ಆಡಳಿತ ಸೂಚ್ಯಂಕದಲ್ಲಿ ಕರ್ನಾಟಕ ಏಳನೇ ಸ್ಥಾನಕ್ಕೆ ಕುಸಿತ
ಬೆಂಗಳೂರು, ಅ. 30: ಸಾರ್ವಜನಿಕ ಆಡಳಿತ ಸೂಚ್ಯಂಕದಲ್ಲಿ(ಪಿಎಐ) ನೆರೆಯ ಕೇರಳ ರಾಜ್ಯ ದೇಶದಲ್ಲೇ ಮೊದಲ ಸ್ಥಾನ ಪಡೆದಿದ್ದು, ಕರ್ನಾಟಕ ಏಳನೇ ಶ್ರೇಯಾಂಕಕ್ಕೆ ಕುಸಿದಿದೆ ಎಂದು ಸಾರ್ವಜನಿಕ ಆಡಳಿತ ವ್ಯವಹಾರಗಳ ಕೇಂದ್ರದ(ಪಿಎಐ) ಮುಖ್ಯಸ್ಥ ಡಾ.ಎ.ರವೀಂದ್ರ ತಿಳಿಸಿದ್ದಾರೆ.
ಇತ್ತೀಚೆಗೆ ವರ್ಚುಯಲ್ ಮೂಲಕ ದೊಡ್ಡ ರಾಜ್ಯಗಳ ಆಡಳಿತ ಕಾರ್ಯಕ್ಷಮತೆಯ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕೇರಳ, ತಮಿಳುನಾಡು ಮತ್ತು ತೆಲಂಗಾಣ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದುಕೊಂಡಿವೆ. ಸರಕಾರಗಳ ನೀತಿ, ಬೆಳವಣಿಗೆ ಮತ್ತು ಸುಸ್ಥಿರತೆಯ ಸ್ತಂಭಗಳಲ್ಲಿನ ಆಡಳಿತ ಕಾರ್ಯಕ್ಷಮತೆಗಳಲ್ಲಿ ಪಡೆದುಕೊಂಡ ಅಂಕಗಳ ಆಧಾರದಲ್ಲಿ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ನೀತಿ ಸ್ತಂಭದ ಅಂಕದಲ್ಲಿ 12ನೆ ಸ್ಥಾನದಲ್ಲಿದ್ದ ಕರ್ನಾಟಕ, ಈ ಬಾರಿ 16ನೆ ಸ್ಥಾನಕ್ಕೆ ಕುಸಿತ ಕಂಡಿದೆ. ರಾಜ್ಯಗಳಲ್ಲಿನ ಆಡಳಿತದ ಗುಣಮಟ್ಟವನ್ನು ಈ ವರದಿ ವಾರ್ಷಿಕ ಮೌಲ್ಯಮಾಪನ ಮಾಡುತ್ತದೆ. ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಾದ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ರಾಷ್ಟ್ರೀಯ ಆರೋಗ್ಯ ಯೋಜನೆ, ಮಕ್ಕಳ ಸಮಗ್ರ ಅಭಿವೃದ್ಧಿ ಸೇವೆ, ಸಮಗ್ರ ಶಿಕ್ಷಣ ಅಭಿಯಾನ ಮತ್ತು ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಅವರು ವಿವರ ನೀಡಿದರು.
ಛತ್ತೀಸಗಡ, ಗುಜರಾತ್ ಮತ್ತು ಪಂಜಾಬ್ ರಾಜ್ಯಗಳು ಕ್ರಮವಾಗಿ ನಾಲ್ಕು, ಐದು ಹಾಗೂ ಆರನೇ ಸ್ಥಾನದಲ್ಲಿದ್ದರೆ ಕರ್ನಾಟಕ ರಾಜ್ಯ ಅನಂತರದ ಏಳನೆ ಸ್ಥಾನದಲ್ಲಿದೆ. ಆಂಧ್ರ್ರಪ್ರದೇಶ, ಜಾಖರ್ಂಡ್, ಮಧ್ಯಪ್ರದೇಶ ರಾಜ್ಯಗಳು ಕ್ರಮವಾಗಿ ಎಂಟು, ಒಂಭತ್ತು ಮತ್ತು ಹತ್ತನೆ ಸ್ಥಾನದಲ್ಲಿವೆ. ಬಿಹಾರ ಹಾಗೂ ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿವೆ ಎಂದು ಅವರು ಮಾಹಿತಿ ನೀಡಿದರು.
ಇದೇ ವೇಳೆ ಸಣ್ಣ ರಾಜ್ಯಗಳಲ್ಲಿನ ಆಡಳಿತ ದಕ್ಷತೆಯನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಲಾಗಿದ್ದು, ಈ ಪಟ್ಟಿಯಲ್ಲಿ ಸಿಕ್ಕಿಂ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಗೋವಾ ಮತ್ತು ಮಿಜೋರಾಂ ರಾಜ್ಯಗಳಿವೆ. ಕೇಂದ್ರಾಡಳಿತ ಪ್ರದೇಶಗಳ ವಿಭಾಗದಲ್ಲಿ ಪುದುಚೆರಿ ಮೊದಲ ಸ್ಥಾನದಲ್ಲಿದೆ. ಜಮ್ಮು ಮತ್ತು ಕಾಶ್ಮೀರ ಎರಡನೆಯ ಶ್ರೇಯಾಂಕ ಪಡೆದಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಪಿಎಸಿ ನಿರ್ದೇಶಕ ಜಿ.ಗುರುಚರಣ್, ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ಅನ್ನಪೂರ್ಣ ರವಿಚಂದರ್ ಹಾಜರಿದ್ದರು.
‘ದೇಶದಲ್ಲಿ ಕೃಷಿ ಕಾರ್ಮಿಕರು, ರೈತರ ಆತ್ಮಹತ್ಯೆ ಶೇ.18ರಷ್ಟು ಹೆಚ್ಚಿದ್ದು, ಕರ್ನಾಟಕ 2ನೆ ಸ್ಥಾನದಲ್ಲಿರುವುದೇ ಡಬಲ್ ಇಂಜಿನ್ ಸರಕಾರದ ಸಾಧನೆ! ಆದಾಯ ಡಬಲ್ ಮಾಡುತ್ತೇವೆ ಎಂದವರು ಅನ್ನದಾತರ ಆತ್ಮಹತ್ಯೆಯನ್ನ ದ್ವಿಗುಣಗೊಳಿಸಿದ್ದಾರೆ! ರೈತಾಪಿ ವರ್ಗದ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾದ ಬಿಜೆಪಿ ಅವರನ್ನು ಹತಾಶರನ್ನಾಗಿಸಿ ಸಾವಿನ ದವಡೆಗೆ ನೂಕಿದೆ'
- ಕಾಂಗ್ರೆಸ್