ಶಿಡ್ಲಘಟ್ಟ: ಬೀದಿನಾಯಿಗಳ ದಾಳಿಗೆ 11 ವರ್ಷದ ಬಾಲಕ ಬಲಿ
Update: 2021-10-31 11:37 IST
ಚಿಕ್ಕಬಳ್ಳಾಪುರ, ಅ.31: ಬೀದಿನಾಯಿಗಳ ದಾಳಿಗೆ ಒಳಗಾಗಿ 11 ವರ್ಷದ ಬಾಲಕನೋರ್ವ ಮೃತಪಟ್ಟ ದಾರುಣ ಘಟನೆ ಶಿಡ್ಲಘಟ್ಟದಲ್ಲಿ ಇಂದು ಬೆಳಗ್ಗೆ ನಡೆದಿರುವುದು ವರದಿಯಾಗಿದೆ.
ಚಿಕ್ಕಬಳ್ಳಾಪುರದ ಖಲಂದರ್ ಖಾನ್ ಮೃತ ಬಾಲಕ. ಶಿಡ್ಲಘಟ್ಟದ ಉರ್ದು ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಆಗಿದ್ದ.
ಕೂಲಿ ಕಾರ್ಮಿಕರಾಗಿರುವ ಖಲಂದರ್ ತಂದೆ ಇಂದು ಬೆಳಗ್ಗೆ ಕೂಲಿ ಕೆಲಸಕ್ಕೆ ತೆರಳಿದ್ದರೆನ್ನಲಾಗಿದೆ. ಈ ವೇಳೆ ಮನೆಯಿಂದ ಹೊರಗಡೆ ಬಂದಿದ್ದ ಬಾಲಕನ ಮೇಲೆ ಸುಮಾರು 20ರಷ್ಟಿದ್ದ ಬೀದಿನಾಯಿಗಳು ದಾಳಿ ನಡೆಸಿವೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಖಲಂದರ್ ಹಳ್ಳಿ ರಸ್ತೆಯಲ್ಲಿ ಬಿದ್ದಿದ್ದನೆನ್ನಲಾಗಿದೆ. ಅಷ್ಟರಲ್ಲಿ ಆ ದಾರಿಯಾಗಿ ಬಂದ ಓರ್ವರು ನಾಯಿಯಲ್ಲಿ ಓಡಿಸಿದರೂ ಅಷ್ಟರಲ್ಲಿ ಬಾಲಕ ಕೊನೆಯುಸಿರೆಳೆದಿದ್ದ ಎಂದು ತಿಳಿದುಬಂದಿದೆ.
ಇಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಿದ್ದು, ಈ ಬಗ್ಗೆ ಸ್ಥಳೀಯಾಡಳಿತದ ಗಮನಸೆಳೆದಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.