ನಿಖರ ಕಾರಣ ಏನು ಎಂದು ತಿಳಿಯುವುದು ಕಷ್ಟ : ವೈದ್ಯ ರಮಣರಾವ್
ಬೆಂಗಳೂರು, ಅ. 30: ‘ಅತ್ಯಂತ ಸರಳ, ಸಜ್ಜನಿಕೆಗೆ ಹೆಸರಾಗಿದ್ದ ಚಿತ್ರ ನಟ ಪುನೀತ್ ರಾಜ್‍ಕುಮಾರ್ ಬಹಳ ಆರೋಗ್ಯದಿಂದಲೇ ಇದ್ದರು. ಆದರೆ, ಅವರಿಗೆ ಇದ್ದಕ್ಕಿದ್ದಂತೆ ಏನಾಯಿತು ಎಂಬುದು ನಿಜಕ್ಕೂ ಆಶ್ಚರ್ಯಕರ' ಎಂದು ನಟ ಪುನೀತ್ ಸೇರಿದಂತೆ ಡಾ.ರಾಜ್‍ಕುಮಾರ್ ಕುಟುಂಬದ ವೈದ್ಯ ರಮಣರಾವ್ ತಿಳಿಸಿದ್ದಾರೆ.
ಶನಿವಾರ ಖಾಸಗಿ ಸುದ್ದಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಟ ಪುನೀತ್ ರಾಜ್ ಕುಮಾರ್ ಅವರನ್ನು ಪುನೀತ್ ಪತ್ನಿ ಅಶ್ವಿನಿ ಅವರು ನಿನ್ನೆ(ಅ.29) ಬೆಳಗ್ಗೆ 11ಗಂಟೆಯ ಸುಮಾರಿಗೆ ನನ್ನ ಕ್ಲಿನಿಕ್‍ಗೆ ಕರೆತಂದರು. ಆರೋಗ್ಯವಾಗಿಯೇ ನಡೆದುಕೊಂಡ ಬಂದ ಅವರಿಗೆ ಮೊದಲಿಗೆ ಪರೀಕ್ಷೆ ಮಾಡಿದೆ ಎಂದು ವಿವರಿಸಿದರು.
ಪುನೀತ್ ಅವರ ಸಾವಿಗೆ ಹೃದಯಸ್ತಂಬನ ಕಾರಣವಿರಬಹುದು. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ‘ಸಡನ್ ಡೆತ್' ಎಂದು ಹೇಳಬಹುದು. ಆದರೂ, ನಿಖರ ಕಾರಣ ಏನು ಎಂದು ತಿಳಿಯುವುದು ಕಷ್ಟ ಎಂದು ಡಾ.ರಮಣರಾವ್ ಹೇಳಿದರು.
ಪುನೀತ್ ನನ್ನ ಕ್ಲಿನಿಕ್‍ಗೆ ಆಗಮಿಸಿದ ಸಂದರ್ಭದಲ್ಲಿ ಅವರು ಕೊಂಚ ಬೆವರುತ್ತಿದ್ದರು. ನಾನು ಅವರಿಗೆ ಏಕೆ ಎಂದು ಕೇಳಿದಾಗ, ಅವರು ನಾನು ಜಿಮ್‍ನಿಂದ ಬರುತ್ತಿದ್ದೇನೆ, ಅದಕ್ಕೆ ಬೆವರುತ್ತಿದ್ದೇನೆಂದರು. ಅವರಿಗೆ ರಕ್ತದೊತ್ತಡ, ಹೃದಯ ಬಡಿತ ಪರೀಕ್ಷೆ ಮಾಡಿದ್ದು ಎಲ್ಲವೂ ಸಾಮಾನ್ಯವಾಗಿಯೇ ಇತ್ತು. ಆದರೂ, ಸಮಾಧಾನವಾಗದಿದ್ದಾಗ ಅವರಿಗೆ ಇಸಿಜಿ ಮಾಡಿಸಿದೆ.
ಇಸಿಜಿಯಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಕೂಡಲೇ ವಿಕ್ರಮ್ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ ತಕ್ಷಣ ಅಪ್ಪು ಅವರನ್ನು ಕೇವಲ ಐದೇ ನಿಮಿಷಗಳಲ್ಲಿ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿಕ್ರಮ್ ಆಸ್ಪತ್ರೆಯ ವೈದ್ಯರು ಸಕಲ ರೀತಿಯ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಾನು ವಿಕ್ರಮ್ ಆಸ್ಪತ್ರೆಗೆ ತೆರಳಲು ಹೊರಟಿದ್ದೆ. ಆದರೆ ಅಪ್ಪು ಇನ್ನಿಲ್ಲ ಎಂಬ ಮಾತು ಕೇಳಿ ನಿಜಕ್ಕೂ ಶಾಕ್ ಆಯಿತು. ನನ್ನನ್ನು ಅವರ ತಂದೆ ಸ್ಥಾನದಲ್ಲಿ ನೋಡುತ್ತಿದ್ದರು. ಅಪ್ಪಾಜಿ ಎಂದೇ ಕರೆಯುತ್ತಿದ್ದರು. ಅಷ್ಟು ದೊಡ್ಡ ನಟ. ಸರಳ ಸಜ್ಜನಿಕೆಗೆ ಹೆಸರಾದ ಅಪ್ಪು. ನಿನ್ನೆಯೆಲ್ಲಾ ಓಡಾಡಿಕೊಂಡಿದ್ದವರು ಇಂದು ಇಲ್ಲ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಡಾ.ರಮಣರಾವ್ ನೆನಪು ಮಾಡಿಕೊಂಡÀರು.