ಕನ್ನಡದ ಸಾರ್ವಭೌಮತ್ವಕ್ಕಾಗಿ ಕನ್ನಡಿಗರು ಸರಕಾರದ ಹಂಬಲಕ್ಕೆ ಕೈಜೋಡಿಸಬೇಕು: ಗೃಹಸಚಿವ ಆರಗ ಜ್ಞಾನೇಂದ್ರ
ಚಿಕ್ಕಮಗಳೂರು.ನ.01: ಕನ್ನಡ ಭಾಷೆ ಕರ್ನಾಟಕದಲ್ಲಿ ಸಾರ್ವಭೌಮತ್ವವನ್ನು ಪಡೆಯಬೇಕಾದರೆ ಸರ್ವ ಕನ್ನಡಿಗರ ಸಂಕಲ್ಪ ಸರಕಾರದ ಹಂಬಲದೊಂದಿಗೆ ಜೊತೆಗೂಡಬೇಕಾಗುತ್ತದೆ. ಹಾಗಾದಾಗ ಮಾತ್ರ ಕನ್ನಡದ ಮತ್ತೊಂದು ಪರ್ವಕಾಲವನ್ನು ಆರಂಭಿಸಲು ಸಾಧ್ಯವಾಗುತ್ತದೆ. ಆಧುನಿಕ ತಂತ್ರಜ್ಞಾನ ಬದಲಾದ ಸಾಮಾಜಿಕ ಚಿತ್ರಣ, ಪರಭಾμÉಗಳ ಭೋರ್ಗರೆತದ ಮಧ್ಯೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ 66ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಸಂದರ್ಭ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಎರಡೂವರೆ ಸಾವಿರ ವರ್ಷಗಳ ಹಿರಿಮೆಯನ್ನು ಹೊಂದಿರುವ ನಮ್ಮ ಕನ್ನಡ ನಾಡಿನಲ್ಲಿ ಭುವನೇಶ್ವರಿಯನ್ನು ಕರುನಾಡ ದೇವಿಯಾಗಿ ಆರಾಧಿಸಿ ಕೊಂಡು ಬರುತ್ತಿದ್ದೇವೆ. ಕನ್ನಡಿಗರಿಗೆ ಕನ್ನಡ ಎಂದರೆ ಬರಿ ನುಡಿ ಅಲ್ಲ. ಅದು ಜೀವ, ಭಾವ, ಉಸಿರು. ಕನ್ನಡವೇ ಸತ್ಯ ಎಂದ ಭಾವನೆ ಕನ್ನಡಿಗರ ಎದೆಯಲ್ಲಿ ಸದಾ ಹಸಿರಾಗಿರಲಿದೆ ಎಂದರು.
ಕರುನಾಡು ಎಂಬ ಪದಕ್ಕೆ ಎತ್ತರದ ಭೂಭಾಗ ಎನ್ನುವ ಅರ್ಥ ಇದೆ. ಕರ್ನಾಟಕದ ಜನತೆ ನಿಜಕ್ಕೂ ಎಲ್ಲಾ ಅರ್ಥದಲ್ಲೂ ಎತ್ತರದ ಗೌರವದ ಸ್ಥಾನ ಮಾನಗಳಿಗೆ ಸದಾ ಅರ್ಹರಾಗಿದ್ದಾರೆ. ಕನ್ನಡ ಮಾತನಾಡುವ ಜನರೆಲ್ಲಾ ಒಂದುಗೂಡಲು, ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದು ಮಾಡಲು ಕರ್ನಾಟಕದ ಕುಲಪುರೋಹಿತರಾದ ಆಲೂರು ವೆಂಕಟರಾಯರ ಜೊತೆಗೂಡಿ ಅಸಂಖ್ಯಾತ ಕನ್ನಡಿಗರು, ಕನ್ನಡಾಭಿಮಾನಿಗಳು ಮಾಡಿದ ಹೋರಾಟದ ಫಲ ಇಂದು ರಾಜ್ಯೋತ್ಸವವೆಂಬ ಸಡಗರವನ್ನು ಆಚರಿಸಲು ಕಾರಣವಾಗಿದೆ ಎಂದು ಹೇಳಿದರು.
ಎರಡೂವರೆ ಸಾವಿರ ವರ್ಷಗಳ ಘನ ಇತಿಹಾಸದ ಹೆಗ್ಗಳಿಕೆಯನ್ನು ಹೊಂದಿರುವ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಎನ್ನುವ ಗೌರವವೂ ಸಿಕ್ಕಿದೆ. ಆದರೆ ಭಾಷೆ ನಿರಂತರವಾಗಿ ಬಳಕೆಯಾಗುತ್ತಿದ್ದರೆ ಮಾತ್ರ. ಅದರ ಸೊಬಗು, ಸೌಂದರ್ಯ, ಅದರ ಅಭಿಮಾನಗಳು ಹೆಚ್ಚಾಗುವುದು, ಭಾಷೆಯ ಬಗ್ಗೆ ಉದಾಸೀನ ಮಾಡಿದರೆ ಆ ಭಾಷೆ ಸೊರಗಿ ಕ್ರಮೇಣ ಕಣ್ಮರೆಯಾಗಿ ಹೋಗುತ್ತದೆ. ಕನ್ನಡದ ಸಂಬಂಧವಾಚಕ ಪದಗಳನ್ನಷ್ಟೇ ಗಮನಿಸಿದರೆ ಸಾಕು. ಕನ್ನಡದ ಶಕ್ತಿ ಎಷ್ಟು ಬಲವಾಗಿದೆ ಎಂದು ಮನವರಿಕೆ ಆಗುತ್ತದೆ. ಇಂತಹ ನುಡಿಗಳು ನಮ್ಮ ಭಾಷೆಯ ಅಮೂಲ್ಯ ಆಸ್ತಿ. ಇದು ಸರಿಯಾಗಿ ಬಳಕೆ ಆಗದೆ ಹೋದರೆ ಇವು ಸ್ಮತಿಯಿಂದ ಮರೆಯಾಗಿ ಹೋಗುತ್ತವೆ ಎಂಬುದು ಸತ್ಯ ಎಂದರು.
ಅಪಾರವಾದ ನೈಸರ್ಗಿಕ ಚೆಲುವನ್ನು ಪಡೆದು ಹಸಿರು ಸಿರಿಯಿಂದ ಕಂಗೊಳಿಸುತ್ತಿರುವ ಚಿಕ್ಕಮಗಳೂರು ಜಿಲ್ಲೆಗೆ ಪ್ರಕೃತಿದೇವಿಯ ಮುನಿಸನ್ನು ತಣಿಸಿ ಹೊಸ ಬದುಕಿಗೆ ಅಣಿಯಾಗುವ ಪ್ರವೃತ್ತಿ ಇಲ್ಲಿ ಸದಾ ಜಾಗೃತವಾಗಿದೆ. ಚಿಕ್ಕಮಗಳೂರಿನ ಸಂಸ್ಕೃತಿ, ಪರಂಪರೆ, ಇತಿಹಾಸಗಳಿಗೆ ಭವ್ಯವಾದ ಆಯಾಮಗಳಿವೆ. ಕನ್ನಡದ ಮೊದಮೊದಲ ಶಾಸನಗಳಲ್ಲಿ ಒಂದಾದ ಹಲ್ಮಿಡಿ ಶಾಸನದಲ್ಲಿ ನಮ್ಮ ಜಿಲ್ಲೆಯ ಮುಗುಳುವಳ್ಳಿಯ ಹೆಸರಿನ ಉಲ್ಲೇಖವಿದೆ. ಕನ್ನಡ ನಾಡಿನ ಮೊದಲ ಸಾಮ್ರಾಟರು ಎಂದೇ ಹೆಸರಾದ ಹೊಯ್ಸಳರ ಆರಂಭದ ನೆಲೆ ಮೂಡಿಗೆ ತಾಲೂಕಿನ ಅಂಗಡಿ ಗ್ರಾಮವಾಗಿದೆ. ಆಸಂದಿಯ ಗಂಗರು, ಸಾಂತಾರರು , ಸೇವುಣರು, ಕಳಸ, ಕಾರ್ಕಾಳ, ಪ್ರಭುಗಳು, ದಾನಿವಾಸ ಪ್ರಭುಗಳು, ತರೀಕೆರೆ ಮತ್ತಿತರ ಕಡೆಯ ಪಾಳೆಯಗಾರರು, ಆಳರಸರು ಚಿಕ್ಕಮಗಳೂರು ಪ್ರಾಂತ್ಯಕ್ಕೆ ವಿಶೇಷವಾದ ಕೊಡುಗೆಗಳನ್ನು ಸಲ್ಲಿಸಿದ್ದಾರೆ ಸ್ಮರಿಸಿದರು.
ಕನ್ನಡಿಗರು ಕನ್ನಡದಲ್ಲೇ ಮಾತನಾಡುತ್ತೇವೆ, ಕನ್ನಡದಲ್ಲೇ ಬರೆಯುತ್ತೇವೆ, ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇವೆ, ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇವೆ, ಕನ್ನಡ ನಾಡು ನುಡಿ ಸಂಸ್ಕøತಿ ಹಾಗೂ ಪರಂಪರೆ ಉಳಿಸಲು ಕಟಿಬದ್ಧರಾಗುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸಿರುವ ಈ ಬಾರಿಯ ಕನ್ನಡ ರಾಜ್ಯೋತ್ಸವ ಕನ್ನಡದ ನಿತ್ಯೋತ್ಸವವಾಗಿದೆ. ಕನ್ನಡದ ಸಿರಿವಂತಿಕೆಯನ್ನು ಬೆಳಗಿ ಕೀರ್ತಿಶೇಷರಾದವರನ್ನು ನೆನೆಯುವುದರ ಜೊತೆಗೆ ನಾಡಿಗೆ ಅವರು ಕೊಟ್ಟ ಕೊಡುಗೆ, ಜೀವನಾದರ್ಶವನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಶಾಸಕ ಸಿ.ಟಿ.ರವಿ, ವಿಧಾನ ಪರಿಷತ್ ಶಾಸಕ ಭೋಜೆಗೌಡ, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಪಂ ಸಿಇಒ ಜಿ.ಪ್ರಭು, ಎಸ್ಪಿ ಅಕ್ಷಯ್ ಎಂ.ಎಚ್, ಎಡಿಸಿ ಬಿ.ಆರ್. ರೂಪಾ, ಎಸಿ ಡಾ.ಎಚ್.ಎಲ್.ನಾಗರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಪ್ರಶಿಕ್ಷಣಾರ್ಥಿ ಮಹಿಳಾ ಪೊಲೀಸ್, ಅರಣ್ಯ ದಳ, ಗೃಹರಕ್ಷಕ ದಳದವರಿಂದ ಆಕರ್ಷಕ ಪಥಸಂಚಲ ನಡೆಸಲಾಯಿತು.
ಕರ್ನಾಟಕ ಚಲನಚಿತ್ರರಂಗದ ಯುವನಟರು ಹಾಗೂ ಯುವ ಜನತೆಗೆ ಸ್ಫೂರ್ತಿಯಾಗಿದ್ದ ರಾಷ್ಟ್ರಪ್ರಶಸ್ತಿ ಪುರಸ್ಕøತರಾದ ಇದೇ ಜಿಲ್ಲೆಯ ಸಂಚಾರಿ ವಿಜಯ್ ಮತ್ತು ಜಿಲ್ಲೆಯ ಅಳಿಯನಾಗಿದ್ದ ಪುನೀತ್ ರಾಜ್‍ಕುಮಾರ್ ಅªರ ಅಕಾಲಿಕ ಮರಣವು ಕನ್ನಡ ಜನತೆಗೆ ಆಘಾತವನ್ನುಂಟು ಮಾಡಿದೆ. ಪ್ರಸಕ್ತ ಇಡೀ ರಾಜ್ಯ ಈ ಘಟನೆಗಳಿಂದಾಗಿ ಶೋಕತಪ್ತವಾಗಿದೆ. ಅಗಲಿದ ನಟರುಗಳ ಆತ್ಮಕ್ಕೆ ಚಿರಶಾಂತಿ ಸಿಗಲಿ. ಮೃತರ ಕುಟುಂಬಸ್ಥರಿಗೆ, ಅಭಿಮಾನಿ ಸಮೂಹಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭುವನೇಶ್ವರಿ ದೇವಿ ನೀಡಲಿ.
- ಆರಗಜ್ಞಾನೇಂದ್ರ, ಗೃಹ ಸಚಿವ