×
Ad

ವಿಶ್ವದ ಸಿರಿವಂತರಲ್ಲೊಬ್ಬರಾದ ಜೆಫ್‌ ಬೆಝೋಸ್‌ ಕಾರ್ಯಕ್ರಮದಲ್ಲಿ ಪುನೀತ್‌ ಭೇಟಿಯಾಗಲಿಚ್ಛಿಸಿದ್ದು ಯಾರನ್ನು ಗೊತ್ತೇ?

Update: 2021-10-29 19:46 IST
Photo: Puneet Rajkumar

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ತಮ್ಮ 46ನೇ ವಯಸ್ಸಿನಲ್ಲಿ ಹೃದಯಾಘಾತದ ಕಾರಣದಿಂದ ಮೃತಪಟ್ಟಿದ್ದಾರೆ. ಅವರ ಹಠಾತ್‌ ನಿಧನವು ಚಿತ್ರರಂಗ ಮಾತ್ರವಲ್ಲದೇ ಸಂಪೂರ್ಣ ದೇಶವನ್ನೇ ಸ್ತಂಭೀಭೂತರಾಗಿಸಿದೆ. ಸಾಮಾಜಿಕ ತಾಣಗಳಲ್ಲಿ ಸಂತಾಪದ ಮಹಾಪೂರವೇ ಹರಿದಿದೆ. ಇದೇ ವೇಳೆ ನಟ ಹಾಗೂ ಕಾಮೆಡಿಯನ್‌ ದಾನಿಶ್‌ ಸೇಟ್‌ ತಮ್ಮ ಆದರ್ಶ ನಟನ ಕುರಿತು ಸಾಮಾಜಿಕ ತಾಣದಲ್ಲಿ ಭಾವನಾತ್ಮಕ ಬರಹ ಹಂಚಿಕೊಂಡಿದ್ದಾರೆ.

ಪುನೀತ್‌ ರಾಜ್‌ ಕುಮಾರ್‌ ರವರ ಪಿಆರ್‌ಕೆ ಪ್ರೊಡಕ್ಷನ್‌ ನ ಅಡಿಯಲ್ಲಿ ಬಿಡುಗಡೆ ಮಾಡಲಾಗಿದ್ದ ಫ್ರೆಂಚ್‌ ಬಿರಿಯಾನಿ ಸಿನಿಮಾದಲ್ಲಿ ದಾನಿಶ್‌ ಸೇಟ್‌ ನಾಯಕನಟನಾಗಿ ಅಭಿನಯಿಸಿದ್ದರು.  ತಮ್ಮ ಇನ್ಸ್ಟಾ ಗ್ರಾಮ್‌ ಪೋಸ್ಟ್‌ ನಲ್ಲಿ ಘಟನೆಯೊಂದನ್ನು ವಿವರಿಸಿದ್ದು, "ಒಮ್ಮೆ ಪುನೀತ್‌ ರಾಜ್‌ ಕುಮಾರ್‌ ವಿಶ್ವದ ಸಿರಿವಂತರಲ್ಲೊಬ್ಬರಾದ ಜೆಫ್‌ ಬೆಝೋಸ್‌ ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಲವಾರು ಮಂದಿ ಖ್ಯಾತ ಸಿನಿಮಾ ತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಎಲ್ಲರೂ ಒಬ್ಬರನ್ನೊಬ್ಬರು ಭೇಟಿಯಾಗುವಲ್ಲಿ, ಜೆಫ್‌ ಬೆಝೋಸ್‌ ರೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುವುದರಲ್ಲಿ ವ್ಯಸ್ತರಾಗಿದ್ದರು. ಆದರೆ ಪುನೀತ್‌ ರಾಜ್‌ ಕುಮಾರ್‌ ಇವೆಲ್ಲದರಿಂದ ದೂರ ನಿಂತಿದ್ದರು. ಅಮೆಝಾನ್‌ ಪ್ರೈಮ್‌ ತಂಡದ ಸದಸ್ಯರನ್ನು ಅವರ ಬಳಿ ಬಂದು "ಸರ್‌ ನಿಮಗೆ ಯಾರೊಂದಿಗಾದರೂ ಫೋಟೊ ಕ್ಲಿಕ್ಕಿಸಬೇಕೆಂದಿದೆಯೇ? ನೀವು ಯಾಕೆ ಈ ಮೂಲೆಯಲ್ಲಿ ನಿಂತುಕೊಂಡಿದ್ದೀರಿ? ನೀವು ಹೇಳಿದ ವ್ಯಕ್ತಿಗಳನ್ನು ನಾವು ಕರೆತರುತ್ತೇವೆ" ಎಂದರು. 

ಆ ವೇಳೆ ಪ್ರತಿಕ್ರಿಯಿಸಿದ ಪುನೀತ್‌ "ನಿಜವೇ? ಹಾಗಾದರೆ ನನಗೆ ಪಂಕಜ್‌ ತ್ರಿಪಾಠಿಯನ್ನು ಭೇಟಿಯಾಗಬೇಕು" ಎಂದರು. ಪಂಕಜ್‌ ತ್ರಿಪಾಠಿ ಸದ್ಯ ಸಿನಿಮಾ ರಂಗದಲ್ಲಿ ತಮ್ಮ ಅಭಿನಯದಿಂದ ಖ್ಯಾತಿ ಗಳಿಸಿದ್ದು, ಹಲವು ವರ್ಷಗಳ ಪರಿಶ್ರಮದ ಬಳಿಕ ಗ್ಯಾಂಗ್ಸ್‌ ಆಫ್‌ ವಾಸೇಪುರ್‌ ಮೂಲಕ ಅವರ ವೃತ್ತಿ ಬದುಕು ವಿಭಿನ್ನ ಹಂತಕ್ಕೆ ತಲುಪಿತ್ತು. 

ಪಂಕಜ್‌ ತ್ರಿಪಾಠಿ (photo: news18)

"ಒಂದು ಗುಂಪಿನಲ್ಲಿ ಅಪ್ಪು ಅಣ್ಣ ಪ್ರತಿಭಾವಂತರನ್ನೇ ಹುಡುಕುತ್ತಿದ್ದರು" ಎಂದೂ ದಾನಿಶ್‌ ಸೇಟ್‌ ಬರೆದುಕೊಂಡಿದ್ದಾರೆ. "ಒಮ್ಮೆ ಪುನೀತ್‌ ರೊಂದಿಗೆ ನಾನು, ನಿಮಗೆ ಬೇರೆ ಹೊಸ ನಟರ ಸಿನಿಮಾಗಳಿಗೆ ಹಣ ಹೂಡುವ ಬದಲು ಸ್ವಂತ ನಟಿಸಿ ಸಿನಿಮಾ ಮಾಡಬಹುದಲ್ಲವೇ ಎಂದು ಕೇಳಿದೆ. ಆ ವೇಳೆ ಪುನೀತ್‌ ʼಡ್ಯಾನೀ... ಒಂದು ಪೀಳಿಗೆ ಇನ್ನೊಂದು ಪೀಳಿಗೆಯನ್ನು ತಯಾರಿಗೊಳಿಸಬೇಕು. ನಮ್ಮ ಜನರು ಯಾವತ್ತೂ ಮನೋರಂಜನೆ ಪಡೆಯುತ್ತಿರಬೇಕುʼ ಎಂದು ಹೇಳಿದರು."

"ಅವರು ನನಗೆ ಕುಟುಂಬದಂತಿದ್ದರು. ಅವರ ಅಗಲುವಿಕೆಯ ನೋವನ್ನು ಭರಿಸಲು ನನ್ನಿಂದ ಸಾಧ್ಯವಿಲ್ಲ. ಅವರು ಎಲ್ಲ ಜನರನ್ನೂ ಪ್ರೀತಿ, ಗೌರವದಿಂದ ಬರಮಾಡಿಕೊಳ್ಳುತ್ತಿದ್ದರು" ಎಂದು ದಾನಿಶ್‌ ಸೇಟ್‌ ಬರೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News