ಪುನೀತ್ ನಿಧನ: ಶಿವರಾಜ್ ಕುಮಾರ್ ಗೆ ಭಾವನಾತ್ಮಕ ಪತ್ರ ಬರೆದ ತಮಿಳುನಾಡು ಸಿಎಂ ಸ್ಟಾಲಿನ್
ಬೆಂಗಳೂರು: ಕನ್ನಡ ಚಿತ್ರರಂಗದ ಯುವ ನಟ ‘ಪವರ್ ಸ್ಟಾರ್' ಎಂದೇ ಖ್ಯಾತಿಗಳಿಸಿದ್ದ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದು, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನಟ ಶಿವರಾಜ್‍ಕುಮಾರ್ ಗೆ ಭಾವನಾತ್ಮಕ ಪತ್ರವೊಂದನ್ನು ಬರೆದು ತಮ್ಮ ಸಂತಾಪ ಸೂಚಿಸಿದ್ದಾರೆ.
ಪ್ರೀತಿಯ ಶಿವರಾಜ್‍ಕುಮಾರ್,
ತಮ್ಮ ಸಹೋದರ ಪುನೀತ್ ಅವರ ಹಠಾತ್ ನಿಧನವು ನನಗೆ ಅಪಾರ ನೋವುಂಟು ತರಿಸಿದೆ. ಸಂತಾಪ ಸೂಚಿಸಲು ನನಗೆ ಮಾತೇ ಬರುತ್ತಿಲ್ಲ. ನಮ್ಮ ಎರಡೂ ಕುಟುಂಬಗಳು ಹಲವು ವರ್ಷಗಳಿಂದ ಸೌಹಾರ್ದಯುತ ಬಾಂಧವ್ಯವನ್ನು ಹೊಂದಿದ್ದು, ನನಗೆ ಪುನೀತ್ ಅವರ ಅಗಲಿಕೆ ವೈಯಕ್ತಿಕವಾಗಿ ನಷ್ಟವನ್ನುಂಟು ಮಾಡಿದೆ.
ನನ್ನ ತಂದೆ ಕರುಣಾನಿಧಿ ಅವರ ಸಾವಿಗೆ ಸಂತಾಪ ಸೂಚಿಸಲು ಗೋಪಾಲಪುರಂಗೆ ಬಂದಿದ್ದ ಪುನೀತ್ ಅವರ ಆ ಕ್ಷಣಗಳು ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ದಯಬಿಟ್ಟು ನನ್ನ ಸಂತಾಪವನ್ನು ತಮ್ಮ ಕುಟುಂಬಕ್ಕೆ ಮತ್ತು ಕರ್ನಾಟಕದ ಜನತೆಗೆ ತಿಳಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
'ಕರ್ನಾಟಕವು ಅಮೂಲ್ಯವಾದ ರತ್ನವನ್ನು ಮಾನವತಾವಾದಿಯನ್ನು ಕಳೆದುಕೊಂಡಿದೆ. ಅಪ್ಪು ನಮ್ಮ ಮಧ್ಯೆ ಇಲ್ಲವಾದರೂ ಅವರ ನೆನೆಪು ಸದಾ ನಮ್ಮೊಂದಿಗೆ ಇರುತ್ತದೆ. ದಿ. ರಾಜ ಕುಮಾರ್ ಅವರ ಹಿರಿಯ ಮಗನಾಗಿರುವ ನೀವು ಈ ದುಃಖ ದ ಗಳಿಗೆಯಲ್ಲೂ ಆತ್ಮಸ್ಥೈರ್ಯ ತುಂಬಿಕೊಂಡು ಕುಟುಂಬಸ್ಥರೊಂದಿಗೆ ನಿಲ್ಲುತ್ತೀರಿ ಎಂದು ಭಾವಿಸುತ್ತೇನೆ' ಎಂದು ಎಂ.ಕೆ ಸ್ಟಾಲಿನ್ ಪುನೀತ್ ರಾಜ್ ಕುಮಾರ್ ಅವರನ್ನು ಸಹೋದರ ಎಂದೇ ಉಲ್ಲೇಖಿಸಿ ನಟ ಶಿವರಾಜ್ ಕುಮಾರ್ ಗೆ ಸಂತಾಪ ಪತ್ರ ಬರೆದಿದ್ದಾರೆ.