ಪೊಲೀಸ್ ಇಲಾಖೆ ಆಧುನೀಕರಣ: ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್
ಬೆಂಗಳೂರು, ಅ.29: ಹಳೆಯ ಶಸ್ತ್ರಾಸ್ತ್ರಗಳ ಬದಲಾಗಿ ಇಲಾಖೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಕೋರಮಂಗಲದ ಕೆಎಸ್ಸಾರ್ಪಿ ಪೆರೇಡ್ ಮೈದಾನದಲ್ಲಿ ನಡೆದ ಸೇವಾ ಕವಾಯತುವಿನಲ್ಲಿ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯನ್ನು ಎಲ್ಲ ಹಂತದಲ್ಲೂ ಆಧುನೀಕರಣಗೊಳಿಸಲಾಗುವುದು ಎಂದು ತಿಳಿಸಿದರು. ಪೊಲೀಸರು ನಾಗರಿಕರಿಗೆ ಅನುಕೂಲವಾಗುವ ಕೆಲಸ ಮಾಡುತ್ತಿದ್ದು, ಜನರ ನೋವು ನಿವಾರಣೆಯಾಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಕಳೆದ 8-9 ತಿಂಗಳ ಕಾಲದಲ್ಲಿ ಪೊಲೀಸ್ ಇಲಾಖೆಯಲ್ಲಿ ಹಲವು ಅಭಿವೃದ್ಧಿ ಕೆಲಸವನ್ನು ನಡೆಸಲಾಗಿದೆ ಎಂದು ತಿಳಿಸಿದರು.
ಕಾನ್‍ಸ್ಟೇಬಲ್, ಹೆಡ್ ಕಾನ್‍ಸ್ಟೇಬಲ್, ಎಎಸ್‍ಐಗೆ ನೀಡುತ್ತಿದ್ದ ವಾಷಿಂಗ್ ಭತ್ತೆಯನ್ನು 100ರಿಂದ 400 ರೂ. ಹೆಚ್ಚಿಸಲಾಗಿದೆ. 2019ರಿಂದ ಇದು ಅನ್ವಯವಾಗುತ್ತದೆ. ಇದರಿಂದ, ಪೊಲೀಸ್ ಸಿಬ್ಬಂದಿಗೆ ಅನುಕೂಲವಾಗಲಿದೆ. ಇದು ಹಬ್ಬದ ಉಡುಗೊರೆಯಾಗಿದೆ ಎಂದರು.
ಅತ್ಯುನ್ನತ ಶಿಕ್ಷಣ ಪಡೆದವರೂ ಕಾನ್‍ಸ್ಟೇಬಲ್ ಆಗುತ್ತಿದ್ದಾರೆ. ಅವರನ್ನು ತಾಂತ್ರಿಕ ಕ್ಷೇತ್ರದಲ್ಲಿ ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು, ಇಂಥ 150 ಮಂದಿಯನ್ನು ವಯರ್ ಲೆಸ್, ಬೆರಳಚ್ಚು ವಿಭಾಗಕ್ಕೆ ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಎಎಸ್‍ಐಯಿಂದ ಪಿಎಸ್‍ಐಗೆ ಬರಲು 5 ವರ್ಷವಿತ್ತು. ಐದು ವರ್ಷವನ್ನು ನಾಲ್ಕು ವರ್ಷಕ್ಕೆ ಇಳಿಸಲು ಸರಕಾರ ಅನುಮತಿ ನೀಡಿದೆ ಎಂದರು.
ಪೊಲೀಸರ ಕೆಲಸದ ಒತ್ತಡ ಕಡಿಮೆ ಮಾಡಬೇಕಾದರೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಅಗತ್ಯವಿದೆ. ಇದೇ ತಿಂಗಳ 23ರಂದು 4 ಸಾವಿರ ಸಿವಿಲ್ ಕಾನ್‍ಸ್ಟೇಬಲ್ ಹುದ್ದೆಗೆ ಪರೀಕ್ಷೆ ನಡೆದಿದೆ. ಡಿಸೆಂಬರ್ ಒಳಗೆ ಈ ನೇಮಕಾತಿ ಆಗಲಿದೆ. ಇವರ ನೇಮಕಾತಿ ಆದರೆ ಪೆÇಲೀಸರ ಒತ್ತಡ ಕಡಿಮೆಯಾಗಲಿದೆ ಎಂದು ತಿಳಿಸಿದರು.
ಒಂದು ಸಾವಿರ ಸಬ್‍ಇನ್‍ಸ್ಪೆಕ್ಟರ್ ನೇಮಕಾತಿ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ. 500 ಜನರಿಗೆ ರಿಟರ್ನ್ ಟೆಸ್ಟ್ ಆಗಿದೆ. ಬಾಕಿ 500 ಜನರಿಗೆ ಸದ್ಯದಲ್ಲೇ ಪರೀಕ್ಷೆ ನಡೆಯಲಿದೆ. ಮುಂದಿನ ಮಾರ್ಚ್ ವೇಳೆಗೆ 1000 ಸಬ್ ಇನ್‍ಸ್ಪೆಕ್ಟರ್ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. 1 ವರ್ಷದಲ್ಲಿ 100 ಪೊಲೀಸ್ ಠಾಣೆ ಮಂಜೂರಾಗಿದೆ. 100 ಕೋಟಿ ವೆಚ್ಚದಲ್ಲಿ ಕೆಲಸ ಆಗುತ್ತಿದೆ ಎಂದು ತಿಳಿಸಿದರು. ಕೆಎಸ್ಸಾರ್ಪಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಉಪಸ್ಥಿತರಿದ್ದರು.