ಹಾನಗಲ್, ಸಿಂಧಗಿ ಉಪಚುನಾವಣೆ; ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ
ಬೆಂಗಳೂರು, ಅ. 30: ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಕುತೂಹಲ ಕೆರಳಿಸಿದ್ದ ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆ ಸಿಂಧಗಿ ಕ್ಷೇತ್ರಗಳ ಉಪಚುನಾವಣೆಯ ಮತದಾನ ಕೆಲ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿದರೆ ಶಾಂತಿಯುತ ಅಂತ್ಯ ಕಂಡಿದೆ.
ಎರಡೂ ಕ್ಷೇತ್ರದಲ್ಲಿ ಒಟ್ಟಾರೆ 70.76ರಷ್ಟು ಮತದಾನವಾಗಿದ್ದು, ಸಿಂಧಗಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.64.54ರಷ್ಟು ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಶೇ.77.9ರಷ್ಟು ಮತದಾನ ನಡೆದಿದೆ. ಮೂರು ರಾಜಕೀಯ ಪಕ್ಷಗಳ ಘಟಾನುಘಟಿ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದೆ. ನವೆಂಬರ್ 2ರಂದು ಆಯಾ ಕ್ಷೇತ್ರಗಳಲ್ಲೇ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಂದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟಿಸುವ ಸಾಧ್ಯತೆಗಳಿದ್ದು, ಎಲ್ಲರ ಚಿತ್ತ ಮತ ಎಣಿಕೆಯತ್ತ ನೆಟ್ಟಿದೆ.
ಬೆಳಗ್ಗೆ 7ಗಂಟೆಯಿಂದಲೇ ಎರಡು ಕ್ಷೇತ್ರಗಳಲ್ಲಿಯೂ ಬಿರುಸುನಿಂದಲೇ ಮತದಾನ ಆರಂಭವಾಯಿತು. ಮಧ್ಯಾಹ್ನದ ವೇಳೆ ಕೊಂಚ ವೇಗ ಪಡೆದುಕೊಂಡಿತು. ಮತಗಟ್ಟೆಗಳಲ್ಲಿ ಕೋವಿಡ್ ಮಾರ್ಗಸೂಚಿ ಅನುಸರಿಸಿ ಯುವಕರು, ಮಹಿಳೆಯರು, ವೃದ್ಧರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಯ ಶಿವರಾಜ್ ಸಜ್ಜನರ್, ಕಾಂಗ್ರೆಸ್‍ನ ಶ್ರೀನಿವಾಸ ಮಾನೆ ಹಾಗೂ ಜೆಡಿಎಸ್‍ನ ನಿಯಾಝ್ ಶೇಖ್ ಪ್ರತ್ಯೇಕವಾಗಿ ತಮ್ಮ ಹಕ್ಕು ಚಲಾಯಿಸಿದರು. ಅತ್ತ ಸಿಂಧಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ, ಬಿಜೆಪಿಯ ರಮೇಶ ಭೂಸನೂರ ಹಾಗೂ ಜೆಡಿಎಸ್ ಅಭ್ಯರ್ಥಿ ನಾಝಿಯಾ ಅಂಗಡಿ ಪ್ರತ್ಯೇಕವಾಗಿ ಮತ ಚಲಾವಣೆ ಮಾಡಿದರು.
ಮತದಾನಕ್ಕೆ ಹಾನಗಲ್ ಕ್ಷೇತ್ರದಲ್ಲಿ ಒಟ್ಟು 263 ಮತಗಟ್ಟೆಗಳನ್ನು ಸ್ಥಾಪನೆ ಮಾಡಿದ್ದು ಒಟ್ಟು 1,155 ಮಂದಿ ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ‘ಅಂಗವಿಕಲ ಸ್ನೇಹಿ ಹಾಗೂ ಸಖಿ' ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಾಗಿದೆ. ಹಾವೇರಿ ನಗರದ ಸರಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನ.2ರಂದು ಬೆಳಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ. ಹಾನಗಲ್ ಪಟ್ಟಣದ ಕುಮಾರೇಶ್ವರ ಕಾಲೇಜಿನಲ್ಲಿ ಮಸ್ಟರಿಂಗ್ ಮತ್ತು ‘ಡಿ' ಮಸ್ಟರಿಂಗ್ ಕೇಂದ್ರದಲ್ಲಿ ಮತ ಪೆಟ್ಟಿಗೆ ಇರಿಸಲಾಗಿದೆ.
ಸಿಂಧಗಿ ಕ್ಷೇತ್ರದಲ್ಲಿ ಒಟ್ಟು 297 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಒಟ್ಟು 1,308 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ನ.2 ರಂದು ಬೆಳಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ. ಸಿಂಧಗಿಯ ಆರ್.ಡಿ.ಪಾಟೀಲ್ ಕಾಲೇಜಿನಲ್ಲಿ ಮಸ್ಟರಿಂಗ್, ‘ಡಿ' ಮಸ್ಟರಿಂಗ್ ಕೇಂದ್ರದಲ್ಲಿ ಇರಿಸಲಾಗಿದೆ.
ಮುಕ್ತ ಹಾಗೂ ನ್ಯಾಯಸಮ್ಮತ ಮತದಾನದ ದೃಷ್ಟಿಯಿಂದ ಎರಡು ಕ್ಷೇತ್ರಗಳಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಕಲ್ಪಿಸಲಾಗಿತ್ತು. ಅತಿಸೂಕ್ಷ್ಮ ಮತ್ತು ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಗಳಲ್ಲಿ ಹೆಚ್ಚುವರಿ ಭದ್ರತೆ ಇತ್ತು. ಮುನ್ನಚ್ಚರಿಕೆ ಕ್ರಮವಾಗಿ ಹಾನಗಲ್ ಹಾಗೂ ಸಿಂಧಗಿ ಸಹಿತ ಎರಡೂ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು.ಅಲ್ಲದೆ, ಮತಯಂತ್ರಗಳನ್ನು ಇರಿಸಲಾಗಿರುವ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.