ನಟ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರಿಂದ ಸಂತಾಪ
ಬೆಂಗಳೂರು, ಅ. 29: ಕನ್ನಡ ಚಿತ್ರರಂಗದ ಯುವ ನಟ, ಹಲವು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿ ಜನಮನಗೆದ್ದಿದ್ದ ‘ಪವರ್ ಸ್ಟಾರ್' ಎಂದೇ ಖ್ಯಾತಿಗಳಿಸಿದ್ದ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನಕ್ಕೆ ಮುಖ್ಯಮಂತ್ರಿ ಬವಸರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸ್ಪೀಕರ್ ಕಾಗೇರಿ ಸೇರಿದಂತೆ ಸಚಿವರು ಹಾಗೂ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಶುಕ್ರವಾರ ಬೆಳಿಗ್ಗೆ ಚಿತ್ರನಟ ಪುನೀತ್ ರಾಜ್ ಕುಮಾರ್ ಅವರು ಜಿಮ್‍ನಲ್ಲಿ ಕಸರತ್ತು ಮಾಡುತ್ತಿದ್ದ ವೇಳೆ ಹಠಾತ್ ಲಘು ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಸಮೀಪದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆಂಬ ಸುದ್ಧಿ ಘೋಷಣೆಯಾದ ಕೂಡಲೇ ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಆಸ್ಪತ್ರೆಗೆ ದೌಡಾಯಿಸಿದರು.
ಸಿಎಂ ಆಘಾತ: ‘ಖ್ಯಾತ ನಟ ಪುನೀತ್ ರಾಜ್‍ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದು, ನಾನು ತೀವ್ರ ಆಘಾತಕ್ಕೆ ಒಳಗಾಗಿದ್ದೇನೆ. ಕನ್ನಡಿಗರ ಮೆಚ್ಚಿನ ನಟ ‘ಅಪ್ಪು' ನಿಧನದಿಂದ ಕನ್ನಡ ಹಾಗೂ ಕರ್ನಾಟಕಕ್ಕೆ ಅಪಾರ ನಷ್ಟವಾಗಿದ್ದು, ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಿ, ಅಭಿಮಾನಿಗಳಿಗೆ ಈ ನೋವನ್ನು ಸಹಿಸುವ ಶಕ್ತಿ ನೀಡಲಿಯೆಂದು ಪ್ರಾರ್ಥಿಸುತ್ತೇನೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ.
‘ಹೃದಯಾಘಾತಕ್ಕೆ ಒಳಗಾದ ಅವರನ್ನು ಇಲ್ಲಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವೈದ್ಯರು ಸಕಲ ಪ್ರಯತ್ನ ಮಾಡಿದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಮೇರು ನಟನಾಗಿದ್ದ ಪುನೀತ್ ರಾಜ್ ಕುಮಾರ್ ಯುವಕರ ಕಣ್ಮಣಿ. ಅವರನ್ನು ಕಳೆದುಕೊಂಡಿರುವುದು ಅವರ ಕುಟುಂಬ ಹಾಗೂ ಕರ್ನಾಟಕದ ಜನತೆ ದುಃಖದಲ್ಲಿದೆ' ಎಂದು ಬೊಮ್ಮಾಯಿ ನುಡಿದರು.
ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ: ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರಕ್ಕೆ ರಾಜ್ಯ ಸರಕಾರ ವ್ಯವಸ್ಥೆ ಕಲ್ಪಿಸಲಿದೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಅವರ ಅಭಿಮಾನಿಗಳು ಶಾಂತ ರೀತಿಯಲ್ಲಿ ಅವರನ್ನು ಕಳುಹಿಸಿಕೊಡಬೇಕು ಎಂದು ಬೊಮ್ಮಾಯಿ ಇದೇ ವೇಳೆ ಮನವಿ ಮಾಡಿದರು.
ತುಂಬಲಾರದ ನಷ್ಟ: ‘ಕನ್ನಡದ ಪ್ರತಿಭಾವಂತ ಯುವ ನಟ ಪುನೀತ್ ರಾಜ್‍ಕುಮಾರ್ ಹಠಾತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ನಟನಾ ಕೌಶಲದ ಜೊತೆ ಸರಳ-ಸಜ್ಜನಿಕೆಯ ನಡವಳಿಕೆಯಿಂದಲೂ ಕನ್ನಡಿಗರ ಮನೆ ಮಗನಂತಿದ್ದ ಪುನೀತ್ ಸಾವು ತುಂಬಿಬಾರದ ನಷ್ಟ. ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ. ರಾಜ್‍ಕುಮಾರ್ ಕಾಲದಿಂದಲೂ ಅವರ ಕುಟುಂಬದ ಜೊತೆಯಲ್ಲಿ ಆತ್ಮೀಯ ಸಂಬಂಧ ಹೊಂದಿದ್ದ ನನ್ನ ಪಾಲಿಗೆ ಪುನೀತ್ ಸಾವು ಮನೆ ಸದಸ್ಯನೊಬ್ಬನನ್ನು ಕಳೆದುಕೊಂಡ ಶೋಕ. ಪುನೀತ್ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.
ನಂಬಲು ಅಸಾಧ್ಯ: ‘ಕನ್ನಡ ಚಿತ್ರರಂಗದ ಖ್ಯಾತ ಚಿತ್ರನಟ ಯುವರತ್ನ ಪುನೀತ್ ರಾಜ್ ಕುಮಾರ್ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ಆಘಾತವಾಗಿದೆ. ಅವರ ನಟಿಸಿದ್ದ ‘ಪೃತ್ವಿ' ಮತ್ತು ‘ರಾಜಕುಮಾರ' ಚಿತ್ರವನ್ನು ಅಪ್ಪು ಅವರ ಜೊತೆಯಲ್ಲೇ ನೋಡಿದ್ದೇ ಈ ದಿನ ಅವರಿಲ್ಲ ಎಂದರೆ ನಂಬಲಸಾಧ್ಯ ವಾಗಿದೆ. ಈ ದಿನ ಯುವರತ್ನನನ್ನು ಕಳೆದುಕೊಂಡು ನಮ್ಮ ಕರುನಾಡು ಬರಿದಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ದೇವರು ಅವರ ಕುಟುಂಬ ವರ್ಗಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ದುಃಖ ಬರಿಸುವ ಶಕ್ತಿ ತುಂಬಲಿ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಾರ್ಥಿಸಿದ್ದಾರೆ.
ನೆನಪು ಚಿರಾಯು: ‘ನಾಡಿನ ಜನಪ್ರಿಯ ಕಲಾವಿದ, ಡಾ.ರಾಜ್‍ಕುಮಾರ್ ಅವರ ವಂಶದ ಕುಡಿ ಪುನೀತ್ ರಾಜಕುಮಾರ್ ಹಠಾತ್ ನಿಧನರಾದ ವಿಷಯ ದಿಗ್ಭ್ರಮೆ ಮೂಡಿಸಿದೆ. ಕಿರುವಯಸ್ಸಿನಲ್ಲೇ ಅವರು ನಮ್ಮನ್ನು ಅಗಲಿದ್ದು ತೀವ್ರ ಆಘಾತ ತಂದಿದೆ. ಅಣ್ಣಾವ್ರ ಜೊತೆ ಬಾಲ ಕಲಾವಿದರಾಗಿ ಭಕ್ತ ಪ್ರಹ್ಲಾದ, ಚಲಿಸುವ ಮೋಡಗಳು ಸೇರಿದಂತೆ ಹಲವು ಚಿತ್ರಗಳಲ್ಲಿ ಅವರ ಅಭಿನಯ, ಬೆಟ್ಟದ ಹೂವು, ನಟಸಾರ್ವಭೌಮ ಮೊದಲಾದ ಅನೇಕ ಯಶಸ್ವಿ ಚಿತ್ರಗಳ ಮೂಲಕ ಕನ್ನಡಿಗರ ಹೃದಯದಲ್ಲಿ ಚಿರಸ್ಥಾನ ಪಡೆದ ಅಭಿಮಾನಿಗಳ ಪ್ರೀತಿಯ ಅಪ್ಪು ಅಮರರಾಗಿಯೇ ಉಳಿಯಲಿದ್ದಾರೆ. ನಿಮ್ಮ ನೆನಪು ಚಿರಾಯು ಪುನೀತ್' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಮರಿಸಿದ್ದಾರೆ.
‘ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ್ದ ಪುನೀತ್ ರಾಜ್‍ಕುಮಾರ್ ತಂದೆ ಡಾ.ರಾಜ್‍ಕುಮಾರ್ ಅವರಂತೆ ಸರಳತೆಯನ್ನು ಮೈಗೂಡಿಸಿಕೊಂಡಿದ್ದರು. ಬಾಲನಟನಾಗಿ ಅವರು ಅಭಿನಯಿಸಿದ್ದ ‘ಬೆಟ್ಟದ ಹೂವು'ಚಿತ್ರ ರಾಷ್ಟ್ರಪ್ರಶಸ್ತಿ ಪಡೆದಿತ್ತು. ಎರಡು ನಕ್ಷತ್ರಗಳು, ‘ಯಾರಿವನು,' ‘ಭಾಗ್ಯವಂತ' ಹೀಗೆ ಅನೇಕ ಚಿತ್ರಗಳಲ್ಲಿ ಅವರು ನೀಡಿದ್ದ ಅಭಿನಯ ಜನ ಮಾನಸದಲ್ಲಿ ಅಚ್ಚ ಅಳಿಯದೇ ನಿಂತಿದೆ. ನಾಯಕ ನಟನಾಗಿ ಪುನೀತ್ ಅಭಿನಯಿಸಿದ ಅಪ್ಪು, ಅಭಿ, ಮಿಲನ, ವೀರ ಕನ್ನಡಿಗ, ರಾಜಕುಮಾರ, ನಟಸಾರ್ವಭೌಮ, ದೊಡ್ಡಮನೆ ಹುಡ್ಗ, ಯುವರತ್ನ, ಅಣ್ಣಾ ಬಾಂಡ್, ಹುಡುಗರು ಸೇರಿ ಅನೇಕ ಚಿತ್ರಗಳಲ್ಲಿ ನೀಡಿ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿದ್ದರು' ಎಂದು ಸಚಿವ ಕೆ.ಗೋಪಾಲಯ್ಯ ನೆನಪು ಮಾಡಿಕೊಂಡಿದ್ದಾರೆ.
ಯುವಕರಿಗೆ ರೋಲ್ ಮಾಡೆಲ್: ‘ನನ್ನ ನೆರೆಹೊರೆಯವರಾದ, ಸ್ವಂತ ಸಹೋದರನಂತಿದ್ದ ನಟ ಪುನೀತ್ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇಷ್ಟು ಚಿಕ್ಕವಯಸ್ಸಿನಲ್ಲಿ ಅವರನ್ನು ಕೊಂಡೊಯ್ದ ವಿಧಿ ಬಹಳ ಕ್ರೂರಿ. ಪುನೀತ್ ಅವರು ನನಗೆ ಆತ್ಮೀಯರಾಗಿದ್ದರು. ಕುಟುಂಬದ ಸ್ನೇಹಿತರಾಗಿದ್ದರು. ನಮ್ಮಿಬ್ಬರ ಕುಟುಂಬ ಸದಸ್ಯರ ನಡುವೆ ಉತ್ತಮ ಒಡನಾಟವಿತ್ತು. ನಾವಿಬ್ಬರೂ ಒಟ್ಟಿಗೆ ವಾಯುವಿಹಾರ, ಜಿಮ್ ಮಾಡಿದ್ದೇವೆ. ಚಿತ್ರರಂಗ ಸೇರಿ ಅನೇಕ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ಶಿಸ್ತುಬದ್ಧ ಜೀವನ, ಕಟ್ಟುನಿಟ್ಟಿನ ವ್ಯಾಯಾಮದ ಮೂಲಕ ಪುನೀತ್ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದರು. ಫಿಟ್ನೆಸ್ ವಿಚಾರವಾಗಿ ಯುವಕರಿಗೆ ರೋಲ್ ಮಾಡೆಲ್ ಆಗಿದ್ದರು. ಅಂತಹವರನ್ನು ಭಗವಂತ ಇಷ್ಟು ಬೇಗ ಕರೆಸಿಕೊಳ್ಳುತ್ತಾನೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರ ನೋವು ವ್ಯಕ್ತಪಡಿಸಿದ್ದಾರೆ.
‘ತಂದೆಗೆ ತಕ್ಕ ಮಗನಂತೆ ಕೌಟುಂಬಿಕ ಚಿತ್ರಗಳಲ್ಲಿ ಅಭಿನಯಿಸಿ ಎಲ್ಲ ವರ್ಗದ ಜನರ ಅಭಿಮಾನ ಗಳಿಸಿದ ಧ್ರುವ ನಕ್ಷತ್ರ ಪುನೀತ್ ಅವರು. ಕನ್ನಡ ಪ್ರೇಕ್ಷಕರು ಮಾತ್ರವಲ್ಲದೆ ಅನ್ಯ ಭಾಷಿಕ ಪ್ರೇಕ್ಷಕರನ್ನು ತಮ್ಮ ಅಭಿಮಾನಿಯಾಗಿ ಮಾಡಿಕೊಂಡಿದ್ದು ಪುನೀತ್ ಅವರಲ್ಲಿದ್ದ ಕಲಾ ಶಕ್ತಿಗೆ ಸಾಕ್ಷಿ. ನಾನು ರಾಜ್‍ಕುಮಾರ್ ಚಿತ್ರಗಳನ್ನು ನೋಡುತ್ತಾ ಬೆಳೆದವನು. ಅದೇ ರೀತಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನೀತ್ ಅವರ ಚಿತ್ರಗಳನ್ನು ನೋಡುತ್ತಾ ಬಂದಿದ್ದೇನೆ. ಒಬ್ಬರಿಗಿಂತ ಮತ್ತೊಬ್ಬರು ಮಿಗಿಲಾದ ನಟರು' ಎಂದು ಶಿವಕುಮಾರ್ ಮೆಲುಕು ಹಾಕಿದ್ದಾರೆ.
ತುಂಬಲಾರದ ನಷ್ಟ: ‘ಕನ್ನಡ ಚಿತ್ರರಂಗದ ಹೆಸರಾಂತ ನಾಯಕ ನಟ ಪುನೀತ್ ರಾಜ್‍ಕುಮಾರ್ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದ್ದು, ಏನು ಹೇಳಲೂ ತೋಚದಂತಾಗಿದೆ. ಪುನೀತ್ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ತಾವು ನಿರ್ವಹಿಸುತ್ತಿದ್ದ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಅವರ ಅಕಾಲಿಕ ನಿಧನ ನಿಜಕ್ಕೂ ದುರ್ದೈವ, ಬಹುಮುಖ ಪ್ರತಿಭೆಯ ಅದ್ಭುತ ನಟನ ಬದುಕು ಅರ್ಧಕ್ಕೇ ನಿಂತಿದ್ದು ನಿಜಕ್ಕೂ ದುರಾದೃಷ್ಟಕರ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಿಸಿದ್ದಾರೆ.
ಕನಸಲ್ಲೂ ಎಣಿಸಿರಲಿಲ್ಲ: ‘ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ವೈಯಕ್ತಿಕವಾಗಿ ನನಗೆ ಆಗಿರುವ ಆಘಾತ ಅಷ್ಟಿಷ್ಟಲ್ಲ. ಇಂತಹ ಸುದ್ದಿ ಕೇಳಬೇಕಾಗುತ್ತದೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ವ್ಯಕ್ತಿಗತವಾಗಿ ನನಗೆ ಬಹಳ ಇಷ್ಟದ ವ್ಯಕ್ತಿ, ನಟ ಆಗಿದ್ದರು ಪುನೀತ್. ಅವರ ಜತೆ ಸಾಕಷ್ಟು ಸಮಯ ಕಳೆದಿದ್ದೇನೆ. ಜತೆಯಲ್ಲಿ ಹಲವು ಬಾರಿ ಊಟವನ್ನು ಮಾಡಿ ಚಿತ್ರರಂಗದ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಅಲ್ಲದೆ, ಡಾ.ರಾಜಕುಮಾರ್ ಅವರ ಕುಟುಂಬದ ಜತೆ ನನ್ನ ಬಾಂಧವ್ಯ ಇಂದು ನಿನ್ನೆಯದಲ್ಲ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ನೆನಪಿಸಿಕೊಂಡಿದ್ದಾರೆ.
‘ಅಣ್ಣಾವ್ರ ಪುತ್ರರಾದರೂ ತಮ್ಮದೇ ವಿಭಿನ್ನ ನಟನಾ ಪ್ರತಿಭೆ ಹೊಂದಿದ್ದ ಪುನೀತ್, ಬಾಲ ನಟರಾಗಿಯೇ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟವರು. ಆಮೇಲೆ ನಾಯಕ ಆಗಿ ಪ್ರತಿ ಕನ್ನಡಿಗನ ಮನೆಮನ ರಂಜಿಸಿದ್ದರು. ಗಾಯಕರಾಗಿ, ನಿರ್ಮಾಪಕರಾಗಿ ಚಿತ್ರರಂಗದ ಕಣ್ಮಣಿ ಆಗಿದ್ದವರು. ಪುನೀತ್ ಅಗಲಿಕೆ ಕನ್ನಡ ಚಿತ್ರರಂಗಕ್ಕೆ, ಕನ್ನಡಕ್ಕೆ, ನಾಡು ನುಡಿಗೆ ಭರಿಸಲಾಗದ ನಷ್ಟ. ಅವರ ನಿಧನ ದೊಡ್ಡ ಶೂನ್ಯವನ್ನೇ ಸೃಷ್ಟಿಸಿದೆ. ನಮೆಲ್ಲರ ಅಪ್ಪು ಇನ್ನಿಲ್ಲ ಎನ್ನುವ ಸ್ಥಿತಿಯನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ನೀಡಲಿ' ಎಂದು ಕುಮಾರಸ್ವಾಮಿ ಪ್ರಾರ್ಥಿಸಿದ್ದಾರೆ.
ಸೋತು ತಲೆಯ ಬಾಗದು: ‘ಆಡಿಸಿಯೇ ನೋಡು, ಬೀಳಿಸಿಯೇ ನೋಡು, ಎಂದೂ ಸೋಲದು, ಸೋತು ತಲೆಯಾ ಬಾಗದು' ಎಂದು ಹೇಳುತ್ತಲೇ ನಮ್ಮನ್ನೆಲ್ಲಾ ಅಗಲಿದ ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮ ಗಂಧದ ಗುಡಿಯ ನಿಜವಾದ ರಾಜರತ್ನ. ಪವರ್ ಸ್ಟಾರ್ ಆಗಿದ್ದರೂ ಯಾವುದೇ ಗರ್ವವಿಲ್ಲದೇ ಎಲ್ಲರೊಂದಿಗೆ ಬೆರೆಯುತ್ತಿದ್ದ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ' ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಂಬನಿ ಮಿಡಿದಿದ್ದಾರೆ.
‘ಕನ್ನಡ ಚಿತ್ರರಂಗದ ಪ್ರತಿಭಾವಂತ ಮತ್ತು ಪ್ರಖ್ಯಾತ ನಟ ಡಾ.ರಾಜ್‍ಕುಮಾರ್ ಅವರ ಪುತ್ರರಾದ ಪುನೀತ್ ಅವರು ಅಪ್ಪು ಎಂದೇ ಖ್ಯಾತಿ ಪಡೆದಿದ್ದು ಕನ್ನಡಿಗರ ಕಣ್ಮಣಿ ಎನಿಸಿದ್ದರು. ಬಾಲ್ಯದಲ್ಲೇ ಚಿತ್ರರಂಗ ಪ್ರವೇಶಿಸಿದ್ದ ಅವರ ನಿಧನ ನಿಜಕ್ಕೂ ಆಘಾತಕರ ಸುದ್ದಿ. ನಾಡಿನ ಸಮಸ್ತ ಕನ್ನಡಿಗರಿಗೆ ಈ ವಿಷಯ ಆಘಾತವನ್ನು ತಂದಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜನರು ಶಾಂತಿ- ಸಂಯಮದಿಂದ ವರ್ತಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೋರಿದ್ದಾರೆ.
ಪುನೀತ್ ನಿಧನ ರಾಜ್ಯಕ್ಕೆ ದೊಡ್ಡ ನಷ್ಟ: ನಟ ಪುನೀತ್‍ರಾಜ್‍ಕುಮಾರ್ ಇವತ್ತು ನಮ್ಮೊಂದಿಗೆ ಇಲ್ಲ ಎಂದರೆ ನಂಬಲು ಆಗುತ್ತಿಲ್ಲ. ತೀವ್ರ ಹೃದಯಾಘಾತದಿಂದ ಅವರು ನಮ್ಮನ್ನು ಅಗಲಿದ್ದಾರೆ. ಭಗವಂತ ಅವರ ಕುಟುಂಬ ವರ್ಗದವರಿಗೆ ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಶಾಸಕ ಝಮೀರ್ ಅಹ್ಮದ್ ಖಾನ್ ಪ್ರಾರ್ಥಿಸಿದ್ದಾರೆ.
ನನ್ನ ಮಗ ನಿನ್ನೆ ರಾತ್ರಿ ಪುನೀತ್ ರಾಜ್‍ಕುಮಾರ್ ಅವರಿಗೆ ಕರೆ ಮಾಡಿ ಭೇಟಿಗೆ ಕಾಲಾವಕಾಶ ಕೋರಿದ್ದ. ಇವತ್ತು ಬೆಳಗ್ಗೆ 11 ಗಂಟೆಗೆ ಮನೆಗೆ ಬರುವಂತೆ ಅವರು ಹೇಳಿದ್ದರು. ಆದರೆ, ವಿಧಿಯಾಟವೇ ಬೇರೆ ಆಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
Shocked and deeply saddened as Karnataka's most loved superstar #PuneetRajkumar is no longer with us.
— Basavaraj S Bommai (@BSBommai) October 29, 2021
A huge personal loss and one that's difficult to come to terms with.
Praying the almighty gives the Rajkumar family and fans the strength to bear this loss.#OmShanti pic.twitter.com/QpF63vKvIO
Deeply shocked by the demise of talented actor #PowerStar #PuneethRajkumar.
— Siddaramaiah (@siddaramaiah) October 29, 2021
He had won the hearts of Kannadigas through his great acting skills & his simplicity. His passing away is a great loss for Karnataka. pic.twitter.com/cpKiQ74IIf
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ವೈಯಕ್ತಿಕವಾಗಿ ನನಗೆ ಆಗಿರುವ ಆಘಾತ ಅಷ್ಟಿಷ್ಟಲ್ಲ. ಇಂತಹ ಸುದ್ದಿ ಕೇಳಬೇಕಾಗುತ್ತದೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ.1/2 pic.twitter.com/v9E0dXLkpy
— H D Kumaraswamy (@hd_kumaraswamy) October 29, 2021