'ಆತ್ಮಹತ್ಯೆಯಂಥ ನಿರ್ಧಾರ ಬೇಡ': ಪುನೀತ್ ಅಭಿಮಾನಿಗಳಿಗೆ ಶಿವರಾಜ್‍ಕುಮಾರ್ ಮನವಿ
ಬೆಂಗಳೂರು, ಅ.31:ಪುನೀತ್ ರಾಜ್‍ಕುಮಾರ್ ನಿಧನದಿಂದಾಗಿ ಅಭಿಮಾನಿಗಳು ಆತ್ಮಹತ್ಯೆಯಂಥ ನಿರ್ಧಾರ ಕೈಗೊಳ್ಳಬೇಡಿ ಎಂದು ನಟ ಶಿವರಾಜ್‍ಕುಮಾರ್ ಮನವಿ ಮಾಡಿದರು.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗನನ್ನೇ ಕಳೆದುಕೊಂಡಿದ್ದೇನೆ. ಇಂತಹ ಸಂದರ್ಭದಲ್ಲಿ ಅಭಿಮಾನಿಗಳು ಆತ್ಮಹತ್ಯೆಯಂಥ ನಿರ್ಧಾರ ಕೈಗೊಳ್ಳಬೇಡಿ ಎಂದು ಗದ್ಗದಿತರಾದರು.
ಅಪ್ಪು ನನ್ನಲ್ಲಿದ್ದಾನೆ, ರಾಘುವಿನಲ್ಲಿದ್ದಾನೆ. ಅದಕ್ಕಿಂತ ಹೆಚ್ಚಾಗಿ ಅಭಿಮಾನಿಗಳ ಹೃದಯದಲ್ಲಿದ್ದಾನೆ. ದಯವಿಟ್ಟು ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳಬೇಡಿ. ನಿಮಗೂ ಕುಟುಂಬವಿದೆ. ಅಪ್ಪು ಇಂಥಹ ನಿರ್ಧಾರಗಳನ್ನು ಇಷ್ಟಪಡುತ್ತಿಲ್ಲ. ದಯವಿಟ್ಟು ನಿಮ್ಮ ಕುಟುಂಬಗಳನ್ನು ನೀವು ನೋಡಿಕೊಳ್ಳಿ. ಏಕೆಂದರೆ ನಿಮ್ಮ ಅಗತ್ಯ ಕುಟುಂಬಕ್ಕೆ ಇರುತ್ತದೆ. ಇದನ್ನು ಕಳೆದುಕೊಳ್ಳಬೇಡಿ ಎಂದರು.
ನಾವೆಲ್ಲವೂ ಇಲ್ಲವೇ. ನೋವನ್ನು ನುಂಗಿಕೊಂಡು ಸಾಗಬೇಕು. ನಮ್ಮ ಕುಟುಂಬಕ್ಕೆ ನಾವಿರುವುದು ನಮ್ಮ ಜವಾಬ್ದಾರಿ. ಅಪ್ಪಾಜಿಯೂ ಇದನ್ನೇ ಹೇಳುತ್ತಿದ್ದರು ಎಂದ ಅವರು, ಅಪ್ಪು ಚಿಕ್ಕವನು. ಸಣ್ಣ ವಯಸ್ಸು. ಅದೆಷ್ಟು ಬೇಗ ಭಗವಂತನಿಗೆ ಆತ ಇಷ್ಟವಾಗಿಬಿಟ್ಟ ಎಂದರೆ ನಮಗದು ನೋವು ಕೊಡುತ್ತದೆ. ನಮಗಿಂತ ಹೆಚ್ಚಾಗಿ ಅಭಿಮಾನಿಗಳಿಗೆ ನೋವಾಗಿದೆ. ಅಭಿಮಾನಿಗಳು ಕುಟುಂಬ ಸಮೇತರಾಗಿ ಬಂದು ಅಪ್ಪು ಅಪ್ಪು ಎಂದು ಕರೆದು ಅತ್ತಾಗ ನನಗೂ ಕೊರಗಿದ್ದೆ. ಈ ನೋವು ನೋಡಿದಾಗ ಅಪ್ಪುವನ್ನು ಅವಸರವಾಗಿ ದೇವರು ಕರೆದುಕೊಂಡುಬಿಟ್ಟನೇ ಎಂದೆನಿಸಿಬಿಡುತ್ತದೆ ಎಂದು ನುಡಿದರು.
ನಾನು ಅವನಿಗಿಂತ 13 ವರ್ಷ ದೊಡ್ಡವನು. ಅವನನ್ನು ಮಗುವಾಗಿರುವಾಗಲಿಂದ ನೋಡಿದ್ದೇನೆ. ನನ್ನ ಮಗುವನ್ನೇ ಕಳೆದುಕೊಂಡಂತೆ ಅನಿಸುತ್ತಿದೆ. ಆದರೂ ಜೀವನ ಸಾಗಬೇಕು. ಅಪ್ಪು ಕುಟುಂಬದ ಜೊತೆ ನಾವೆಲ್ಲರೂ ಇದ್ದೇವೆ. ಅವನ ಆಸೆ, ಆಕಾಂಕ್ಷೆಗಳನ್ನು ಈಡೇರಿಸಲು ನಾವು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯ ಸರಕಾರ, ಪೊಲೀಸ್ ಸಿಬ್ಬಂದಿ ಚೆನ್ನಾಗಿ ಎಲ್ಲ ವ್ಯವಸ್ಥೆಯನ್ನು ಮಾಡಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದ. ನಮ್ಮ ಕುಟುಂಬದ ಮೇಲೆ ಇಷ್ಟೊಂದು ಅಭಿಮಾನ ಇಟ್ಟು ಅಚ್ಚುಕಟ್ಟಿನ ವ್ಯವಸ್ಥೆಯನ್ನು ಸರಕಾರ ಮಾಡಿತ್ತು. ಇನ್ನು, ಹಾಲು–ತುಪ್ಪ ಆದ ಕೂಡಲೇ ಸಮಾಧಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡುವ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಮಾತನಾಡುತ್ತೇನೆ ಎಂದು ಅವರು ತಿಳಿಸಿದರು.