ಪುನೀತ್ ರಾಜ್‍ಕುಮಾರ್ ಗೆ ಮರಣೋತ್ತರ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ನೀಡುವಂತೆ ಅಭಿಯಾನ
ಬೆಂಗಳೂರು, ಅ.30: ನಟ ಪುನೀತ್ ರಾಜ್‍ಕುಮಾರ್ ಗೆ ಮರಣೋತ್ತರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಅಭಿಮಾನಿಗಳು ಅಭಿಯಾನವನ್ನು ಆರಂಭಿಸಿದ್ದಾರೆ. ಇದಕ್ಕೆ ರಾಜಕೀಯ ಹಾಗೂ ಕನ್ನಡ ಚಿತ್ರೋದ್ಯಮದ ಗಣ್ಯರು ಕೂಡ ಬೆಂಬಲ ನೀಡಿದ್ದಾರೆ.
ಜಗ್ಗೇಶ ಆಗ್ರಹ: ಈ ಕುರಿತಂತೆ ತಮ್ಮ ಹೇಳಿಕೆ ಬಿಡುಗಡೆ ಮಾಡಿರುವ ನಟ ಜಗ್ಗೇಶ್ ಅವರು, ಸಜ್ಜನಿಕೆ ವ್ಯಕ್ತಿತ್ವ, ಸಮಾಜಮುಖಿ ಕಾರ್ಯ ಚಟುವಟಿಕೆ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದ ಪುನೀತ್ ಅವರಿಗೆ ಮರಣೋತ್ತರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕೆಂದು ಹೇಳಿದ್ದಾರೆ.
ಕನ್ನಡ ಹಾಗೂ ಸ್ಥಳೀಯ ಸಂಸ್ಕೃತಿಗೆ ಒತ್ತನ್ನು ನೀಡುವ ಮೂಲಕ ಪುನೀತ್ ಅವರು, ಉತ್ತಮ ಚಿಂತನೆ ಹೊಂದಿದ್ದರು. ಅಲ್ಲದೆ, ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅತಿ ಕಿರಿಯ ವಯಸ್ಸಿಗೆ ಅವರು ಇನ್ನಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅವರ ಸೇವೆಯನ್ನು ಸರಕಾರ ಪರಿಗಣಿಸಬೇಕೆಂದು ಕೋರುತ್ತೇನೆ ಎಂದು ನಟ ಜಗ್ಗೇಶ್ ಹೇಳಿದ್ದಾರೆ.
ಕುಟುಂಬದ ಕೊಡುಗೆ ಗೌರವಿಸಿದಂತೆ: ಪುನೀತ್‍ಗೆ ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ನಗರದಲ್ಲಿ ಸಂಸದ ಡಿ.ವಿ.ಸದಾನಂದಗೌಡ ಹೇಳಿಕೆ ನೀಡಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ನೀಡುವುದರಿಂದ ಪ್ರಶಸ್ತಿಯ ಗೌರವ ಹೆಚ್ಚುತ್ತದೆ.
ಪುನೀತ್ ರಾಜ್ಯೋತ್ಸವಕ್ಕಿಂತಲೂ ಮೇಲಿನ ಪ್ರಶಸ್ತಿಗೆ ಅರ್ಹರು. ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ನೀಡಲು ನನ್ನ ಸಹಮತ ಇದೆ. ಇದು ಅತ್ಯಂತ ಸೂಕ್ತ ಸಮಯ. ಈ ವಿಚಾರವನ್ನು ಸಿಎಂ ಮತ್ತು ಕನ್ನಡ ಸಂಸ್ಕೃತಿ ಸಚಿವರು ಗಂಭೀರವಾಗಿ ಪರಿಗಣಿಸಬೇಕು. ಸಿಎಂ ಮತ್ರು ಸಚಿವರಿಗೆ ನಾನು ಆಗ್ರಹ ಮಾಡುತ್ತೇನೆ. ಪುನೀತ್‍ಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟರೆ ಕರ್ನಾಟಕಕ್ಕೆ ರಾಜ್‍ಕುಮಾರ್ ಕುಟುಂಬದ ಕೊಡುಗೆಯನ್ನು ಗೌರವಿಸಿದಂತಾಗುತ್ತದೆ ಎಂದು ಹೇಳಿದರು.