×
Ad

‘ಎನ್‍ಇಪಿ' ಕೋಮುವಾದಕ್ಕೆ ಎಡೆ ಮಾಡಿಕೊಡುತ್ತಿದೆ: ಬೀಮಲ್ ರಾಯ್

Update: 2021-10-31 22:39 IST

ಬೆಂಗಳೂರು, ಅ. 31: ‘ಶಿಕ್ಷಣ ವರ್ಣರಂಜಿತವಾಗಿರಬೇಕೇ ಹೊರತು, ಏಕವರ್ಣದ್ದಾಗಿರಬಾರದು ಎಂಬ ಘೋಷವಾಕ್ಯದೊಂದಿಗೆ ‘ರಾಷ್ಟ್ರೀಯ ಶಿಕ್ಷಣ ನೀತಿ-2020' ಜಾರಿಯಾಗುತ್ತಿದ್ದು, ಇದು ಕೋಮುವಾದಕ್ಕೆ ಎಡೆ ಮಾಡಿಕೊಡುತ್ತಿದೆ' ಎಂದು ಪಶ್ಚಿಮ ಬಂಗಾಲದ ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ಬೀಮಲ್ ರಾಯ್ ತಿಳಿಸಿದ್ದಾರೆ.

ರವಿವಾರ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯು ಏರ್ಪಡಿಸಿದ್ದ ರಾಷ್ಟ್ರಮಟ್ಟ ಸಮ್ಮೇಳನದ ಎರಡನೆ ದಿನದ ವೆಬಿನಾರ್‍ನಲ್ಲಿ ಮಾತನಾಡಿದ ಅವರು, ‘ಇಂದು ಶಿಕ್ಷಣರಂಗ ಹಿಂದೆಂದು ಕಾಣದ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆದರೆ ಸರಕಾರವು ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ದೇಶದಲ್ಲಿ ಜನರ ಐಕ್ಯತೆ ಒಡೆಯುವ ರಾಷ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿದೆ. ನೀತಿಯು ಸಂವಿಧಾನ ವಿರೋಧಿಯಾಗಿದ್ದು, ಧರ್ಮಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಒಗ್ಗಟ್ಟನ್ನು ಒಡೆಯುವುದಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು. 

ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿರೇಂದ್ರ ಕೆ.ಆರ್.ನಾಯಕ್ ಮಾತನಾಡಿ, ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸಂಘ ಪರಿವಾರದ ಅಭಿಪ್ರಾಯ ಪಡೆದು ರೂಪಿಸಿದ ನೀತಿಯಾಗಿದೆ. ಜೊತೆಗೆ ಅಧುನಿಕ ಭಾರತದ ನಿರ್ಮಪಕರಾದ ಮಹಾತ್ಮ ಜ್ಯೋತಿಭಾ ಫುಲೆ, ವಿದ್ಯಾಸಾಗರ ಮುಂತಾದವರನ್ನು ದೂರ ಇಟ್ಟಿದೆ. ಈ ನಿಟ್ಟಿನಲ್ಲಿ ಇದು ರಾಷ್ಟ್ರೀಯ ನೀತಿ ಆಗಲು ಹೇಗೆ ಸಾಧ್ಯ? ಸರಕಾರವು ಅದ್ಯಾವ ಭಾರತ ಕೇಂದ್ರೀಕೃತ ಶಿಕ್ಷಣ ನೀತಿ ರೂಪಿಸಲು ಹೊರಟಿದೆ? ಎಂದು ಪ್ರಶ್ನಿಸಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯು ಸಾರ್ವಜನಿಕರ, ಶಿಕ್ಷಣ ಪ್ರೇಮಿಗಳ, ಸಂಘ-ಸಂಸ್ಥೆಗಳ ಅಭಿಪ್ರಾಯ, ಸಲಹೆಗಳನ್ನು ಒಳಗೊಂಡಿಲ್ಲ. ಆದುದರಿಂದ ನೀತಿಯನ್ನು ಶಿಕ್ಷಣ ಕ್ಷೇತ್ರದ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ' ಎಂದು ದೂರಿದರು.

ಡಾ.ಶಾಮಸುಂದರ್ ದೀಪ್ತಿ ಮಾತನಾಡಿ, ನೂತನ ಶಿಕ್ಷಣ ನೀತಿ ಜಾರಿಯಾದರೆ, ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೂ ವ್ಯಾಪಾರಿಕರಣವಾಗಲಿದೆ. ಅದರಲ್ಲೂ ವೈದ್ಯಕೀಯ ಶಿಕ್ಷಣವಂತೂ ಜನಸಾಮಾನ್ಯರು ಕನಸಿನಲ್ಲೂ ಕಾಣಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಜೊತೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಪುರಾಣದ ಕಥೆಗಳನ್ನು ವೈಜ್ಞಾನಿಕ ಸಂಗತಿಗಳೆಂಬಂತೆ ಚಿತ್ರಿಸಲಾಗುತ್ತಿದೆ. ಆದುದರಿಂದ ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ವಿರೋಧಿಸಬೇಕು ಎಂದರು. 

ಜೆಎನ್‍ಯುನ ಪ್ರೊ.ಎ.ಕೆ.ರಾಮಕೃಷ್ಣನ್ ಮಾತನಾಡಿ, ನೂತನ ಶಿಕ್ಷಣ ನೀತಿಯು ಜನಸಾಮಾನ್ಯರನ್ನು ಹಾಗೂ ಬಡಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತದೆ. ಅಲ್ಲದೆ, ನೂತನ ಶಿಕ್ಷಣ ನೀತಿಯು ಬಡವರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವುದನ್ನೇ ಕಾನೂನುಬದ್ದಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಇದೇ ವೇಳೆ ಆಪಾದಿಸಿದರು.  

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಷ್ಟ್ರಾಧ್ಯಕ್ಷ ಪ್ರಕಾಶ್ ಭಾಯ್ ಶಾ, ಪ್ರಧಾನ ಕಾರ್ಯದರ್ಶಿ ಆನಿಸ್ ಕುಮಾರ್ ರಾಯ್, ಇರ್ಫಾನ್ ಹಬೀಬ್, ರಾಮ್ ಪುನಿಯಾನಿ, ಪ್ರೊ.ರವಿವರ್ಮ ಕುಮಾರ್, ಪ್ರೊ. ಮುರಿಗೆಪ್ಪ, ರೋಮಿಲಾ ಥಾಪರ್, ಸುಖದೇವ ಥೋರಟ್, ಕರುಣಾನಂದನ್, ಜವಾಹರ್ ನೇಸನ್, ಚಂದ್ರಶೇಖರ ಚಕ್ರವರ್ತಿ ಸಚ್ಚಿದಾನಂದ ಸಿನ್ಹಾ ಪಾಲ್ಗೊಂಡಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News