ಕಡೂರು: ಪುರಸಭೆ ಮುಖ್ಯಾಧಿಕಾರಿ ಎಸಿಬಿ ಬಲೆಗೆ
ಕಡೂರು, ಅ.29: ನಿವೇಶನ ಖಾತೆ ಬದಲಾವಣೆ ಮಾಡಿಕೊಡಲು ಹತ್ತು ಸಾವಿರ ರೂ. ಲಂಚ ಕೇಳಿರುವುದಾಗಿ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಗೀತಾ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ಪುರಸಭೆ ಕಚೇರಿ ಮೇಲೆ ದಾಳಿ ಮಾಡಿ ಲಂಚ ಸ್ವೀಕರಿಸುತ್ತಿದ್ದ ಪುರಸಭೆ ಮುಖ್ಯಾಧಿಕಾರಿ ಎಚ್.ಎನ್.ಮಂಜುನಾಥ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಕಡೂರು ಪುರಸಭೆ ವ್ಯಾಪ್ತಿಯ ವೆಂಕಟೇಶ್ವರ ನಗರದಲ್ಲಿ ವಾಸವಾಗಿರುವ ರಘು ಎಂಬವರು ತಮ್ಮ ಪತ್ನಿಗೆ ದಾನವಾಗಿ ಬಂದಿದ್ದ ನಿವೇಶನದ ಖಾತೆಯನ್ನು ಪತ್ನಿಯ ಹಸರಿಗೆ ಬದಲಾವಣೆ ಮಾಡಲು ಕೋರಿ 2021ರ ಸೆಪ್ಟೆಂಬರ ಮೊದಲ ವಾರದಲ್ಲಿ ಅರ್ಜಿ ನೀಡಿದ್ದರು. ಆದರೆ ಕಚೇರಿ ಅಲೆದಾಡಿದರೂ ಖಾತೆ ಬದಲಾವಣೆ ಆಗಿರಲಿಲ್ಲ. ಈ ಸಂಬಂಧ ಇತ್ತೀಚೆಗೆ ಅವರು ಪುರಸಭೆ ಮುಖ್ಯಾಧಿಕಾರಿ ಎಚ್.ಎನ್.ಮಂಜುನಾಥ್ ಅವರನ್ನು ಭೇಟಿ ಮಾಡಿದಾಗ 25 ಸಾವಿರ ರೂ. ಲಂಚ ನೀಡಿದರೆ ಖಾತೆ ಮಾಡಿಸಿ ಕೊಡುವುದಾಗಿ ಹೇಳಿದ್ದರು. ಅಂತಿಮವಾಗಿ 10 ಸಾವಿರ ರೂ. ನೀಡಬೇಕು ಎಂದು ಲಂಚಕ್ಕೆ ಬೇಡಿಕೆ ಸಲ್ಲಿಸಿದ್ದರು ಎನ್ನಲಾಗಿದೆ.
ಈ ಸಂಬಂಧ ಮನನೊಂದಿದ್ದ ರಘು ಭ್ರಷ್ಟಾಚಾರ ನಿಗ್ರಹ ದಳದ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಅಧಿಕಾರಿಗಳ ತಂಡ ಪುರಸಭೆ ಅಧಿಕಾರಿಯನ್ನು ಬಲೆಗೆ ಕೆಡವಲು ಕಾರ್ಯಾಚರಣೆಗಿಳಿದಿದ್ದು, ಶುಕ್ರವಾರ ಮಧ್ಯಾಹ್ನ ಪುರಸಭೆ ಕಚೇರಿಯಲ್ಲಿ ಮಂಜುನಾಥ್ 10 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಪುರಸಭೆ ಮುಖ್ಯಾಧಿಕಾರಿ 10 ಸಾವಿರ ನಗದಿನೊಂದಿಗೆ ಹಣದೊಂದಿಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಸಂಬಂಧ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಮುಖ್ಯಾಧಿಕಾರಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆಂದು ತಿಳಿದು ಬಂದಿದೆ.
ಮೂಲತಃ ಕರ್ನಾಟಕ ರಾಜ್ಯ ಹಣಕಾಸು ನಿಗಮದ ಅಧಿಕಾರಿಯಾಗಿದ್ದ ಎಚ್.ಎನ್.ಮಂಜುನಾಥ್ ಕಡೂರು ಪುರಸಭೆ ಮುಖ್ಯಾಧಿಕಾರಿ ಆಗಿ ಕಾರ್ಯ ನಿರ್ವಹಿಸಿ ಹಲವು ಬಾರಿ ವರ್ಗವಣೆ ಅದರೂ ಪುನಃ ಇಲ್ಲಿಗೆ ವರ್ಗವಣೆ ಮಾಡಿಸಿಕೊಂಡು ಬಂದಿದ್ದರೆಂದು ತಿಳಿದು ಬಂದಿದೆ.
ಎಸಿಬಿ ತಂಡದಲ್ಲಿ ತಂಡದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ, ಸಿಬ್ಬಂದಿಯಾದ ಅನಿಲ್ ಕೆ.ಜಿ, ರಾಥೋಡ್, ಮಂಜುನಾಥ್, ದೇವರಾಜ್, ಅರ್ಪಿತಾ, ಸತೀಶ್, ಪ್ರಸಾದ್, ವೇದಾವತಿ, ಜಯಕುಮಾರ್, ರವಿಚಂದ್ರನ್, ಅನಿಲ್, ಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.