು ತರಾಟೆಗೈದೆ ಎಂದು ತಿಳಿಸಿದ್ದಾರೆ.

ಬಿಜೆಪಿ ಭ್ರಷ್ಟರ ಪಕ್ಷ. ಅದಕ್ಕೆ ಮತ ನೀಡಿ ಮತ್ತೊಮ್ಮೆ ಮೋಸ ಹೋಗಬೇಡಿ. ಬರುವ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ ಕ್ಷೇತ್ರ ಅಭಿವೃದ್ದಿ ಗೆ ಸಹಕರಿಸಿ ಎಂದರು.

ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುತ್ತೇನೆ ಎಂದು ಬಿಜೆಪಿ ಸರಕಾರ ಇಂದು ಲೂಟಿ ಮಾಡಿಕೊಂಡು ಯುವಜನರನ್ನು ಮರೆತಿದೆ. ಇನ್ನದಾದರೂ ಯುವ ಜನತೆ ಎಚ್ಚೆತುಕೊಂಡು ಬಿಜೆಪಿಯನ್ನು ಕಡೆಗಣಿಸಿ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News