×
Ad

ನ್ಯಾಯಮೂರ್ತಿಗಳನ್ನು ಪ್ರಶಸ್ತಿಗೆ ಪರಿಗಣಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Update: 2021-10-29 20:34 IST

ಬೆಂಗಳೂರು, ಅ.29: ದೇಶದ ಅತ್ಯುನ್ನತ ನಾಗರಿಕ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡುವ ಪ್ರಶಸ್ತಿಗಳಿಗೆ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳನ್ನೂ ಪರಿಗಣಿಸಲು ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೆ, ಯಾವುದೇ ಪ್ರಶಸ್ತಿ ಪಡೆಯುವ ಆಸಕ್ತಿ ನಮಗೆ ಇಲ್ಲ. ಕೆಲಸ ಮಾಡುವುದು ನಮಗೆ ಇಷ್ಟ ಎಂದು ಹೈಕೋರ್ಟ್ ಹೇಳಿದೆ.   

ಹುಬ್ಬಳ್ಳಿಯ ವೈದ್ಯ ಡಾ.ವಿನೋದ ಜಿ.ಕುಲಕರ್ಣಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿದೆ. 

ಅರ್ಜಿದಾರರ ವಾದ ಆಲಿಸಿದ ಬಳಿಕ ನ್ಯಾಯಪೀಠ ಪ್ರಶಸ್ತಿಗಳನ್ನು ನೀಡುವುದು ಸಂವಿಧಾನಕ್ಕೆ ವಿರುದ್ಧವಾದುದು. ಪ್ರಶಸ್ತಿ ಸ್ವೀಕರಿಸುವುದರಲ್ಲಿ ನಮಗೆ ಯಾವುದೇ ಆಸಕ್ತಿ ಇಲ್ಲ. ನಿಮಗೆ (ಅರ್ಜಿದಾರರಿಗೆ) ಇದಕ್ಕಿಂತ ಬೇರೆ ವಿಷಯ ಸಿಗಲಿಲ್ಲವೇ? ನ್ಯಾಯಾಂಗದಲ್ಲಿ ಸುಧಾರಣೆಯಾಗಬೇಕೆಂದು ಬಯಸಿದರೆ ಅದಕ್ಕೆ ಹಲವು ವಿಧಾನಗಳಿವೆ, ಪ್ರಶಸ್ತಿಗಳಿಂದ ಅದು ಸಾಧ್ಯವಿಲ್ಲ ಎಂದು ಹೇಳಿತು.

ಅಲ್ಲದೆ, “ಕ್ಷಮಿಸಿ, ನಾವು ಅರ್ಜಿಯನ್ನು ವಜಾಗೊಳಿಸುತ್ತೇವೆ. ನಮಗೆ(ನ್ಯಾಯಮೂರ್ತಿಗಳಿಗೆ) ಯಾವುದೇ ಅವಾರ್ಡ್ ಬೇಕಿಲ್ಲ. ನ್ಯಾಯಮೂರ್ತಿಗಳಿಗೆ ತಮ್ಮ ಕರ್ತವ್ಯವೇನೆಂದು ತಿಳಿದಿದೆ. ನಾವು ಪ್ರಶಸ್ತಿಗೆ ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತೇವೆ. ಪದ್ಮಶ್ರೀ ಮತ್ತಿತರ ಪ್ರಶಸ್ತಿಗಳ ಆಯ್ಕೆ ಸರಕಾರಗಳ ಸಂಪೂರ್ಣ ವಿವೇಚನೆಗೆ ಬಿಟ್ಟ ವಿಚಾರ. ಅದರಲ್ಲಿ ಯಾವುದೇ ವ್ಯಕ್ತಿಗೆ ಹಕ್ಕು ಮಂಡಿಸಲಾಗದು. ಅರ್ಜಿದಾರರೂ ಸಹ ತಮ್ಮ ಮನವಿ ಕುರಿತು ನ್ಯಾಯಾಲಯಕ್ಕೆ ಸೂಕ್ತ ವಿವರಣೆ ನೀಡುವಲ್ಲಿ ವಿಫಲರಾಗಿದ್ದಾರೆ, ಹೀಗಾಗಿ, ಅರ್ಜಿಯನ್ನು ವಜಾಗೊಳಿಸಲಾಗುತ್ತದೆ ಎಂದು ನ್ಯಾಯಾಲಯ ಆದೇಶಿಸಿತು.

ಸ್ವತಃ ಅರ್ಜಿದಾರರೇ ಖುದ್ದು ವಾದ ಮಂಡಿಸಿ, ಪ್ರತಿಷ್ಠಿತ ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಹಾಲಿ ಸೇವೆ ಸಲ್ಲಿಸುತ್ತಿರುವ ನ್ಯಾಯಮೂರ್ತಿಗಳ ಹೆಸರುಗಳನ್ನು ಪರಿಗಣಿಸುತ್ತಿಲ್ಲ. ಹಿಂದೆ ಬ್ರಿಟಿಷರ ಕಾಲದಲ್ಲಿದ್ದ ಪದ್ದತಿಯನ್ನೇ ಈಗಲೂ ಅನುಕರಿಸಲಾಗುತ್ತಿದೆ. ನ್ಯಾಯಾಂಗದಲ್ಲಿ ಬದಲಾವಣೆ ಆಗಬೇಕಾದರೆ ನ್ಯಾಯಮೂರ್ತಿಗಳನ್ನೂ ಪ್ರಶಸ್ತಿಗೆ ಪರಿಗಣಿಸಬೇಕು. ಆ ಕುರಿತು ಸರಕಾರಗಳಿಗೆ ನಿರ್ದೇಶನ ನೀಡಬೇಕೆಂದು ಪೀಠಕ್ಕೆ ತಿಳಿಸಿದರು.

ಬ್ರಿಟನ್‍ನಲ್ಲಿ ನ್ಯಾಯಮೂರ್ತಿಗಳಿಗೂ ಪ್ರಶಸ್ತಿ ನೀಡುವ ಪರಿಪಾಠವಿದೆ. ಆದರೆ ನಮ್ಮಲ್ಲಿ ಇಲ್ಲ, ನ್ಯಾಯಮೂರ್ತಿಗಳು ಕಕ್ಷಿದಾರರು ಮತ್ತು ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಲು ಎಷ್ಟು ಶ್ರಮಿಸುತ್ತಿದ್ದಾರೆ, ಆದರೆ ಅವರನ್ನು ಪ್ರಶಸ್ತಿಗೆ ಪರಿಗಣಿಸದೇ ಇರುವುದು ಸರಿಯಲ್ಲ. ಹೀಗಾಗಿ, ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಬೇಕು. ಪ್ರಶಸ್ತಿಗಳಿಂದ ಸ್ಫೂರ್ತಿ ಪಡೆದು ನ್ಯಾಯಮೂರ್ತಿಗಳು ಇನ್ನಷ್ಟು ಉತ್ತೇಜಿತರಾಗಿ ಕೆಲಸ ಮಾಡಲಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News