ಕೆಎಂಎಫ್‍ನಿಂದ ಶೀಘ್ರದಲ್ಲೇ ಬ್ಯಾಂಕ್ ಸ್ಥಾಪನೆ: ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ, ಅ. 31: ‘ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳ(ಕೆಎಂಎಫ್) ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿಯೂ ಪ್ರಖ್ಯಾತಿ ಪಡೆದಿದೆ. ಇದೀಗ ಕೆಎಂಎಫ್‍ನಿಂದ ಬ್ಯಾಂಕ್ ಆರಂಭಿಸಲು ಚಿಂತನೆ ನಡೆದಿದೆ' ಎಂದು ಕೆಎಂಎಫ್ ಅಧ್ಯಕ್ಷರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ರವಿವಾರ ನಗರದ ಕೆಎಂಎಫ್ ಆವರಣದಲ್ಲಿ ಮಕ್ಕಳಿಗಾಗಿ ವಸತಿ ನಿಲಯ ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಪ್ರತಿವರ್ಷ ಕೆಎಂಎಫ್ 17 ಸಾವಿರ ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆಸುತ್ತದೆ. ಜತೆಗೆ ರಾಜ್ಯದಲ್ಲಿ ಹಾಲಿನ ಏಕರೂಪ ದರ ನಿಗದಿ ಮಾಡಲು ಚಿಂತನೆ ಇದ್ದು, ಈ ಕುರಿತು ಡಿಸೆಂಬರ್‍ನಲ್ಲಿ ನಡೆಯಲಿರುವ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು' ಎಂದರು.
‘ಕೆಎಂಎಫ್ ಆವರಣದಲ್ಲಿ ಮಕ್ಕಳಿಗಾಗಿ ವಸತಿ ನಿಲಯ ಉದ್ಘಾಟಿಸಿದ್ದು, ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಮಕ್ಕಳಿಗೆ ಇದರಿಂದ ಅನಕೂಲವಾಗಲಿದೆ. ರೈತರ ಪ್ರತಿಭಾನ್ವಿತ ಮಕ್ಕಳಗೆ ಹಾಸ್ಟೆಲ್ ನಲ್ಲಿ ಓದಿಕೊಳ್ಳಲು ಅವಕಾಶ ಸಿಗಲಿದೆ. ವರ್ಷಾಂತ್ಯದಲ್ಲಿ ಹಾಸ್ಟೆಲ್ ಕಾಮಗಾರಿ ಪೂರ್ಣಗೊಳ್ಳಲಿದೆ. 1,400 ಮಕ್ಕಳಿಗೆ ಇದರಿಂದ ಉಪಯೋಗವಾಗಲಿದೆ' ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
‘ಬೆಳಗಾವಿಯಲ್ಲಿ ಹೆದ್ದಾರಿ ಅಕ್ಕ-ಪಕ್ಕದಲ್ಲಿ 40ರಿಂದ 50 ಎಕರೆ ಜಮೀನು ಹುಡುಕಾಟ ನಡೆಸಿದ್ದು, ಜಾಗ ಸಿಕ್ಕ ಕೂಡಲೇ ದೇಶದಲ್ಲಿ ಉತ್ತಮ ಹಾಲು ಉತ್ಪಾದನಾ ಘಟಕವನ್ನು ಮಾಡುವ ಉದ್ದೇಶವಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ. ರೈತರಿಗೆ ಅನುಕೂವಾಗಲಿದೆ ಎಂದ ಅವರು, ‘ಕೆಎಂಎಫ್‍ನಿಂದ ಹಸು ಮೃತಪಟ್ಟರೇ ತಲಾ 50 ಸಾವಿರ ರೂ.ಪರಿಹಾರ ನೀಡಲಾಗುತ್ತಿದೆ. ಹೈನುಗಾರಿಕೆಗೆ ಕೇಂದ್ರ ಸರಕಾರದ ಅನೇಕ ಯೋಜನೆಯನ್ನು ಒದಗಿಸಿದ್ದೇವೆ' ಎಂದು ತಿಳಿಸಿದರು.
‘ರಾಜ್ಯದಲ್ಲಿ 14 ಹಾಲು ಉತ್ಪಾದನಾ ಒಕ್ಕೂಟಗಳಿದ್ದು, ಕೆಎಂಎಫ್‍ನಿಂದ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲು ಅನುಕೂಲವಾಗಲಿದೆ. ಹಾಲಿನ ಮೊತ್ತ ರೈತರ ಹಣ ಪಾವತಿ ಮಾಡಲು ಬ್ಯಾಂಕ್‍ನಿಂದ ಸಹಕಾರಿಯಾಗಲಿದೆ. ರಾಜ್ಯದಲ್ಲಿ ಏಕರೂಪ ದರ ನಿಗದಿ ಬಗ್ಗೆ ಡಿಸೆಂಬರ್ ನಡೆಯುವ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ನಿರ್ಣಯ ಕೈಗೊಳ್ಳುತ್ತೇವೆ' ಎಂದು ಬಾಲಚಂದ್ರ ಜಾರಕಿಹೊಳಿ ಮಾಹಿತಿ ನೀಡಿದರು.