×
Ad

ಮಡಿಕೇರಿ ನಗರಸಭೆಯ ಅಧ್ಯಕ್ಷರಾಗಿ ಬಿಜೆಪಿಯ ಅನಿತಾ, ಉಪಾಧ್ಯಕ್ಷರಾಗಿ ಸವಿತಾ ಆಯ್ಕೆ

Update: 2021-10-29 17:54 IST

ಮಡಿಕೇರಿ ಅ.29 : ಮಡಿಕೇರಿ ನಗರಸಭೆಯ ಅಧ್ಯಕ್ಷರಾಗಿ ಬಿಜೆಪಿಯ ಅನಿತಾ ಪೂವಯ್ಯ ಹಾಗೂ ಉಪಾಧ್ಯಕ್ಷರಾಗಿ ಸವಿತಾ ರಾಕೇಶ್ ಆಯ್ಕೆಯಾಗಿದ್ದಾರೆ.

ಇಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಚುನಾವಣೆಯಲ್ಲಿ ಬಿಜೆಪಿಯ 16 ಸದಸ್ಯರು, ಸಂಸದ ಪ್ರತಾಪ್ ಸಿಂಹ, ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಕೈ ಎತ್ತುವ ಮೂಲಕ 19 ಮತಗಳಿಂದ ಅನಿತಾ ಹಾಗೂ ಸವಿತಾ ಅವರನ್ನು ಆಯ್ಕೆ ಮಾಡಿದರು.

ಬಿಜೆಪಿಯ ಅನಿತಾಪೂವಯ್ಯ ಹಾಗೂ ಎಸ್‍ಡಿಪಿಐ ಯ ಮೇರಿ ವೇಗಸ್  ಅಧ್ಯಕ್ಷ ಸ್ಥಾನಕ್ಕಾಗಿ ಮತ್ತು ಬಿಜೆಪಿಯ ಸವಿತಾ ರಾಕೇಶ್ ಹಾಗೂ ಎಸ್‍ಡಿಪಿಐ ಯ ನೀಮಾ ಅರ್ಷದ್ ಉಪಾಧ್ಯಕ್ಷ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದರು.

ಕೊನೆಗೆ ನಿರೀಕ್ಷೆಯಂತೆ ಬಹುಮತ ಹೊಂದಿದ್ದ ಬಿಜೆಪಿಗೆ ನಗರಸಭೆ ಅಧಿಕಾರ ಲಭಿಸಿತು. ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು ಕಾರ್ಯ ನಿರ್ವಹಿಸಿದರು.

ನಗರಸಭೆಯಲ್ಲಿ ಬಿಜೆಪಿ 16, ಎಸ್‍ಡಿಪಿಐ 5, ಕಾಂಗ್ರೆಸ್ 1 ಹಾಗೂ ಜೆಡಿಎಸ್ 1 ಸದಸ್ಯ ಬಲವನ್ನು ಹೊಂದಿದೆ.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದ ಎಸ್‍ಡಿಪಿಐ ಸದಸ್ಯರು ತಲಾ 5 ಮತಗಳನ್ನಷ್ಟೇ ಪಡೆದರು. 

ಒಂದೊಂದು ಸದಸ್ಯ ಬಲವನ್ನು ಹೊಂದಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಯಾರಿಗೂ ಬೆಂಬಲ ಸೂಚಿಸದೆ ತಟಸ್ಥವಾಗಿ ಉಳಿದುಕೊಂಡಿತು. 
ನಗರಸಭೆ ಆಡಳಿತ ಬಿಜೆಪಿ ಕೈ ಸೇರುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು ಜೈಕಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಸಭೆಯಲ್ಲಿ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್, ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಡಿಕೇರಿ ನಗರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಂತೆ ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ನಗರದ ಎಲ್ಲಾ ವಾರ್ಡ್‍ಗಳನ್ನು ಸಮಾನವಾಗಿ ಪರಿಗಣಿಸಿ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಅಧಿಕಾರಿ ವರ್ಗ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ಸದಸ್ಯರುಗಳಾದ ಕೆ.ಎಸ್.ರಮೇಶ್, ಅರುಣ್ ಶೆಟ್ಟಿ, ಉಮೇಶ್ ಸುಬ್ರಮಣಿ, ಅಮೀನ್ ಮೊಹಿಸಿನ್ ಮಾತನಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News